ಜಲಾಲಾಬಾದ್‌ನಲ್ಲಿ ಆತ್ಮಹತ್ಯಾ ದಾಳಿ: 13 ಸಾವು
ಕಾಬೂಲ್, ಜ.17: ಅಫ್ಘಾನಿಸ್ತಾನದ ಪೂರ್ವದ ನಗರ ಜಲಾಲಾಬಾದ್‌ನಲ್ಲಿನ ಪ್ರಮುಖ ರಾಜಕಾರಣಿಯೊಬ್ಬರ ಮನೆಯಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಹಾಗೂ 14 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಅಧಿಕಾರಿಯೊಬ್ಬರು ರವಿವಾರ ತಿಳಿಸಿದರು.
ರಾಜಕಾರಣಿ ಉಬೈದುಲ್ಲಾ ಶಿನ್ವಾರಿ ನಿವಾಸದ ಆವರಣದಲ್ಲಿ ರವಿವಾರ ಬೆಳಗ್ಗೆ ಸುಮಾರು 10:30ಕ್ಕೆ ಆತ್ಮಹತ್ಯಾ ಬಾಂಬರ್ ತನ್ನ ಬಟ್ಟೆಯಲ್ಲಿ ಅಡಗಿಸಿಕೊಂಡಿದ್ದ ಸ್ಫೋಟಕಗಳನ್ನು ಸ್ಫೋಟಿಸಿದನು ಎಂದು ನಂಗರ್‌ಹಾರ್ ರಾಜ್ಯ ಸರಕಾರದ ವಕ್ತಾರ ಅತಾವುಲ್ಲಾ ಖಯೋಗನಿ ತಿಳಿಸಿದರು.
ಶಿನ್ವಾರಿ ನಂಗರ್‌ಹಾರ್ ರಾಜ್ಯದ ವಿಧಾನಸಭೆಯ ಸದಸ್ಯರಾಗಿದ್ದಾರೆ ಹಾಗೂ ಅವರ ಕುಟುಂಬ ಸ್ಥಳೀಯ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯವಾಗಿದೆ.
ಅವರ ತಂದೆ ಮಲಿಕ್ ಉಸ್ಮಾನ್ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಶಿನ್ವಾರಿ ಜಿಲ್ಲೆಯ ಪ್ರಭಾವಿ ಸಮುದಾಯ ನಾಯಕರಾಗಿದ್ದಾರೆ. ಈ ವಲಯದಲ್ಲಿ ಇರುವ ಐಸಿಸ್‌ನ ಉಪಸ್ಥಿತಿಯನ್ನು ಅವರು ವಿರೋಧಿಸಿದ್ದರು.
ಶಿನ್ವಾರಿಯ ಮನೆಯಲ್ಲಿ ಸಮಾರಂಭವೊಂದು ನಡೆಯುತ್ತಿದ್ದು ಅಲ್ಲಿ ತುಂಬಾ ಮಂದಿ ನೆರೆದಿದ್ದರು. ಇದೇ ಸಂದರ್ಭದಲ್ಲಿ ಅಲ್ಲ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ.
ಮೃತರ ಸಂಖ್ಯೆ ಇನ್ನೂ ಹೆಚ್ಚಬಹುದೆಂದು ವಕ್ತಾರರು ತಿಳಿಸಿದರು.
ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಬಾಂಬ್ ಸ್ಫೋಟವನ್ನು ಖಂಡಿಸಿದ್ದಾರೆ. ‘‘ಯುದ್ಧ ಭೂಮಿಯಲ್ಲಿ ಅಫ್ಘಾನ್ ಪಡೆಗಳನ್ನು ಎದುರಿಸಲು ಸಾಧ್ಯವಾಗದ ಭಯೋತ್ಪಾದಕರು ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ’’ ಎಂದು ಹೇಳಿಕೆಯೊಂದರಲ್ಲಿ ಅವರು ತಿಳಿಸಿದರು.