×
Ad

ರೋಹಿತ್ ಆತ್ಮಹತ್ಯೆ: ಹರಡಿದ ಪ್ರತಿಭಟನೆಯ ಕಿಚ್ಚು - ಸಚಿವ ದತ್ತಾತ್ರೇಯ ಉಚ್ಚಾಟನೆಗೆ ಹೆಚ್ಚಿದ ಒತ್ತಡ

Update: 2016-01-19 21:32 IST

ಹೊಸದಿಲ್ಲ, ಜ.19: ಹೈದರಾಬಾದ್‌ನ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಘಟನೆಯ ವಿರುದ್ಧ ಪ್ರತಿಭಟನೆಯ ಕಿಚ್ಚು ಮಂಗಳವಾರ ದೇಶದ ವಿವಿಧ ನಗರಗಳಿಗೂ ಹರಡಿದೆ. ವಿದ್ಯಾರ್ಥಿಯ ಆತ್ಮಹತ್ಯೆಗೆ, ಕಾರಣರಾದರೆಂಬ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯರನ್ನು ಉಚ್ಚಾಟಿಸುವಂತೆ ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮೇಲೆ ಒತ್ತಡ ಹೇರಿವೆ.
   ರೋಹಿತ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಉಪಕುಲಪತಿ ರಾಜೀನಾಮೆ ನೀಡುವ ತನಕ ತರಗತಿಗಳನ್ನು ನಡೆಸಲು ಅವಕಾಶ ನೀಡುವುದಿಲ್ಲವೆಂದು ಹೈದರಾಬಾದ್ ವಿವಿಯ ವಿದ್ಯಾರ್ಥಿ ಕ್ರಿಯಾ ಸಮಿತಿಯ ನಾಯಕಿ ಅರ್ಪಿತಾ ಹೇಳಿದ್ದಾರೆ. ಆತ್ಮಹತ್ಯೆ ಪ್ರಕರಣದ ತನಿಖೆಗೆ ಮಾನವಸಂಪನ್ಮೂಲಾಭಿವೃದ್ಧಿ ಸಚಿವಾಲಯ ರಚಿಸಿರುವ ದ್ವಿಸದಸ್ಯ ಸಮಿತಿಯನ್ನು ವಿದ್ಯಾರ್ಥಿ ಕ್ರಿಯಾ ಸಮಿತಿ ಭೇಟಿ ಮಾಡುವ ನಿರೀಕ್ಷೆಯಿದೆ.
 ಈ ಮಧ್ಯೆ, ಹೈದರಾಬಾದ್‌ನ ರಾಮನಗರ್‌ನಲ್ಲಿರುವ ಸಚಿವ ದತ್ತಾತ್ರೇಯ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಟಿಆರ್‌ಎಸ್ ಪಕ್ಷದ ಯುವ ಜಾಗೃತಿ ಮೋರ್ಚಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ, ಪುಣೆಯ ಚಲನಚಿತ್ರ ಹಾಗೂ ಟೆಲಿವಿಶನ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಮಂಗಳವಾರ ಉಪವಾಸ ಮುಷ್ಕರ ನಡೆಸಿದರು. ಮುಂಬೈಯಲ್ಲಿ ನೂರಾರು ವಿದ್ಯಾರ್ಥಿಗಳು ಮುಂಬೈ ವಿವಿಯ ಕಾರ್ಯಾಲಯದ ಮುಂದೆ ಧರಣಿ ನಡೆಸಿದರು.
    ರೋಹಿತ್ ಆತ್ಮಹತ್ಯೆಯನ್ನು ಪ್ರತಿಭಟಿಸಿ, ಮಹಾರಾಷ್ಟ್ರದ ವಿವಿಧೆಡೆ ಎನ್‌ಸಿಪಿಯ ವಿದ್ಯಾಥಿಘಟಕವು ಪ್ರತಿಭಟನೆಗಳನ್ನು ನಡೆಸಿತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ಮಂಗಳವಾರ ಹೈದರಾಬಾದ್‌ಗೆ ಆಗಮಿಸಿ ವಿವಿಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿಯಾದರು. ರೋಹಿತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸತ್ಯಶೋಧನಾ ತಂಡಗಳನ್ನು ಕಳುಹಿಸುವುದಾಗಿ ಬಿಎಸ್‌ಪಿ, ಟಿಎಂಸಿ ಹಾಗೂ ಸಿಪಿಎಂ ಪ್ರತ್ಯಪ್ರತ್ಯೇಕವಾಗಿ ಘೋಷಿಸಿವೆ.
 26 ವರ್ಷದ ರೋಹಿತ್ ವೇಮುಲಾನ ಆತ್ಮಹತ್ಯೆಗೆ ಪ್ರಚೋದನೆ ನೀಡಿದರೆಂಬ ಆರೋಪದಲ್ಲಿ ಹೈದರಾಬಾದ್ ಪೊಲೀಸರು, ಕೇಂದ್ರ ಸಚಿವ ದತ್ತಾತ್ರೇಯ,ಹೈದರಾಬಾದ್ ವಿವಿಯ ಉಪಕುಲಪತಿ ಅಪ್ಪಾರಾವ್ ಹಾಗೂ ಎಬಿವಿಪಿಯ ಇಬ್ಬರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಬಿವಿಪಿ ನಾಯಕನೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ರೋಹಿತ್ ವೇಮುಲಾ ಸಹಿತ ಐವರು ಸಂಶೋಧನಾ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿತ್ತು.
 ವಿವಿಯು, ಜಾತಿವಾದಿ, ತೀವ್ರವಾದಿ ಹಾಗೂ ದೇಶದ್ರೋಹಿ ರಾಜಕೀಯದ ಕಾರಾಸ್ಥಾನವಾಗಿದೆಯೆಂದು ಆರೋಪಿಸಿ ಸಚಿವ ಬಂಡಾರು ದತ್ತಾತ್ರೇಯ, ಕೇಂದ್ರ ಮಾನವಸಂಪನ್ಮೂಲಾಭಿವೃದ್ಧಿ ಸಚಿವೆ ಸ್ಮತಿ ಇರಾನಿ ಅವರಿಗೆ, ಪತ್ರವೊಂದನ್ನು ಬರೆದ ಬಳಿಕ ಈ ಐವರನ್ನು ಅಮಾನತುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News