×
Ad

ಹೊಸದಿಲ್ಲಿ: ಕೇಂದ್ರದ ಆದೇಶದಡಿ ಕಾರ್ಯ ನಿರ್ವಹಿಸದಂತೆ ದಿಲ್ಲಿ ಪೊಲೀಸರಿಗೆ ಹೈಕೋರ್ಟ್ ನಿರ್ದೇಶ

Update: 2016-01-20 22:08 IST

ಹೊಸದಿಲ್ಲಿ,ಜ.20: ಕೇಂದ್ರ ಸರಕಾರದ ಆದೇಶದಡಿ ಕಾರ್ಯ ನಿರ್ವಹಿಸದಂತೆ ಬುಧವಾರ ದಿಲ್ಲಿ ಪೊಲೀಸರಿಗೆ ನಿರ್ದೇಶ ನೀಡಿದ ದಿಲ್ಲಿ ಉಚ್ಚ ನ್ಯಾಯಾಲಯವು, ಪಡೆಯಲ್ಲಿ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಲು ಹಣಕಾಸನ್ನು ಬಿಡುಗಡೆಗೊಳಿಸದ್ದಕ್ಕೆ ಕೇಂದ್ರವನ್ನು ತರಾಟೆಗೆತ್ತಿಕೊಂಡಿತು.

ಗೃಹ ಸಚಿವಾಲಯವು ಹಸಿರು ನಿಶಾನೆಯನ್ನು ತೋರಿಸಿದ್ದರೂ ದಿಲ್ಲಿಯಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳ ನೇಮಕಾತಿಗಾಗಿ ನಿಗದಿತ ಮೊತ್ತವನ್ನು ಬಿಡುಗಡೆ ಮಾಡಿಲ್ಲವೇಕೆ ಎಂದು ನ್ಯಾಯಮೂರ್ತಿಗಳಾದ ಬಿ.ಡಿ.ಅಹ್ಮದ್ ಮತ್ತು ಸಂಜೀವ ಸಚದೇವ ಅವರ ಪೀಠವು ಕೇಂದ್ರ ವಿತ್ತ ಸಚಿವಾಲಯದ ವೆಚ್ಚ ಇಲಾಖೆಯನ್ನು ಪ್ರಶ್ನಿಸಿತು.

ತನಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ ಅಗತ್ಯವಿದೆಯೆಂದು ಕೇಂದ್ರ ಸರಕಾರಕ್ಕೆ ಒತ್ತಾಯಪೂರ್ವಕವಾಗಿ ತಿಳಿಸುವಂತೆ ಪೀಠವು ದಿಲ್ಲಿ ಪೊಲೀಸ್‌ಗೆ ಸೂಚಿಸಿತು. ದಿಲ್ಲಿ ಪೊಲೀಸ್ ಇಲಾಖೆಯು ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿದೆ.

ದಿಲ್ಲಿ ಪೊಲೀಸರು ಕೇಂದ್ರದ ಆದೇಶದಡಿ ಕೆಲಸ ಮಾಡಬಾರದು. ಅವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ಇದು ತುಂಬ ಮಹತ್ವದ ವಿಷಯವಾಗಿದೆ. ಈ ಕುರಿತು ದಿಲ್ಲಿ ಪೊಲೀಸ್ ಆಕ್ರಮಣಕಾರಿ ನಿಲುವನ್ನು ತಳೆಯಬೇಕಾಗಿದೆ ಎಂದು ನ್ಯಾಯಾಲಯವು ಹೇಳಿತು.

ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿಯಾಗಿ 14,000 ಸಿಬ್ಬಂದಿಗಳನ್ನು ನೇಮಕಗೊಳಿಸುವಂತೆ ನ್ಯಾಯಾಲಯವು ತನ್ನ ಜುಲೈ 2013ರ ಆದೇಶದಲ್ಲಿ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಇದರಿಂದಾಗಿ ಬೊಕ್ಕಸದ ಮೇಲೆ 450 ಕೋ.ರೂ.ಹೆಚ್ಚುವರಿ ಹೊರೆ ಬೀಳುತ್ತದೆ.

ಕಾನೂನು ಮತ್ತು ಸುವ್ಯವಸ್ಥೆಯಿಂದ ಕ್ರಿಮಿನಲ್ ತನಿಖಾ ಪ್ರಕ್ರಿಯೆಯನ್ನು ಪ್ರತ್ಯೇಕಗೊಳಿಸಲು ದಿಲ್ಲಿ ಪೊಲೀಸ್ ಇಲಾಖೆಯಲ್ಲಿ 4,227 ಹುದ್ದೆಗಳಿಗೆ ತಾನು ಮಂಜೂರಾತಿಯನ್ನು ನೀಡಿರುವುದಾಗಿ ಕೇಂದ್ರ ಸರಕಾರವು ಡಿಸೆಂಬರ್,2015ರಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು.

4,227 ಹುದ್ದೆಗಳ ಸೃಷ್ಟಿಗೆ ತಾನು ಒಪ್ಪಿಕೊಂಡಿದ್ದು, 2016-17 ಮತ್ತು 2017-18ನೇ ಸಾಲುಗಳಲ್ಲಿ ಎರಡು ಹಂತಗಳಲ್ಲಿ ಇದನ್ನು ಕಾರ್ಯಗತಗೊಳಿಸುವುದಾಗಿ ವೆಚ್ಚ ಇಲಾಖೆಯು ಬುಧವಾರ ನ್ಯಾಯಾಲಯದಲ್ಲಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

 ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ದಿಲ್ಲಿ ಪೊಲೀಸ್ ಬಲವನ್ನು ಹೆಚ್ಚಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News