×
Ad

ರೋಹಿತ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ : ಸುಶೀಲ್‌ ಕುಮಾರ್‌

Update: 2016-01-21 16:38 IST

ಹೈದರಾಬಾದ್‌, ಜ.21: "ರೋಹಿತ್  ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ; ನನಗೆ ಅವರು  ತುಂಬಾ ಸಮಯದಿಂದ ಗೊತ್ತು. 2010ರಲ್ಲಿ ನನಗೆ ಅವರ ಪರಿಚಯ ಆಗಿತ್ತು.. ನಾವು ಭೇಟಿಯಾದಾಗ ಮತ್ತು ಫೇಸ್ ಬುಕ್‌ನಲ್ಲಿ ವಿವಿಧ ವಿಚಾರಗಳ ಬಗ್ಗೆ ನಮ್ಮೊಳಗೆ ಚರ್ಚೆ ನಡೆಯುತ್ತಿತ್ತು. ನಮ್ಮೊಳಗೆ ಸೈದ್ದಾಂತಿಕ  ಘರ್ಷಣೆ ಇತ್ತು. ಅದು ಬಿಟ್ಟರೆ ನಾವು ವೈಯಕ್ತಿಕವಾಗಿ ಚೆನ್ನಾಗಿದ್ದೆವು. ನಮ್ಮಲ್ಲಿ ದ್ವೇಷ ಇರಲಿಲ್ಲ " ಎಂದು ಪಿಎಚ್‌ಡಿ ವಿದ್ಯಾರ್ಥಿ ರೋಹಿತ್‌  ವಿವಿಯಿಂದ ಅಮಾನತುಗೊಂಡ ಪ್ರಕರಣದ ಕೇಂದ್ರ ಬಿಂದು ಎಬಿವಿಪಿ ಸದಸ್ಯ  ಸುಶೀಲ್‌ ಕುಮಾರ್‌ ಹೇಳಿದ್ಧಾರೆ.
" ರೋಹಿತ್‌ ನನ್ನಿಂದಾಗಿ ಆತ್ಮಹತ್ಯೆ ಮಾಡಿಕೊಂಡರೆಂದು   ವಿಶ್ವವಿದ್ಯಾಲಯದವರು  ಮತ್ತು   ರಾಜಕಾರಣಿಗಳು  ಪ್ರಚಾರ ಮಾಡುತ್ತಿದ್ದಾರೆ.ರೋಹಿತ್‌ ಆತ್ಮಹತ್ಯೆ ಸುದ್ದಿ ಕೇಳಿ ನನಗೆ ಆಘಾತ ಉಂಟಾಯಿತು. ಈ ಕಾರಣದಿಂದಾಗಿ ನಾನು ಮೂರು ದಿನಗಳಿಂದ ಮನೆಯಿಂದ ಹೊರಗೆ ಬರಲಿಲ್ಲ. " ಎಂದು ಸುಶೀಲ್‌ ಅಭಿಪ್ರಾಯಪಟ್ಟಿದ್ದಾರೆ.
ಮೂರು ದಿನಗಳ ಬಳಿಕ ಮೌನ ಮುರಿದು ಮಾತನಾಡಿರುವ ಸುಶೀಲ್‌ ಅವರು ರೋಹಿತ್ ಸಾವಿಗೆ ನಾನು ಕಾರಣ ಅಲ್ಲ. ರಾಜಕೀಯ ಆಟಕ್ಕೆ ಅವರು ಬಲಿಯಾಗಿದ್ದಾರೆ.ವಿವಿ ವಿದ್ಯಾರ್ಥಿಗಳು ರಾಜಕೀಯ ಲೀಡರ್‌ಗಳಂತೆ ವರ್ತಿಸುತ್ತಿದ್ದಾರೆ.ರೋಹಿತ್‌ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರಿಯಾದ ತನಿಖೆಯಾಗಬೇಕು. ಒಂದು ವೇಳೆ ನಾನು ತಪ್ಪುಗಾರನಾಗಿದ್ದರೆ ಕಾನೂನು ರೀತಿಯಲ್ಲಿ ಶಿಕ್ಷೆ ಎದುರಿಸಲು ಸಿದ್ದನಿರುವುದಾಗಿ ಸುಶೀಲ್‌ ಟಿವಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ಯಕೂಬ್ ಮಮೆನೊಗೆ ಗಲ್ಲು ಶಿಕ್ಷೆ ವಿಧಿಸಿದ ಪ್ರಕರಣವನ್ನು ಖಂಡಿಸಿ ಅಲ್ಲಲ್ಲಿ ಹಚ್ಚಲಾಗಿದ್ದ ಪೋಸ್ಟರ್‌ಗಳಲ್ಲಿರುವ ಬರಹವನ್ನು ಓದಿದ ಬಳಿಕ  ನಾನು ಫೇಸ್‌ ಬುಕ್‌ನಲ್ಲಿ  ಪ್ರತಿಕ್ರಿಯೆ ನೀಡಿದ್ದೆ. ಈ ಕಾರಣಕ್ಕಾಗಿ  ನನ್ನ  ಕೊಠಡಿಗೆ ಮಧ್ಯರಾತ್ರಿ  ನುಗ್ಗಿದ 30-40 ಮಂದಿಯ ತಂಡ  ಹಲ್ಲೆ ನಡೆಸಿತ್ತು. ಗಾಯಗೊಂಡು ನಾನು ಆಸ್ಪತ್ರೆ ಸೇರಿ ಹೊರ ಬಂದ ನಂತರ ಇಂತಹ ಘಟನೆಯೆ ನಡೆದಿಲ್ಲ ಹಾಗೂ ನಾನು ಹಲ್ಲೆಯ ನಾಟಕ ಮಾಡಿರುವುದಾಗಿ  ಶಿಕ್ಷಕ ಸಂಘದ ಕಾರ್ಯದರ್ಶಿ ತಥಾಗತಾ ಸೆನ್‌ಗುಪ್ತಾ ಹೇಳಿಕೆ ನೀಡಿದ್ದರು. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿತ್ತು, ಇದನ್ನು ಸಹಿಸಲಾಗದೆ ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಿದ್ದೆ "
"ನನಗೆ ಆಗಿರುವ ಅನ್ಯಾಯದ ಬಗ್ಗೆ ನನ್ನ ತಾಯಿ ಉಪಕುಲಪತಿ ಅವರನ್ನು ಕಚೇರಿಯಲ್ಲಿ ಭೇಟಿಯಾಗಿ ದೂರು ನೀಡಲು ಹೋದಾಗ ಅಲ್ಲಿ ವಿದ್ಯಾರ್ಥಿಗಳು ನನ್ನ ತಾಯಿಯೊಂದಿಗೆ ಕೆಟ್ಟದಾಗಿ ವರ್ತಿಸಿದರು. ಅಲ್ಲಿಯೂ ನನಗೆ ನ್ಯಾಯ ದೊರೆಯಲಿಲ್ಲ.  ಈ ಕಾರಣಕ್ಕಾಗಿ ಅಂತಿಮವಾಗಿ  ನಾನು ಬಿಜೆಪಿ ಎಂಪಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಅವರು ಘಟನೆಯ ಬಗ್ಗೆ ಎಚ್‌ಆರ್‌ಡಿ ಸಚಿವಾಲಯಕ್ಕೆ ಪತ್ರ ಬರೆದರು. ಎಚ್‌ಆರ್‌ಆರ‍್ಡಿ ಸಚಿವಾಲಯದಿಂದ ವಿವಿಗೆ ಸೂಕ್ತ ಕ್ರಮಕ್ಕಾಗಿ ಆದೇಶ ಬಂತು. ವಿಶ್ವವಿದ್ಯಾನಿಲಯವು ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಅಮಾನತು ಮಾಡಿತು. ಇದೇನು ದೊಡ್ಡ ಶಿಕ್ಷೆಯಲ್ಲ. ಎಬಿವಿಪಿ ನಾಯಕರು  ಹಲವು ಬಾರಿ  ಇಂತಹ ಅಮಾನತು ಸಜೆ ಅನುಭವಿಸಿದ್ದಾರೆ. " ಎಂದು ಸುಶೀಲ್‌ ಕುಮಾರ್‌ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News