ರೋಹಿತ್ ಪರ ಪ್ರತಿಭಟನೆ: ಹೈದರಾಬಾದ್ ವಿವಿಯ ಹತ್ತು ಮಂದಿ ದಲಿತ ಪ್ರೊಫೆಸರ್‌ಗಳ ರಾಜೀನಾಮೆ
ಹೈದರಾಬಾದ್, ಜ.21: ಆತ್ಮಹತ್ಯೆಗೈದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿ ಹೈದರಾಬಾದ್ ಕೇಂದ್ರೀಯ ವಿವಿಯ 10 ಮಂದಿ ಪ್ರೊಫೆಸರ್‌ಗಳು ತಮ್ಮ ಆಡಳಿತಾತ್ಮಕ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಈ ಪ್ರೊಫೆಸರ್‌ಗಳೆಲ್ಲ ಎಸ್ಸಿ-ಎಸ್ಟಿ ಸಮುದಾಯದವರಾಗಿದ್ದು, ರೋಹಿತ್‌ರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಹಮತ ವ್ಯಕ್ತಪಡಿಸುವುದಕ್ಕಾಗಿ ಅವರು ಈ ರಾಜೀನಾಮೆಗಳನ್ನು ನೀಡಿದ್ದಾರೆ.
ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಕಪೋಲ ಕಲ್ಪಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರೋಹಿತ್ ಹಾಗೂ ಇತರ ನಾಲ್ವರು ವಿದ್ಯಾರ್ಥಿಗಳಿಗೆ ಶಿಕ್ಷೆಯನ್ನು ನಿರ್ಧರಿಸಿದ್ದ ಸಮಿತಿಯಲ್ಲಿ ದಲಿತ ಪ್ರಾಧ್ಯಾಪಕರೊಬ್ಬರೂ ಇದ್ದರೆಂದು ಅವರು ಸುಳ್ಳು ಹೇಳಿದ್ದಾರೆಂದು ಹೇಳಿಕೆಯೊಂದರಲ್ಲಿ ಪ್ರೊಫೆಸರ್‌ಗಳು ಆರೋಪಿಸಿದ್ದಾರೆ.
ಹೈದರಾಬಾದ್ ವಿವಿ ಸ್ಥಾಪನೆಯಾದ ಬಳಿಕ ಅದರ ಕಾರ್ಯಕಾರಿ ಸಮಿತಿಯಲ್ಲಿ ದಲಿತರಿಗೆ ಪ್ರಾತಿನಿಧ್ಯ ನೀಡದಿರುವುದು ದುರದೃಷ್ಟಕರ ಎಂದಿರುವ ಅವರು, ಸಚಿವೆ ‘ದೇಶದ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಹಾಗೂ ತನ್ನನ್ನು ಹೊಣೆಯಿಂದ ಮುಕ್ತಗೊಳಿಸಿಕೊಳ್ಳಲು ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆಂದು ದೂರಿದ್ದಾರೆ.
ಸಮಿತಿಗೆ ಮೇಲ್ಜಾತಿಯ ಪ್ರೊಫೆಸರ್ ಇಬ್ಬರು ಮುಖ್ಯಸ್ಥರಾಗಿದ್ದರು. ಅದರಲ್ಲಿ ಯಾವನೇ ದಲಿತ ಪ್ರಾಧ್ಯಾಪಕನಿರಲಿಲ್ಲವೆಂದು ವಿವಿಯ ಎಸ್ಸಿ-ಎಸ್ಟಿ ಪ್ರಾಧ್ಯಾಪಕರು ಹಾಗೂ ಅಧಿಕಾರಿಗಳ ವೇದಿಕೆ ಹೇಳಿದೆ.