ನೇತಾಜಿಯ 100 ಕಡತ: ಪ್ರಧಾನಿಯಿಂದ ಇಂದು ಬಿಡುಗಡೆ
Update: 2016-01-22 23:28 IST
ಹೊಸದಿಲ್ಲಿ, ಜ.22: ನೇತಾಜಿ ಸುಭಾಶ್ಚಂದ್ರ ಬೋಸರಿಗೆ ಸಂಬಂಧಿಸಿದ 100 ಕಡತಗಳ ಡಿಜಿಟಲ್ ಪ್ರತಿಗಳನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ. ನಾಳೆ ನೇತಾಜಿಯ ಜನ್ಮ ಜಯಂತಿಯಾಗಿದೆ.
ಭಾರತದ ರಾಷ್ಟ್ರೀಯ ಪತ್ರಾಗಾರವು(ಎನ್‌ಎಐ), ಪ್ರಾಥಮಿಕ ಸಂರಕ್ಷಣಾ ಪ್ರಕ್ರಿಯೆ ಹಾಗೂ ಡಿಜಿಟಲೈಸೇಶನ್‌ನ ಬಳಿಕ ನೇತಾಜಿ ಸುಭಾಶ್ಚಂದ್ರ ಬೋಸರಿಗೆ ಸಂಬಂಧಿಸಿದ 100 ಕಡತಗಳನ್ನು ಬಹಿರಂಗಪಡಿಸುತ್ತಿದೆ. ನೇತಾಜಿಯವರ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಈ ಕಡತಗಳನ್ನು ಸಾರ್ವಜನಿಕರಿಗೆ ಬಿಡುಗಡೆಗೊಳಿಸಲಿದ್ದಾರೆಂದು ಅಧಿಕೃತ ಹೇಳಿಕೆಯೊಂದು ಇಂದು ತಿಳಿಸಿದೆ.
ಈ ಕಡತಗಳನ್ನು ಪಡೆಯುವ ಸಾರ್ವಜನಿಕ ಬೇಡಿಕೆ ಹಾಗೂ ವಿದ್ವಾಂಸರಿಗೆ ಬೋಸರ ಬಗ್ಗೆ ಹೆಚ್ಚಿನ ಸಂಶೋಧನೆಗೆ ಸಹಾಯ ಮಾಡುವ ಉದ್ದೇಶ ಇದರಿಂದ ಈಡೇರಲಿದೆಯೆಂದು ಅದು ತಿಳಿಸಿದೆ.
ಪ್ರತಿ ತಿಂಗಳು ಬೋಸರ 25 ಅವರ್ಗೀಕೃತ ಕಡತಗಳ ಡಿಜಿಟಲ್ ಪ್ರತಿಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಎನ್‌ಎಐ ಹೊಂದಿದೆ.