ಅಭಿವ್ಯಕ್ತಿ ಸ್ವಾತಂತ್ರ ಬಹುದೊಡ್ಡ ಜೋಕ್: ಕರಣ್
ಜೈಪುರ,ಜ.22: ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರವೆನ್ನುವುದುಒಂದು ತಮಾಷೆಯಾಗಿದೆ ಎಂದು ಖ್ಯಾತ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಹೇಳಿದ್ದಾರೆ. ಇವರ ಈ ಹೇಳಿಕೆ ಇದೀಗ ತೀವ್ರ ಪರವಿರೋಧ ಚರ್ಚೆಗೆ ಕಾರಣವಾಗಿದೆ. ಬಿಜೆಪಿಯ ಮುಖಂಡರು ಕರಣ್ ಹೇಳಿಕೆಯನ್ನು ಖಂಡಿಸಿದ್ದಾರೆ. ಜೈಪುರ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಶುಕ್ರವಾರ ಅವರು ಈ ಹೇಳಿಕೆಯನ್ನು ನೀಡಿದ್ದರು. ಅಭಿವ್ಯಕ್ತಿ ಸ್ವಾತಂತ್ರದ ಕುರಿತ ಮಾತು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಜೋಕ್ ಎಂದು ನಾನು ಭಾವಿಸಿದ್ದೇನೆ. ಪ್ರಜಾಪ್ರಭುತ್ವ ಎರಡನೆ ಅತ್ಯಂತ ದೊಡ್ಡ ಜೋಕ್ ಆಗಿದೆ. ನಮ್ಮದು ನಿಜಕ್ಕೂ ಪ್ರಜಾಪ್ರಭುತ್ವವೇ ಎಂದು ನಾನು ಅಚ್ಚರಿ ಪಡುತ್ತಿದ್ದೇನೆ.ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರವೆನ್ನುವುದು ಇದೆಯೇ? ಓರ್ವ ಚಿತ್ರ ನಿರ್ಮಾಪಕನಾಗಿ ತೆರೆಯ ಮೇಲೆ ನಾನೇನು ಚಿತ್ರಿಸುತ್ತೇನೋ ಅಥವಾ ಮುದ್ರಿತ ರೂಪದಲ್ಲಿ ನಾನೇನು ಹೇಳುತ್ತೇನೋ ಈ ಎಲ್ಲದರಲ್ಲಿ ಪ್ರತಿಯೊಂದು ಹಂತದಲ್ಲಿಯೂ ನನ್ನನ್ನು ಕಟ್ಟಿ ಹಾಕಿರುವಂತೆ ನನಗೆ ಭಾಸವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮೋದಿ ಸರಕಾರವು ಬುದ್ಧಿಜೀವಿಗಳ ವಿರೋಧಿಯಾಗಿದೆ. ಅದು ಪ್ರಗತಿಪರ ಧ್ವನಿಗಳನ್ನು ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಹೇಳಿದರೆ, ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವ ಮಹೇಶ್ ಶರ್ಮಾ ಅವರು, ಇಂದು ಇಡೀ ವಿಶ್ವವೇ ಭಾರತವನ್ನು ಅತ್ಯಂತ ಸಹಿಷ್ಣು ದೇಶವೆಂದು ಪರಿಗಣಿಸುತ್ತಿದೆ ಎಂದರು.