ಓಕ್ಲಾ ನಿವಾಸಿಗಳಿಗೆ ಆಹಾರ ನಿರಾಕರಿಸಿದ ಮೆಕ್ಡೊನಾಲ್ಡ್ !
ಹೊಸದಿಲ್ಲಿ: ರಾಜಧಾನಿ ನಗರ ಓಕ್ಲಾಕ್ಕೆ ನಾವು ಆಹಾರ ಡೆಲಿವರಿ ಮಾಡಲು ಇಚ್ಛಿಸುವುದಿಲ್ಲ ಎಂದು ತಿಳಿಸಿದ ಅಮೆರಿಕನ ಆಹಾರ ಕಂಪೆನಿ ಮೆಕ್‌ಡೊನಾಲ್ಡ್ ವಿರುದ್ಧ ಅಲ್ಪಸಂಖ್ಯಾತ ಆಯೋಗಕ್ಕೆ ದೂರು ನೀಡಲಾದ ಘಟನೆ ವರದಿಯಾಗಿದೆ. ಜಾತಿ ತಾರತಮ್ಯ ತೋರಿಸುತ್ತಿದೆ ಎಂದು ಆರೋಪಿಸಿ ಅದರ ಹೊಟೇಲ್‌ನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಓಕ್ಲಾ ನಿವಾಸಿಗಳು ಆಯೋಗಕ್ಕೆ ದೂರಿಕೊಂಡಿದ್ದಾರೆ. ಜನವರಿ ನಾಲ್ಕರಂದು ಓಕ್ಲಾ ನಿವಾಸಿ ತಾರಿಕ್ ಖಾನ್ ಮೆಕ್‌ಡೊನಾಲ್ಡ್‌ಗೆ ಕರೆ ಮಾಡಿ ಪಾರ್ಸೆಲ್ ಆರ್ಡರ್ ನೀಡಿದ್ದರು.
ಆದರೆ ಒಂದು ಗಂಟೆ ಕಳೆದರೂ ಆಹಾರವನ್ನು ಅವರಿಗೆ ಸಪ್ಲೈ ಮಾಡಲಾಗಿರಲಿಲ್ಲ. ಅದಕ್ಕೆ ಪುನಃ ಫೋನ್ ಮಾಡಿದಾಗ ರಿಸೆಪ್ಷನ್ ಎಕ್ಸಿಕ್ಯೂಟಿವ್ ಆ ಏರಿಯಾ ನೆಗಟಿವ್ ಲೀಸ್ಟ್‌ನಲ್ಲಿರುವುದರಿಂದ ಡೆಲವರಿ ಸಾಧ್ಯವಿಲ್ಲ ಎಂದು ತಿಳಿಸಿದ್ದನು. ಓಕ್ಲಾ ನಿವಾಸಿಗಳು ಈ ತಾರತಮ್ಯಕ್ಕೆ ಕಾರಣ ಕೇಳಿ ತಾರಿಕ್ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಆಯೋಗ ಮೆಕ್‌ಡೊನಾಲ್ಡ್‌ನಿಂದ ಸ್ಪಷ್ಟೀಕರಣ ಕೇಳಿ ನೋಟಿಸ್ ಕಳಿಸಿದೆ. ಆದರೆ ಕೆಲವು ಪ್ರದೇಶಗಳ ಮಾನದಂಡ ಪಾಲಿಸಿ ಆಹಾರ ವಿತರಣೆ ಮಾಡಲು ಆಗುವುದಿಲ್ಲ. ಆದುದರಿಂದ ಅಲ್ಲಿಗೆ ಆಹಾರ ಡೆಲಿವರಿ ನಡೆಸಿಲ್ಲ ಎಂಬ ಕಾರಣವನ್ನು ಮೆಕ್‌ಡೊನಾಲ್ಡ್ ನೀಡಿದೆ.