ದಲಿತರ ಅನುಭವ ದಲಿತೇತರರಿಗೆ ತಿಳಿಯದು: ಶ್ಯಾಂ ಬೆನಗಲ್
ಹೊಸದಿಲ್ಲಿ, ಜ.23: ‘‘ಭಾರತದಲ್ಲಿ ನೀವೊಬ್ಬ ಮೇಲ್ಜಾತಿಯ ಹಿಂದೂ ಆಗಿದ್ದರೆ, ದಲಿತ ಸಮುದಾಯದಿಂದ ಬಂದ ವ್ಯಕ್ತಿಯೊಬ್ಬನಿಗೆ ಏನಾಗುತ್ತಿದೆಯೆಂಬುದು ನಿಮಗೆ ಖಂಡಿತ ತಿಳಿಯಲಾರದು’’. ಇದು ಹಿರಿಯ ಚಿತ್ರ ನಿರ್ಮಾಪಕ ಶ್ಯಾಂ ಬೆನಗಲ್‌ರ ಮಾತುಗಳು.
ಮುಂಬೈಯಲ್ಲಿ ಬುಧವಾರ ನಡೆದ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ಚಿಂತನೆ ವಿನಿಮಯ ಕಾರ್ಯಕ್ರಮದಲ್ಲಿ ಅವರು ಹೈದರಾಬಾದ್ ವಿವಿಯಲ್ಲಿ ರೋಹಿತ್ ವೇಮುಲಾರ ಆತ್ಮಹತ್ಯೆಯ ಕುರಿತು ಮಾತನಾಡುತ್ತಿದ್ದರು.
‘‘ನಮ್ಮ ಜೀವನದಲ್ಲಿ ಜಾತಿ ಪಾತ್ರವಹಿಸುತ್ತದೆಂಬುದು ನಿಮಗೆ ತಿಳಿದಿದೆ. ನಾವದನ್ನು ಎದುರಿಸಲು ಶಕ್ತರಿರುವುದರಿಂದ ನಮ್ಮಲ್ಲಿ ಹೆಚ್ಚಿನವರು ಅದನ್ನು ನಿರ್ಲಕ್ಷಿಸುತ್ತೇವೆ. ದಲಿತರನ್ನು ಯಾವ ರೀತಿ ಕಾಣಲಾಗುತ್ತಿದೆ ಮತ್ತು ವಾಸ್ತವವಾಗಿ ಅವರ ಪ್ರಪಂಚ ಹೇಗಿದೆಯೆಂಬುದು ಅತ್ಯಲ್ಪ ಜನರಿಗಷ್ಟೇ ಗೊತ್ತು. ನಿಜವಾಗಿಯೂ ಇದೊಂದು ಸಮಸ್ಯೆ. ದಲಿತೇತರರು ಭಾರತದಲ್ಲಿ ದಲಿತರ ಅಸ್ತಿತ್ವದ ಬಗ್ಗೆ ಯೋಚಿಸುವುದಿಲ್ಲ ಅಥವಾ ಚಿಂತಿಸುವುದಿಲ್ಲ. ದಲಿತರ ಅನುಭವ ಕೇವಲ ದಲಿತರಿಗೆ ಸಂಬಂಧಿಸಿದುದೆಂಬ ಭಾವನೆಯಿದೆ. ಆದರೆ, ಆ ರೀತಿ ಇರಬಾರದು. ಅವರು ಪ್ರತಿಯೊಂದರ ಭಾಗವಾಗಿದ್ದಾರೆ ಹಾಗೂ ರಾಶಿಯ ಬುಡದಲ್ಲಿದ್ದಾರೆ. ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಈ ಹುಡುಗ ಅನುಭವಿಸಿದ ಸಮಸ್ಯೆಯನ್ನು ನಾನು ಅರ್ಥಮಾಡಿಕೊಳ್ಳ ಬಲ್ಲೆ’’ ಎಂದು ಬೆನಗಲ್ ಹೇಳಿದರು.
ಎಫ್‌ಟಿಐಐ ಬಿಕ್ಕಟ್ಟು, ರೋಹಿತ್ ಹಾಗೂ ಐವರು ಸಹ ವಿದ್ಯಾರ್ಥಿಗಳ ಅಮಾನತು ಇತ್ಯಾದಿಗಳನ್ನೆಲ್ಲ ನೋಡುವಾಗ ಸರಕಾರವು ವಿದ್ಯಾರ್ಥಿಗಳನ್ನು ರಾಜಕೀಯ ವಿರೋಧಿಗಳಂತೆ ಕಾಣುತ್ತಿದೆಯೇ? ಎಂಬ ಪ್ರಶ್ನೆಗೆ, ಆ ದಿಕ್ಕಿನಲ್ಲಿ ಯಾವುದೇ ಚಳವಳಿ ನಡೆಯುತ್ತಿದೆಯೆಂದು ತಾನು ಭಾವಿಸುತ್ತಿಲ್ಲ. ಎರಡೂ ವಿವಾದಗಳಲ್ಲಿ ಸರಕಾರ ಕೈಗೊಂಡ ಕ್ರಮ ಕೇವಲ ಕಾಕತಾಳೀಯ . ಎಫ್‌ಟಿಐಐ ವಿವಾದದ ಬಗ್ಗೆ ತಾನು ವಿದ್ಯಾರ್ಥಿಗಳೊಂದಿಗೆ ಒಂದು ನಿಶ್ಶರ್ತ ಸಭೆ ನಡೆಸುವಂತೆ ಸರಕಾರ ಹಾಗೂ ನಿಯೋಜಿತ ಅಧ್ಯಕ್ಷ ಗಜೇಂದ್ರ ಚೌಹಾಣ್‌ರಿಗೆ ಸಲಹೆ ನೀಡಿದ್ದೆ. ಅಲ್ಲಿ ಕೇವಲ 288 ವಿದ್ಯಾರ್ಥಿಗಳಿದ್ದಾರೆ. ಸಭೆ ನಡೆಸುವುದು ಸುಲಭವಾದೀತು. ಒಂದೊಮ್ಮೆ ಅವರನ್ನು ಸಂಸ್ಥೆಯೊಳಗೆ ಪ್ರವೇಶಿಸಲು ಬಿಡದಿದ್ದಲ್ಲಿ, ಅವರು ಬಾಗಿಲಲ್ಲೇ ಸಭೆ ನಡೆಸಲಿ. ಆದರೆ , ಅವರು ಒಬ್ಬರೇ ಹೋಗಬೇಕು ಹಾಗೂ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು ಅವಕಾಶ ನೀಡಬೇಕೆಂದು ಹೇಳಿದ್ದೆ. ಚೌಹಾಣ್ ಆಗಬಹುದು ಎಂದಿದ್ದರು. ಆದರೆ, ಅಲ್ಲಿ ಪೊಲೀಸರ ಉಪಸ್ಥಿತಿಯಿತ್ತು. ಗಲಾಟೆ ನಡೆದಿತ್ತು ಹಾಗೂ 25 ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿತ್ತೆಂದು ತನಗೆ ಬಳಿಕ ತಿಳಿಯಿತು. ಅದು ಅಗತ್ಯವೇ ಇರಲಿಲ್ಲ ಎಂದು ಅವರು ಉತ್ತರಿಸಿದರು.
ಅಧ್ಯಕ್ಷರು ಎಫ್‌ಟಿಐಐ ಸೊಸೈಟಿ ಹಾಗೂ ಸರಕಾರದ ನಡುವೆ ಕೇವಲ ಸೇತುವೆಯಂತೆ ಇರಬೇಕು. ಹಾಗಿರುವಾಗ, ಮೊದಲು ಈ ಎಲ್ಲ ಸಮಸ್ಯೆ ಏಕೆ ಸೃಷ್ಟಿಯಾಯಿತೆಂಬುದೇ ತನಗೆ ತಿಳಿಯದು. ಅವರು ಸಂಸ್ಥೆಯ ನಿರ್ದೇಶಕನಲ್ಲ, ಬೋಧಕರಲ್ಲ. ಆದುದರಿಂದ ಅವರು ಯಾವುದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವುದಿಲ್ಲವೆಂದು ಬೆನೆಗಲ್ ತಿಳಿಸಿದರು.