×
Ad

ನೇತಾಜಿ ವಿವಾದ: ಕಾಂಗ್ರೆಸ್- ಬಿಜೆಪಿ ಕೆಸರೆರಚಾಟ

Update: 2016-01-24 08:52 IST

ನವದೆಹಲಿ: ಭಾರತ ಸ್ವಾತಂತ್ರ್ಯ ಹೋರಾಟದ ಐಕಾನ್ ಎನಿಸಿದ್ದ ನೇತಾಜಿ ಸುಭಾಸ್‌ಚಂದ್ರ ಬೋಸ್ ಅವರ ಪರಂಪರೆಯ ಲಾಭ ಪಡೆಯಲು ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗುದ್ದಾಟ ಆರಂಭವಾಗಿದೆ.

ನೇತಾಜಿ ಸುಭಾಸ್‌ಚಂದ್ರ ಬೊಸ್ ಅವರ ವಿಚಾರದಲ್ಲಿ ಬಿಜೆಪಿ ಅನಗತ್ಯ ವಿವಾದ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಕೆಂಡ ಕಾರಿದೆ. ಬಿಜೆಪಿ ಇದಕ್ಕೆ ಪ್ರತಿಯಾಗಿ ದೇಶದ ಸ್ವಾತಂತ್ರ್ಯ ಯೋಧನ ಪರಂಪರೆಗೆ ಅಮಾನ ಮಾಡಿದ್ದಕ್ಕಾಗಿ ವಿರೋಧ ಪಕ್ಷ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಬೋಸ್ ಅವರನ್ನು ಯುದ್ಧಾಪರಾಧಿ ಎಂದು ಬಣ್ಣಿಸಿ ಬರೆದಿದ್ದರು ಎನ್ನಲಾದ ಪತ್ರವನ್ನು ಬಿಡುಗಡೆ ಮಾಡುವ ಮೂಲಕ ಅನಗತ್ಯ ವಿವಾದ ಸೃಷ್ಟಿಸಿದೆ ಎಂದು ಕಾಂಗ್ರೆಸ್ ಆಪಾದಿಸಿದೆ. "ಇದು ನಕಲಿ ಪತ್ರ ಹಾಗೂ ಕುಚೋದ್ಯದ್ದು. ಪಕ್ಷಕ್ಕೆ ಅವಹೇಳನ ಮಾಡುವ ಸಲುವಾಗಿ ಬಿಜೆಪಿ ಇದನ್ನು ಬಿಡುಗಡೆ ಮಾಡಿದೆ ಎಂದು ಪಕ್ಷದ ವಕ್ತಾರ ಆನಂದ ಶರ್ಮಾ ಆಪಾದಿಸಿದ್ದಾರೆ.

ಈ ಪತ್ರ ಎಲ್ಲ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನರೇಂದ್ರ ಮೋದಿಯವರು ಶನಿವಾರ ಬಿಡುಗಡೆ ಮಾಡಿದ ನೇತಾಜಿಗೆ ಸಂಬಂಧಿಸಿದ 100 ರಹಸ್ಯ ಕಡತಗಳಲ್ಲಿ ಈ ಬಗ್ಗೆ ಯಾವ ಉಲ್ಲೇಖವನ್ನೂ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಇದನ್ನು ಸೃಷ್ಟಿಸಲಾಗಿದ್ದು, ಜನರನ್ನು ತಪ್ಪುದಾರಿಗೆ ಎಳೆಯಲು ಮಾಡಿದ ತಂತ್ರ ಎಂದು ಬಣ್ಣಿಸಿದ್ದಾರೆ.
ಇತಿಹಾಸಕಾರ ರಾಮಚಂದ್ರ ಗುಹಾ ಈ ಪತ್ರವನ್ನು ನಕಲಿ ಎಂದು ಹೇಳಿದ್ದಾರೆ. ಆದರೆ ಅಂದಿನ ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಅಟ್ಟೆಲ್ಲಿಯವರಿಗೆ ಬರೆದ ಪತ್ರದಲ್ಲಿ ನೆಹರೂ ಈ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ. ಈ ಮೂಲಕ ರಾಷ್ಟ್ರನಾಯಕನ ಇಮೇಜ್‌ಗೆ ಧಕ್ಕೆ ತರಲು ಕಾಂಗ್ರೆಸ್ ಯತ್ನಿಸಿದ್ದು ಬಯಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಶರ್ಮಾ ಆಪಾದಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ವಕ್ತಾರ ಆನಂದ ಶರ್ಮಾ ತಿರುಗೇಟು ನೀಡಿದ್ದು, ಬಿಜೆಪಿ ಬೋಸ್ ಅವರನ್ನು ತಮ್ಮ ಪಕ್ಷದ ಮುಖಂಡರ ಸಾಲಿಗೆ ಸೇರಿಸಿಕೊಳ್ಳಲು ನಡೆಸಿದ ಹುನ್ನಾರ ಇದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News