×
Ad

ಗುಜರಾತ್‌ನ ಕಚ್ಛ್ ಪ್ರದೇಶದಲ್ಲಿ ಡೈನೊಸಾರ್ ಪಳೆಯುಳಿಕೆ ಪತ್ತೆ

Update: 2016-01-24 23:45 IST

ಭುಜ್,ಜ.24: ಇಲ್ಲಿಂದ 25 ಕಿ.ಮೀ.ದೂರದ ಕಚ್ಛ್ ಜಿಲ್ಲೆಯ ಕಾಸ್ ಡುಂಗರ್ ಪ್ರದೇಶದಲ್ಲಿ ಡೈನೊಸಾರ್‌ನ ಪಳೆಯುಳಿಕೆಗಳು ಪತ್ತೆಯಾಗಿವೆ.
ಜರ್ಮನಿ ಮತ್ತು ಭಾರತೀಯ ಭೂಗರ್ಭ ಶಾಸ್ತ್ರಜ್ಞರ ತಂಡವು ಕಾಸ್ ಡುಂಗರ್ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಡೈನೊಸಾರ್ ಪಳೆಯುಳಿಕೆಗಳು ಪತ್ತೆಯಾಗಿವೆ. ಇವು ಡೈನೊಸಾರ್‌ನ ಪೃಷ್ಠ ಅಥವಾ ಕಾಲುಗಳ ಮೂಳೆಗಳಾಗಿವೆ ಎನ್ನುವುದು ನಮ್ಮ ಅಭಿಪ್ರಾಯ. ಜರ್ಮನ್ ಭೂಗರ್ಭ ಶಾಸ್ತ್ರಜ್ಞರ ತಂಡವು ಪಳೆಯುಳಿಕೆಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದು,ಅವುಗಳನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆಗೊಳಪಡಿಸಲಿದೆ. ಇವು ಖಂಡಿತವಾಗಿಯೂ ಡೈನೊಸಾರ್ ಪಳೆಯುಳಿಕೆಗಳು ಎನ್ನುವುದು ನಮಗೆ ಖಚಿತ ಪಟ್ಟಿದೆ. ಪಳೆಯುಳಿಕೆಗಳ ಆಯಸ್ಸು ಗೊತ್ತಾದರೆ ಪ್ರಭೇದ ಯಾವುದೆಂದು ನಾವು ಹೇಳಬಹುದು ಎಂದು ತಂಡದ ಸದಸ್ಯ ಗೌರವ ಚೌಹಾಣ್ ಸುದ್ದಿಸಂಸ್ಥೆಗೆ ತಿಳಿಸಿದರು.

ಗುಜರಾತ್ ಭಾರತದಲ್ಲಿ ಡೈನೊಸಾರ್ ಪಳೆಯುಳಿಕೆಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯವೆಂದು ಪರಿಗಣಿಸಲ್ಪಟ್ಟಿದೆ. ಈ ಹಿಂದೆ ಅಹ್ಮದಾಬಾದ್‌ನಿಂದ 100 ಕಿ.ಮೀ.ಅಂತರದಲ್ಲಿರುವ ಬಲಸಿನಾರ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಡೈನೊಸಾರ್ ಮೊಟ್ಟೆಗಳು ಪತ್ತೆಯಾಗಿದ್ದವು. ಅಲ್ಲದೆ ನರ್ಮದಾ ನದಿಯ ದಂಡೆಗಳಲ್ಲಿ ಪಳೆಯುಳಿಕೆಗಳೂ ಲಭಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News