ನ್ಯಾಯಾಂಗ ಆಯೋಗದ ಎದುರು ಕೇರಳದ ಮುಖ್ಯಮಂತ್ರಿ ಹಾಜರು ಸೌರ ಘಟಕ ಹಗರಣ
ತಿರುವನಂತಪುರ, ಜ.25: ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಇಂದು ಸೌರಫಲಕ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಾಂಗ ಆಯೋಗದ ಎದುರು ಹಾಜರಾಗಿದ್ದಾರೆ. ಹಗರಣದಲ್ಲಿ ತನ್ನ ಅಥವಾ ತನ್ನ ಕಚೇರಿಯ ಯಾವುದೇ ಪಾತ್ರವಿಲ್ಲವೆಂಬ ಹೇಳಿಕೆ ನೀಡಿದ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ.
ಇಲ್ಲಿನ ತೈಕಾಡ್ ಅತಿಥಿಗೃಹದಲ್ಲಿ ಬೈಠಕ್ ನಡೆಸಿದ್ದ ನ್ಯಾಯಮೂರ್ತಿ ಶಿವರಾಜನ್ ಆಯೋಗದ ಮುಂದೆ ಹಾಜರಾದ ಚಾಂಡಿ, ಹಗರಣದಿಂದ ರಾಜ್ಯದ ಬೊಕ್ಕಸಕ್ಕೆ ಯಾವುದೇ ನಷ್ಟವಾಗಿಲ್ಲವೆಂದು ಪ್ರತಿಪಾದಿಸಿದರು.
ಸರಿತಾ ಹಾಗೂ ಶ್ರೀಧರನ್ ನಾಯರ್ ಎಂಬವರು ಪ್ರಕರಣದ ಇಬ್ಬರು ಆರೋಪಿಗಳಾಗಿದ್ದರೆ, ಸರಿತಾ ಪ್ರಕರಣದ ಸಂಬಂಧ ಮೊದಲ ದೂರು ನೀಡಿದ್ದರು.
ತಾನು ಸರಿತಾರನ್ನು ಭೇಟಿ ಮಾಡಿಲ್ಲವೆಂದು ಚಾಂಡಿ ಹೇಳಿದರೆಂದು ಆಯೋಗದ ಮೂಲಗಳು ತಿಳಿಸಿವೆ.
ಸರಿತಾ ಹಾಗೂ ಸಹ ಆರೋಪಿ ಬಿಜು ರಾಧಾಕೃಷ್ಣನ್ ಎಂಬಾತನಿಂದ ಸ್ಥಾಪಿತವಾಗಿರುವ ತಪ್ಪಿತಸ್ಥ ಟಾಮ್ ಸೋಲಾರ್ ಸಂಸ್ಥೆಗೆ ತಾನಾಗಲಿ, ತನ್ನ ಕಚೇರಿಯಾಗಲಿ ಸಹಾಯ ಮಾಡಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ತಾನು ರಾಧಾಕೃಷ್ಣನ್‌ರನ್ನು ಕೇವಲ ಒಂದು ಬಾರಿ ಭೇಟಿಯಾಗಿದ್ದೇನೆ. ಆದರೆ, ಅದು ವೈಯಕ್ತಿಕ ಸಮಸ್ಯೆಯೊಂದರ ಕುರಿತು ಚರ್ಚಿಸುವುದಕ್ಕಾಗಿತ್ತು. ಆ ಸಮಸ್ಯೆಯನ್ನು ತಾನು ಆಯೋಗದೆದುರು ಬಹಿರಂಗಪಡಿಸುವುದಿಲ್ಲವೆಂದು ಚಾಂಡಿ ಹೇಳಿದರು. ಕೇರಳದ ಮುಖ್ಯಮಂತ್ರಿಯೊಬ್ಬರು ನ್ಯಾಯಾಂಗ ಆಯೋಗದ ಮುಂದೆ ಹಾಜರಾಗಿರುವುದು ಇದೇ ಮೊದಲ ಸಲವಾಗಿದೆ.