12 ಮಂದಿ ಭಯೋತ್ಪಾದನಾ ಶಂಕಿತರು ಫೆ.5ರ ವರೆಗೆ ಎನ್‌ಐಎ ಕಸ್ಟಡಿಗೆ
ಹೊಸದಿಲ್ಲಿ, ಜ.25: ಐಸಿಸ್‌ನೊಂದಿಗೆ ಸಂಬಂಧ ಹೊಂದಿರುವ ಆರೋಪದಲ್ಲಿ ದೇಶಾದ್ಯಂತದಿಂದ ಬಂಧಿಸಲಾಗಿರುವ 12 ಮಂದಿ ಭಯೋತ್ಪಾದನಾ ಶಂಕಿತರನ್ನು ವಿಶೇಷ ನ್ಯಾಯಾಲಯವೊಂದು ಫೆ.5ರ ವರೆಗೆ ಎನ್‌ಐಎಯ ಕಸ್ಟಡಿಗೆ ನೀಡಿದೆ.
ಬಂಧಿತರು, ಸಿರಿಯದಲ್ಲಿ ಐಸಿಸ್ ಸೇರಲು ಬಯಸುವವರ ನೇಮಕಾತಿ ಹಾಗೂ ಹಣ ಒದಗಿಸುವ ಕೆಲಸದಲ್ಲಿ ತೊಡಗಿದ್ದರೆಂದು ಎನ್‌ಐಎ ಆರೋಪಿಸಿದೆ.
ವಿಚಾರಣೆಯ ವೇಳೆ, ವಿಶೇಷ ಎನ್‌ಐಎ ನ್ಯಾಯಾಧೀಶ ಅಮರನಾಥ್, 12 ಮಂದಿ ಆರೋಪಿಗಳಿಗೆ 11 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದರು. ಭಾರತದಲ್ಲಿ ತನ್ನ ಬಾಹುಗಳನ್ನು ಚಾಚುವ ಐಸಿಸ್‌ನ ಪಿತೂರಿಯನ್ನು ಭೇದಿಸಲು ಬಂಧಿತರ ಕಸ್ಟಡಿ ವಿಚಾರಣೆ ಅಗತ್ಯವೆಂದು ತನಿಖೆ ಸಂಸ್ಥೆ ವಾದಿಸಿತ್ತು.
ಬಿಗು ಭದ್ರತೆಯ ನಡುವೆ ಆರೋಪಿಗಳ ಮುಖಕ್ಕೆ ಮುಸುಕು ಹಾಕಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳ ಚಟುವಟಿಕೆಗಳು ಹಾಗೂ ಜಾಲದ ಕುರಿತು ಹೆಚ್ಚಿನ ಸಾಕ್ಷ ಸಂಗ್ರಹಕ್ಕಾಗಿ ಮತ್ತು ಗುರುತಿಸುವಿಕೆ ಹಾಗೂ ಅವರ ಹೇಳಿಕೆಗಳ ಸಮನ್ವಯಕ್ಕಾಗಿ ವಿವಿಧ ಸ್ಥಳಗಳಲ್ಲಿ ಅವರ ಉಪಸ್ಥಿತಿ ಅಗತ್ಯವಾಗಬಹುದಾದುದರಿಂದ 14 ದಿನಗಳಕಾಲ ವಶಕ್ಕೆ ನೀಡುವಂತೆ ಎನ್‌ಐಎ ಕೋರಿತ್ತು.
ಪ್ರಾಥಮಿಕ ವಿಚಾರಣೆಯ ವೇಳೆ ಎಲ್ಲ ಆರೋಪಿಗಳೂ, ಸಿರಿಯದಲ್ಲಿ ಐಸಿಸ್‌ನ ಖಲಾಫತ್‌ನಲ್ಲಿ ಸೇರಲು ಬಯಸುವವರ ನೇಮಕಾತಿ ಹಾಗೂ ಹಣ ಒದಗಣೆಯ ಈ ಪ್ರಕರಣದಲ್ಲಿ ಅವರ ಪಾತ್ರಗಳ ಕುರಿತು ಅನೇಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆಂದು ಅದು ಹೇಳಿತ್ತು.
ಗಣರಾಜ್ಯೋತ್ಸವದ ಮೊದಲು ದಾಳಿಗಳನ್ನು ನಡೆಸುವ ಯೋಜನೆ ಹಾಕಿದ್ದುದಕ್ಕಾಗಿ ಆರೋಪಿಗಳನ್ನು ಬಂಧಿಸಲಾಗಿದೆಯೆಂದು ಎನ್‌ಐಎ ನ್ಯಾಯಾಲಯಕ್ಕೆ ವಿವರಿಸಿದೆಯೆಂದು ಮೂಲಗಳು ತಿಳಿಸಿವೆ.
10 ಮಂದಿ ಆರೋಪಿಗಳ ಪರ ಹಾಜರಾಗಿದ್ದ ವಕೀಲ ಎಂ.ಎಸ್. ಖಾನ್, ಎನ್‌ಐಎಯು ಕೇವಲ ಸಂಶಯದ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದೆ. ಅವರಲ್ಲಿ ಯಾರೊಬ್ಬರೂ ಯಾವುದೇ ಭಯೋತ್ಪಾದಕ ಕೃತ್ಯ ನಡೆಸಿಲ್ಲವೆಂದು ವಾದಿಸುವ ಮೂಲಕ ತನಿಖೆ ಸಂಸ್ಥೆಯ ಮನವಿಯನ್ನು ವಿರೋಧಿಸಿದರು. ಆರೋಪಿಗಳನ್ನು ಜ.22 ಹಾಗೂ 23ರಂದು ಬಂಧಿಸಲಾಗಿದ್ದು, ಇಷ್ಟು ದಿನಗಳಿಂದ ಅವರು ಎನ್‌ಐಎಯ ವಶದಲ್ಲೇ ಇದ್ದರು. ಆದುದರಿಂದ ಅವರನ್ನು ಇನ್ನಷ್ಟು ದಿನ ತನಿಖೆ ಸಂಸ್ಥೆಯ ವಶಕ್ಕೆ ನೀಡುವ ಅಗತ್ಯವಿಲ್ಲವೆಂದೂ ಅವರು ವಾದಿಸಿದರು.
ಬೆಂಗಳೂರಿನ ನಿವಾಸಿಗಳಾದ ಮುಹಮ್ಮದ್ ಅಬ್ದುಲ್ ಅಹ್ಮದ್, ಮುಹಮ್ಮದ್ ಅಫ್ಝಲ್, ಸುಹೈಲ್ ಅಹ್ಮದ್, ಹೈದರಾಬಾದ್‌ನ ಮುಹಮ್ಮದ್ ಶರೀಫ್ ಮೊಯ್ನುದ್ದೀನ್ ಖಾನ್, ಮುಹಮ್ಮದ್ ಉಬೈದುಲ್ಲಾಖಾನ್, ಮುಂಬೈಯ ಮುದಬ್ಬೀರ್ ಮುಶ್ತಾಕ್, ಮುಹಮ್ಮದ್ ಹುಸೇನ್ ಖಾನ್, ಲಕ್ನೊದ ಮುಹಮ್ಮದ್ ಅಲೀಂ, ಔರಂಗಾಬಾದ್‌ನ ಇಮ್ರಾನ್, ತಮಿಳುನಾಡಿನ ಆಸಿಫ್ ಅಲಿ, ಕರ್ನಾಟಕದ ಸೈಯದ್ ಮುಜಾಹಿದ್ ಹಾಗೂ ನಜ್ಮುಲ್ ಹುದಾ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಆರೋಪಿಗಳಾಗಿದ್ದಾರೆ.