ಮೋದಿ ವಿದೇಶ ಪ್ರವಾಸ: ವೆಚ್ಚದ ವಿವರ ಇನ್ನೂ ಲಭ್ಯವಿಲ್ಲ!
ಹೊಸದಿಲ್ಲಿ,ಜ.25: ಪ್ರಧಾನಿ ನರೇಂದ್ರ ಮೋದಿ ತನ್ನ 20ನೆ ವಿದೇಶ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಂತೆಯೇ, ಅವರ ಹಿಂದಿನ 19 ವಿದೇಶ ಪ್ರವಾಸಗಳಿಗೆ ತಗಲಿದ ಖರ್ಚುವೆಚ್ಚಗಳ ವಿವರಗಳನ್ನು ಈವರೆಗೆ ಬಹಿರಂಗಪಡಿಸಲಾಗಿಲ್ಲ. ಅವರ ಬಹುತೇಕ ವಿದೇಶ ಪ್ರವಾಸಗಳ ವೆಚ್ಚಗಳ ವಿವರಗಳು ಇನ್ನೂ ಪರಿಷ್ಕರಣೆಯ ಹಂತದಲ್ಲಿದೆ ಅಥವಾ ಇನ್ನೂ ಲಭ್ಯವಿಲ್ಲವೆಂದು ಭಾರತ ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ತೋರಿಸಲಾಗಿದೆ.
ಮೋದಿಯವರ ಅರ್ಧಾಂಶಕ್ಕೂ ಅಧಿಕ ವಿದೇಶ ಪ್ರವಾಸಗಳು 2014-15ರ ಅವಧಿಯಲ್ಲಿ ನಡೆದಿವೆ. ಆದಾಗ್ಯೂ ಅವರ ಪ್ರವಾಸದ ವೆಚ್ಚದ ವಿವರಗಳ ಬಗ್ಗೆ ಸರಕಾರವು ಪಾರದರ್ಶಕತೆಯನ್ನು ಪ್ರದರ್ಶಿಸಲು ವಿಫಲವಾಗಿದೆ.ಅವರ ಬ್ರೆಝಿಲ್, ನೇಪಾಳ, ಜಪಾನ್, ಅಮೆರಿಕ, ಮ್ಯಾನ್‌ಮಾಯ್, ಆಸ್ಟ್ರೇಲಿಯ, ಫಿಜಿ, ಬಾಂಗ್ಲಾ,ಜರ್ಮನಿ, ಶ್ರೀಲಂಕಾ, ಐರ್‌ಲ್ಯಾಂಡ್, ಚೀನಾ, ಯುಎಇ,ಫ್ರಾನ್ಸ್, ದ.ಕೊರಿಯ, ರಶ್ಯ ಪ್ರವಾಸಗಳ ಖರ್ಚುವೆಚ್ಚಗಳ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಪ್ರಧಾನಿಯ ವಿದೇಶ ಪ್ರವಾಸಗಳಿಗಾಗಿ ವಿಮಾನಯಾನಗಳಿಗೆ ತಗಲಿದ ವೆಚ್ಚಗಳ ಬಗ್ಗೆ ಕೇಳಲಾದ ಆರ್‌ಟಿಐ ಅರ್ಜಿಗಳು ಕೂಡಾ ನೆನೆಗುದಿಯಲ್ಲಿವೆ.
ಆದರೆ ನೌಕಾಪಡೆಯ ಮಾಜಿ ಅಧಿಕಾರಿ ಲೋಕೇಶ್ ಭಾತ್ರಾ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯೊಂದರಲ್ಲಿ ಮೋದಿಯ ವಿದೇಶ ಪ್ರವಾಸಗಳ ವೆಚ್ಚಕ್ಕೆ ಸಂಬಂಧಿಸಿ ಭಾಗಶಃ ಮಾಹಿತಿ ಲಭ್ಯವಾಗಿದೆ. ವಿವಿಧ ರಾಯಭಾರಿ ಕಚೇರಿಗಳಿಂದ ದೊರೆತ ಮಾಹಿತಿ ಪ್ರಕಾರ, ಮೋದಿಯ 14 ವಿದೇಶ ಪ್ರವಾಸಗಳಿಗೆ 45 ಕೋಟಿ ರೂ.ಗೂ ಅಧಿಕ ಖರ್ಚಾಗಿರುವುದಾಗಿ ಆರ್‌ಟಿಐ ಅರ್ಜಿಗೆ ದೊರೆತ ಉತ್ತರದಲ್ಲಿ ತಿಳಿಸಲಾಗಿದೆ.
ಆಸ್ಟ್ರೇಲಿಯ ಪ್ರವಾಸದಲ್ಲಿ ಮೋದಿ ಹಾಗೂ ಅವರ ಜೊತೆಗಿದ್ದವರಿಗಾಗಿ ಒಟ್ಟು 10.80 ದಶಲಕ್ಷ ಡಾಲರ್ ವೆಚ್ಚವಾಗಿತ್ತು. ಅವರ ಕೆನಡಾ ಹಾಗೂ ನ್ಯೂಯಾರ್ಕ್ ಪ್ರವಾಸಕ್ಕೆ ತಲಾ 10.10 ಲಕ್ಷ ಡಾಲರ್ ಖರ್ಚಾಗಿದೆ. ನ್ಯೂಯಾರ್ಕ್‌ನಲ್ಲಿ ಅವರ ಹೊಟೇಲ್ ವಾಸ್ತವ್ಯಕ್ಕೆ 6 ಲಕ್ಷ ಡಾಲರ್ ವ್ಯಯಿಸಲಾಗಿದೆ. ಸುಮಾರು 3 ಲಕ್ಷ ಡಾಲರ್‌ಗಳು ಕಾರುಗಳ ಬಾಡಿಗೆಗಾಗಿ ಹಾಗೂ 43 ಸಾವಿರ ಡಾಲರ್ ಕಚೇರಿ ಉಪಕರಣಗಳ ಬಾಡಿಗೆಗಾಗಿ ವೆಚ್ಚವಾಗಿತ್ತು. ಸುಮಾರು 38 ಸಾವಿರ ಡಾಲರ್‌ಗಳನ್ನು ಅವರ ತಂಡದ ಸದಸ್ಯರಿಗಾಗಿ ವ್ಯಯಿಸಲಾಗಿತ್ತು ಮತ್ತು 16 ಸಾವಿರ ಡಾಲರ್‌ನನ್ನು ತುರ್ತು ಆ್ಯಂಬುಲೆನ್ಸ್ ನಿಯೋಜನೆಗಾಗಿ ವ್ಯಯಿಸಲಾಗಿತ್ತು ಎಂದು ಆರ್‌ಟಿಐ ಉತ್ತರದಲ್ಲಿ ತಿಳಿಸಲಾಗಿದೆ.
ನರೇಂದ್ರ ಮೋದಿಯವರ ಹಿಂದಿನ 19 ವಿದೇಶ ಪ್ರವಾಸಗಳ ಪೈಕಿ ಅವರ ಪ್ರಪ್ರಥಮ ಭೇಟಿಯ (ಭೂತಾನ್ ಪ್ರವಾಸ)ಯ ಖರ್ಚುವೆಚ್ಚಗಳನ್ನು ಮಾತ್ರ ವೆಬ್‌ಸೈಟ್‌ನಲ್ಲಿ ವಿವರಿಸಲಾಗಿದೆ. ಅವರ ಭೂತಾನ್ ಪ್ರವಾಸಕ್ಕೆ ಒಟ್ಟು 2,45,27,465 ರೂ. ವೆಚ್ಚ ತಗಲಿದೆಯೆಂದು ವೆಬ್‌ಸೈಟ್‌ನಲ್ಲಿ ವಿವರಿಸಲಾಗಿದೆ. ಆದರೆ ಅವರ ಉಳಿದ ಎಲ್ಲ ಪ್ರವಾಸಗಳ ವೆಚ್ಚಗಳ ವಿವರಗಳನ್ನು, ‘‘ ಬಿಲ್‌ಗಳು ಪರಿಷ್ಕರಣೆಯ ಹಂತದಲ್ಲಿದೆ ’’ ಹಾಗೂ ಬಿಲ್ ಇನ್ನೂ ಸ್ವೀಕೃತಗೊಂಡಿಲ್ಲವೆಂದಷ್ಟೇ ಉಲ್ಲೇಖಿಸಲಾಗಿದೆ.