×
Ad

ತೀವ್ರಗೊಂಡ ವೇಮುಲಾ ಆತ್ಮಹತ್ಯೆ ಪ್ರತಿಭಟನೆ: ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು!

Update: 2016-01-25 23:43 IST

ಹೈದರಾಬಾದ್ ವಿವಿಗೆ ಹರಿದುಬಂದ ವಿದ್ಯಾರ್ಥಿ ಸಮೂಹ

ಹೈದರಾಬಾದ್, ಜ.25: ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪ್ರತಿಭಟನೆಗಿಳಿದಿರುವ ವಿದ್ಯಾರ್ಥಿ ಗಳಿಗೆ ಇತರ ವಿವಿಗಳ ಹಲವು ವಿದ್ಯಾರ್ಥಿಗಳು ಹಾಗೂ ಕೆಲವು ಸಾಮಾಜಿಕ ಸಂಘಟನೆಗಳು ಇಂದು ಬೆಂಬಲ ಘೋಷಿಸುವುದರೊಂದಿಗೆ ಹೈದರಾಬಾದ್ ಕೇಂದ್ರೀಯ ವಿವಿ(ಎಚ್‌ಸಿಯು) ಯಲ್ಲಿ ನಡೆಯುತ್ತಿರುವ ಮುಷ್ಕರವು ತೀವ್ರ ಸ್ವರೂಪ ಪಡೆದುಕೊಂಡಿದೆ.

ಮುಷ್ಕರದ ನೇತೃತ್ವ ವಹಿಸಿರುವ ಜಂಟಿ ಕ್ರಿಯಾ ಸಮಿತಿಯು ಇಂದು ಕರೆ ನೀಡಿದ್ದ ‘ಚಲೋ ಎಚ್‌ಸಿಯು’ ಚಳವಳಿಗೆ ಸ್ಪಂದಿಸಿದ ಸಾವಿರಾರು ಮಂದಿ ಪ್ರತಿಭಟನಾಕಾರರು ವಿವಿಯ ಕ್ಯಾಂಪಸ್‌ಗೆ ಆಗಮಿಸಿ, ಬೆಂಬಲ ವ್ಯಕ್ತಪಡಿಸಿದರು. ‘‘ದೇಶದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಮತ್ತಿತರರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ’’ ಎಂದು ಎಚ್‌ಸಿಯುನ ಮುಖ್ಯ ಭದ್ರತಾ ಅಧಿಕಾರಿ ಟಿ.ವಿ.ರಾವ್ ತಿಳಿಸಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮುಂಜಾಗರೂ ಕತಾ ಕ್ರಮವಾಗಿ ಭಾರೀ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಎಚ್‌ಸಿಯು ಕ್ಯಾಂಪಸ್ ಪ್ರವೇಶಿಸುವವರೆಲ್ಲರನ್ನೂ ಪರಿಶೀಲನೆಗೊಳಪಡಿಸಲಾಗುತ್ತಿದೆ. ಆದರೆ ಎಚ್‌ಸಿಯು ಚಲೋ ಕಾರ್ಯಕ್ರಮದ ಮೇಲೆ ಯಾವುದೇ ನಿರ್ಬಂಧವನ್ನು ಹೇರಿಲ್ಲವೆಂದು ಹೈದರಾಬಾದ್‌ನ ಜಂಟಿ ಪೊಲೀಸ್ ಆಯುಕ್ತ ಟಿ.ವಿ. ಶಶಿಧರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ ಕೆಲವು ವಿದ್ಯಾರ್ಥಿಗಳು ಹಾಗೂ ಇತರ ಪ್ರತಿಭಟನಕಾರರು, ತಮ್ಮನ್ನು ವಿವಿಯ ಆವರಣದೊಳಗೆ ಪ್ರವೇಶಿಸಲು ಪೊಲೀಸರು ಅನುಮತಿ ನೀಡುತ್ತಿಲ್ಲವೆಂದು ಆಪಾದಿಸಿದ್ದರು.

ಕೇರಳದ ಕಲ್ಲಿಕೋಟೆ ವಿವಿ, ಪಾಂಡಿಚೇರಿ ವಿವಿ, ಉಸ್ಮಾನಿಯಾ ವಿವಿ ಹಾಗೂ ವೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿವಿಯ ವಿದ್ಯಾರ್ಥಿಗಳೂ ಇಂದು ಎಜ್‌ಸಿಯು ಕ್ಯಾಂಪಸ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಸ್ತುತ ರಜೆಯ ಮೇಲೆ ತೆರಳರುವ ವಿವಿಯ ಉಪಕುಲಪತಿ ಅಪ್ಪಾರಾವ್‌ರನ್ನು ವಜಾಗೊಳಿಸಬೇಕು ಹಾಗೂ ಪರಿಶಿಷ್ಟ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಲು ‘ರೋಹಿತ್ ಕಾಯ್ದೆ’ಯ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದಾರೆ.

ಈ ಮಧ್ಯೆ ಉಪಕುಲಪತಿ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲು, ವಿವಿಯ ಅತ್ಯಂತ ಹಿರಿಯ ಪ್ರೊಫೆಸರ್ ಆಗಿರುವ ವಿಪಿನ್ ಶ್ರೀವಾಸ್ತವ ಅವರ ಆಯ್ಕೆಗೂ ವಿದ್ಯಾರ್ಥಿಗಳು ಹಾಗೂ ಎಸ್‌ಸಿ/ಎಸ್‌ಟಿ ಬೋಧಕವರ್ಗ ವಿರೋಧ ವ್ಯಕ್ತಪಡಿಸಿದೆ.ವಿಪಿನ್ ರೋಹಿತ್‌ನ ಆತ್ಮಹತ್ಯೆಗೆ ಕಾರಣವಾದ ವಿವಿಯ ಕಾರ್ಯಕಾರಿ ಮಂಡಳಿಯ ಉಪಸಮಿತಿಯ ಅಧ್ಯಕ್ಷರಾಗಿದ್ದರು. ಅಷ್ಟೇ ಅಲ್ಲದೆ ಇನ್ನೋರ್ವ ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಇಂದು ಹೈದರಾಬಾದ್ ವಿವಿಯ ಕ್ಯಾಂಪಸ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು.


ಅಮಾನತು ಆದೇಶ ರದ್ದತಿಯ ಪ್ರತಿ ಇನ್ನೂ ತಲುಪಿಲ್ಲ: ದಲಿತ ವಿದ್ಯಾರ್ಥಿಗಳು

ಹೈದರಾಬಾದ್,ಜ.25: ನಾಲ್ವರು ದಲಿತ ವಿದ್ಯಾರ್ಥಿಗಳ ಅಮಾನತು ಆದೇಶವನ್ನು ಹಿಂದೆಗೆದುಕೊಂಡಿರುವುದಾಗಿ ಹೈದರಾಬಾದ್‌ನ ಕೇಂದ್ರೀಯ ವಿವಿ (ಎಚ್‌ಸಿಯು) ಸೋಮವಾರ ಹೈದರಾಬಾದ್ ಹೈಕೋರ್ಟ್‌ಗೆ ತಿಳಿಸಿದೆ. ಆದರೆ ಅಮಾನತನ್ನು ರದ್ದುಪಡಿಸಿರುವ ಆದೇಶದ ಪ್ರತಿ ಇನ್ನೂ ದೊರೆತಿಲ್ಲವೆಂದು ಈ ನಾಲ್ವರು ವಿದ್ಯಾರ್ಥಿಗಳ ಪರ ವಕೀಲರು ತಿಳಿಸಿದ್ದಾರೆ.

ಕಳೆದ ಸೆಪ್ಟಂಬರ್‌ನಲ್ಲಿ ಎಬಿವಿಪಿ ಮುಖಂಡನೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಸೇರಿದಂತೆ ಒಟ್ಟು ಐದು ಮಂದಿ ದಲಿತ ವಿದ್ಯಾರ್ಥಿಗಳನ್ನು ವಿವಿಯ ಆಡಳಿತ ಮಂಡಳಿಯು ಅಮಾನತುಗೊಳಿಸಿತ್ತು. ತಮ್ಮ ಅಮಾನತು ಆದೇಶವನ್ನು ಪ್ರಶ್ನಿಸಿ ಈ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಎರಡೂ ಕಡೆಗಳ ವಾದ ಅಲಿಸಿದ ಹೈಕೋರ್ಟ್ ನ್ಯಾಯಾಧೀಶರು, ವಿದ್ಯಾರ್ಥಿಗಳ ಅಮಾನತನ್ನು ರದ್ದುಪಡಿಸಿರುವ ಆದೇಶ ಅಥವಾ ಸುತ್ತೋಲೆಗಳನ್ನು, ತನಗೆ ಸಲ್ಲಿಸುವಂತೆ ಸೂಚಿಸಿದೆ.

ಪ್ರಕರಣದ ಆಲಿಕೆಯನ್ನು ಉಚ್ಚ ನ್ಯಾಯಾಲಯವು ಫೆಬ್ರವರಿ 12ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News