×
Ad

ರವಿಶಂಕರ್, ರಜನಿ, ಅಂಬಾನಿ ಸಹಿತ 10 ಗಣ್ಯರಿಗೆ ಪದ್ಮ ವಿಭೂಷಣ

Update: 2016-01-25 23:47 IST

ಸಾನಿಯಾ, ಸೈನಾಗೆ ಪದ್ಮ ಭೂಷಣ - ಎಸ್.ಎಲ್.ಭೈರಪ್ಪಗೆ ಪದ್ಮಶ್ರೀ


ಹೊಸದಿಲ್ಲಿ,ಜ.25: ಗಣರಾಜ್ಯೋತ್ಸವದ ಮುನ್ನಾ ದಿನವಾದ ಸೋಮವಾರ 112 ಮಂದಿ ಗಣ್ಯರಿಗೆ ಈ ವರ್ಷದ ‘ಪದ್ಮ’ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಖ್ಯಾತ ಚಿತ್ರನಟ ರಜನಿಕಾಂತ್, ರಿಲಾಯನ್ಸ್ ಉದ್ಯಮಸಮೂಹದ ಸಂಸ್ಥಾಪಕ ದಿವಂಗತ ಧೀರೂಭಾಯಿ ಅಂಬಾನಿ, ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ರವಿಶಂಕರ್ ಹಾಗೂ ಮಾಧ್ಯಮರಂಗದ ದೊರೆ ರಾಮೋಜಿರಾವ್ ಸೇರಿದಂತೆ 10ಮಂದಿ ದೇಶದ ಎರಡನೆ ಸರ್ವೋಚ್ಚ ನಾಗರಿಕ ಪುರಸ್ಕಾರವಾದ ‘ಪದ್ಮ ವಿಭೂಷಣ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಪದ್ಮಶ್ರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಮ್ಮಕಾಶ್ಮೀರದ ಮಾಜಿ ರಾಜ್ಯಪಾಲ ಜಗಮೋಹನ್, ರಕ್ಷಣಾ ಸಂಶೋಧನೆ ಹಾಗೂ ಅಬಿವೃದ್ಧಿ ಸಂಸ್ಥೆಯ ಮಾಜಿ ವರಿಷ್ಠ ವಿ.ಕೆ. ಆತ್ರೆ, ಕ್ಯಾನ್ಸರ್ ತಜ್ಞ ಹಾಗೂ ಆಡ್ಯಾರ್ ಕ್ಯಾನ್ಸರ್ ಇನ್‌ಸ್ಟಿಟ್ಯುಟ್‌ನ ಅಧ್ಯಕ್ಷ ಡಾ. ವಿಶ್ವನಾಥನ್ ಶಾಂತಾ ಹಾಗೂ ಖ್ಯಾತ ಭರತನಾಟ್ಯ ಹಾಗೂ ಕೂಚುಪುಡಿ ನೃತ್ಯಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಹಾಗೂ ಶಾಸ್ತ್ರೀಯ ಸಂಗೀತ ಗಾಯಕಿ ಗಿರಿಜಾ ದೇವಿ ಹಾಗೂ ಭಾರತ-ಅಮೆರಿಕ ಅರ್ಥಶಾಸ್ತ್ರಜ್ಞ ಅವಿನಾಶ್ ದೀಕ್ಷಿತ್ ಅವರಿಗೂ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ಬಾಲಿವುಡ್‌ನ ಖ್ಯಾತ ನಟ ಅನುಪಮ್‌ಖೇರ್, ಗಾಯಕ ಉದಿತ್‌ನಾರಾಯಣ್, ಮಾಜಿ ಮಹಾಲೇಖಪಾಲ (ಸಿಎಜಿ) ವಿನೋದ್‌ರಾಯ್, ಬೆನೆಟ್ ಆ್ಯಂಟ್ ಕೋಲ್‌ಮನ್ ಆ್ಯಂಡ್ ಕಂಪೆನಿಯ ಅಧ್ಯಕ್ಷ ಇಂದು ಜೈನ್, ಅಧ್ಯಾತ್ಮಿಕ ಧರ್ಮಗುರುಗಳಾದ ದಿವಂಗತ ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ತೇಜೋಮಯಾನಂದ ಹಾಗೂ ಭಾರತಕ್ಕೆ ಅಮೆರಿಕದ ಮಾಜಿ ರಾಯಭಾರಿ ರಾಬರ್ಟ್ ಬ್ಲಾಕ್, ಸೇರಿದಂತೆ 19 ಮಂದಿ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಟೆನ್ನಿಸ್ ತಾರೆ ಸಾನಿಯಾ ಮಿರ್ಝಾ, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ಪದ್ಮಭೂಷಣ ನೀಡಲಾಗಿದೆ.

ಕೈಗಾರಿಕೋದ್ಯಮಿ ಪಲ್ಲೊಂಜಿ ಶಾಪೂರ್ಜಿ ಮಿಸ್ತ್ರಿ, ಮಾರುತಿ ಸುಝಕಿ ಅಧ್ಯಕ್ಷ ಆರ್.ಸಿ. ಭಾರ್ಗವ ಹಾಗೂ ಪ್ರಸಿದ್ಧ ವಾಸ್ತುಶಿಲ್ಪಿ ್ಠ ಹಾಫೀಝ್ ಕಂಟ್ರಾಕ್ಟರ್ ಸೇರಿದಂತೆ 83 ಮಂದಿ ಗಣ್ಯರು ಪದ್ಮಶ್ರೀ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದಾರೆ.

ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ವಿಚಾರಣೆಯಲ್ಲಿ ಪ್ರಾಸಿಕ್ಯೂಶನ್ ಪರ ವಾದಿಸಿದ್ದ ಹಿರಿಯ ನ್ಯಾಯವಾದಿ ಉಜ್ವಲ್ ನಿಕಮ್, ವನಿತಾ ಬಿಲ್ಗಾರ್ತಿ ದೀಪಿಕಾ ಕುಮಾರಿ, ಸಿನೆಮಾ ಕ್ಷೇತ್ರದಲ್ಲಿನ ಸಾಧನೆಗಾಗಿ ಬಾಲಿವುಡ್ ತಾರೆಯರಾದ ಅಜಯ್‌ದೇವಗನ್ ಹಾಗೂ ಪ್ರಿಯಾಂಕ ಚೋಪ್ರಾ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಪದ್ಮ ಪ್ರಶಸ್ತಿ ಪಡೆದ 11 ಮಂದಿ ಕನ್ನಡಿಗರು
ಪದ್ಮ ವಿಭೂಷಣ: ಶ್ರೀ ರವಿಶಂಕರ್-ಅಧ್ಯಾತ್ಮ, ಡಾ.ವಾಸುದೇವ್ - ವಿಜ್ಞಾನ
ಪದ್ಮಶ್ರೀ: ಎಸ್‌ಎಸ್ ರಾಜಮೌಳಿ- ಸಿನೆಮಾ, ಎಂ.ವೆಂಕಟೇಶ್ ಕುಮಾರ್ -ಕಲೆ, ಎಸ್.ಎಲ್. ಭೈರಪ್ಪ-ಸಾಹಿತ್ಯ, ಎಂಎಂ ಜೋಶಿ- ವೈದ್ಯಕೀಯ, ಜಾನ್ ಎಬ್ನೇಜರ್-ವೈದ್ಯಕೀಯ, ಎಚ್.ಆರ್. ನಾಗೇಂದ್ರ-ಯೋಗ, ಮೈಲಸ್ವಾಮಿ ಅಣ್ಣದೊರೆ-ವಿಜ್ಞಾನ, ಪ್ರೊ.ದೀಪಂಕರ್ ಚಟರ್ಜಿ-ವಿಜ್ಞಾನ, ಎಂ.ಪಂಡಿತ್ ದಾಸ್-ಸಮಾಜಸೇವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News