ಅಂಟಾರ್ಕ್ಟಿಕ್ ದಾಟಲು ಪ್ರಯತ್ನಿಸಿದ ಚಾರಣಿಗ ಸಾವು
ಲಂಡನ್, ಜ. 25: ಅಂಟಾರ್ಕ್ಟಿಕನ್ನು ಏಕಾಂಗಿಯಾಗಿ ದಾಟಿ ಇತಿಹಾಸ ನಿರ್ಮಿಸುವ ಪ್ರಯತ್ನದಲ್ಲಿ ಬ್ರಿಟನ್ ಸಾಹಸ ಚಾರಣಿಗ ಹೆನ್ರಿ ವರ್ಸ್‌ಲೆ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ಜೋನಾ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಗುರಿ ಮುಟ್ಟಲು ಕೇವಲ 48 ಕಿ.ಮೀ. ದೂರವಿದ್ದಾಗ ವರ್ಸ್‌ಲೆ ನೆರವಿಗಾಗಿ ಕರೆ ಮಾಡಿದರು. ಬಳಲಿಕೆ ಮತ್ತು ತೀವ್ರ ನಿರ್ಜಲೀಕರಣ ಸ್ಥಿತಿಯಲ್ಲಿದ್ದ ಅವರನ್ನು ಶುಕ್ರವಾರ ಹೆಲಿಕಾಪ್ಟರ್ ಮೂಲಕ ಚಿಲಿಯ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು.
ಅವರ ಈ ಸಾಹಸ ಯಾತ್ರೆಗೆ ಬ್ರಿಟನ್ ರಾಜಕುಮಾರ ವಿಲಿಯಂ, ಪತ್ನಿ ಕೇಟ್ ಮತ್ತು ಸಹೋದರ ರಾಜಕುಮಾರ ಹ್ಯಾರಿ ಬೆಂಬಲ ನೀಡಿದ್ದರು.
ದಕ್ಷಿಣ ಧ್ರುವದ ಮೂಲಕ ಅಂಟಾರ್ಕ್ಟಿಕವನ್ನು ದಾಟಲು ವರ್ಸ್‌ಲೆ ಪ್ರಯತ್ನಿಸಿದ್ದರು. 100 ವರ್ಷಗಳ ಹಿಂದೆ ಈ ಸಾಧನೆಯನ್ನು ಮಾಡಲು ಹೋಗಿದ್ದ ಚಾರಣಿಗ ಅರ್ನೆಸ್ಟ್ ಶ್ಯಾಕಲ್ಟನ್ ತನ್ನ ಪ್ರಯತ್ನವನ್ನು ಅರ್ಧದಲ್ಲೇ ಕೈಬಿಟ್ಟಿದ್ದರು.
ವರ್ಸ್‌ಲೆ ತನ್ನ ಅಭಿಯಾನದ ಮೂಲಕ ಯುದ್ಧದಲ್ಲಿ ಗಾಯಗೊಳ್ಳುವ ಸೈನಿಕರಿಗೆ ಚಿಕಿತ್ಸೆ ನೀಡುವ ‘ಎಂಡವರ್’ ನಿಧಿಗೆ ಒಂದು ಲಕ್ಷ ಪೌಂಡ್ (ಸುಮಾರು 1 ಕೋಟಿ ರೂಪಾಯಿ) ದೇಣಿಗೆ ಸಂಗ್ರಹಿಸಿದ್ದಾರೆ.