×
Ad

ಗಣರಾಜ್ಯೋತ್ಸವದ ಮುನ್ನ ಸಂಘ ಪರಿವಾರ ಸಂಘಟನೆಯಿಂದ ಕಪ್ಪು ದಿನ ಆಚರಣೆ

Update: 2016-01-26 22:04 IST

ಮೀರತ್,ಜ.26: ಸೋಮವಾರ ಇಡೀ ದೇಶವೇ ಮರುದಿನದ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದರೆ ಸಂಘ ಪರಿವಾರಕ್ಕೆ ಸೇರಿದ ಅಖಿಲ ಭಾರತೀಯ ಹಿಂದು ಮಹಾಸಭಾದ ಕನಿಷ್ಠ 50 ಕಾರ್ಯಕರ್ತರು ‘ಕಪ್ಪು ದಿನ’ ಮತ್ತು ಭಾರತೀಯ ಸಂವಿಧಾನದ ‘ಶೋಕಾಚರಣೆ’ಗಾಗಿ ಇಲ್ಲಿ ಕಪ್ಪು ಪತಾಕೆಗಳನ್ನು ಪ್ರದರ್ಶಿಸಿದರು.
ಭಾರತವನ್ನು ‘ಹಿಂದು ರಾಷ್ಟ್ರ’ವನ್ನಾಗಿ ಘೋಷಿಸುವಂತೆ ಆಗ್ರಹಿಸಿ ಮತ್ತು ಭಾರತವನ್ನು ‘ಜಾತ್ಯತೀತ ರಾಷ್ಟ್ರ’ವನ್ನಾಗಿ ಘೋಷಿಸಿರುವ ಸಂವಿಧಾನವನ್ನು ವಿರೋಧಿಸಿ ಗಣರಾಜ್ಯೋತ್ಸವದ ಮುನ್ನಾ ದಿನವನ್ನು ಕಪ್ಪುದಿನವನ್ನಾಗಿ ಕಳೆದ ಐದು ದಶಕಗಳಿಂದಲೂ ಆಚರಿಸಲಾಗುತ್ತಿದೆ ಎಂದು ಮಹಾಸಭಾದ ನಾಯಕರು ಹೇಳಿದ್ದಾರೆ.
ಭಾರತದ ವಿಭಜನೆಯು ಧರ್ಮದ ಆಧಾರದಲ್ಲಿ ನಡೆದು ಅಂತಿಮವಾಗಿ ಭಾರತವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ಘೋಷಿಸಲಾಗಿದೆ. ದೇಶವು ಜಾತ್ಯತೀತವಾಗಿದ್ದರೆ ಏಕರೂಪ ಸಂಹಿತೆ ಜಾರಿಯಲ್ಲಿರುತ್ತಿತ್ತು, ಆದರೆ ಹಾಗಾಗಿಲ್ಲ. ಭಾರತವನ್ನು ‘ಹಿಂದು ರಾಷ್ಟ್ರ’ವೆಂದು ಘೋಷಿಸುವವರೆಗೂ ನಾವು ಕಪ್ಪು ದಿನಾಚರಣೆಯನ್ನು ಮುಂದುವರಿಸುತ್ತೇವೆ ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ ಕುಮಾರ ಶರ್ಮಾ ಅವರು ಹೇಳಿದರು.
 ನಾವು ಭಾರತೀಯ ಸಂವಿಧಾನವನ್ನು ನಂಬುವುದಿಲ್ಲ ಮತ್ತು ಕಳೆದ 50 ವರ್ಷಗಳಿಂದಲೂ ಅದರ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಜಾತ್ಯತೀತತೆ  ಭಾರತದಲ್ಲಿ ಅಸ್ತಿತ್ವದಲ್ಲಿಲ್ಲ ಮತ್ತು ಅದಕ್ಕಾಗಿ ನಾವು ಸಂವಿಧಾನದ ಶೋಕಾಚರಣೆ ನಡೆಸುತ್ತೇವೆ. ಭಾರತವು ವಿಭಜನೆಗೊಂಡಾಗ ಪಾಕಿಸ್ತಾನಕ್ಕೆ ಇಸ್ಲಾಮಿಕ್ ರಾಷ್ಟ್ರವೆಂದು ಕರೆಯಲಾಗಿತ್ತು,ಹೀಗಿರುವಾಗ ಭಾರತಕ್ಕೇಕೆ ಹಿಂದು ರಾಷ್ಟ್ರವೆಂಬ ಸ್ಥಾನಮಾನ ನೀಡಲಾಗಿಲ್ಲ? ಭಾರತವನ್ನು ಹಿಂದು ರಾಷ್ಟ್ರವೆಂದು ಮನ್ನಿಸುವಲ್ಲಿ ವಿಫಲಗೊಂಡಿರುವ ಈ ಸಂವಿಧಾನವನ್ನು ನಾವೆಲ್ಲ ವಿರೋಧಿಸುತ್ತೇವೆ ಎಂದು ಸಂಘಟನೆಯ ಮೀರತ್ ಜಿಲ್ಲಾಧ್ಯಕ್ಷ ಭರತ್ ರಾಜಪೂತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News