×
Ad

ಸರಣಿ ಹಂತಕನ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿದ ಹೈಕೋರ್ಟ್

Update: 2016-01-27 23:42 IST

 ಹೊಸದಿಲ್ಲಿ,ಜ.27: ಸರಣಿ ಹಂತಕ ಚಂದ್ರಕಾಂತ ಝಾ ಎಂಬಾತನಿಗೆ ಎರಡು ಕೊಲೆ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿ ಬುಧವಾರ ಆದೇಶಿಸಿದ ದಿಲ್ಲಿ ಉಚ್ಚ ನ್ಯಾಯಾಲಯವು,ಇನ್ನೊಂದು ಕೊಲೆ ಪ್ರಕರಣದಲ್ಲಿ ವಿಧಿಸಲಾಗಿರುವ ಸಾಯುವವರೆಗೂ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿಯಿತು. ಒಂದೇ ಬಗೆಯ ಈ ಮೂರೂ ಪ್ರಕರಣಗಳಲ್ಲಿ ಝಾ ತನ್ನ ಬಲಿಪಶುಗಳ ಅಂಗಾಂಗಗಳನ್ನು ತುಂಡರಿಸಿ ಶವಗಳನ್ನು ದಿಲ್ಲಿಯ ತಿಹಾರ್ ಜೈಲಿನ ಬಳಿ ಎಸೆಯುವ ಮೂಲಕ ಪೊಲೀಸರಿಗೆ ಸವಾಲೊಡ್ಡಿದ್ದ.

ಎಲ್ಲ ಮೂರೂ ಪ್ರಕರಣಗಳಲ್ಲಿ ಝಾ ದೋಷಿ ಎನ್ನುವುದನ್ನು ನ್ಯಾ.ಸಂಜೀವ ಖನ್ನಾ ಮತ್ತು ನ್ಯಾ.ಆರ್.ಕೆ.ಗಾಬಾ ಅವರ ಪೀಠವು ಎತ್ತಿ ಹಿಡಿಯಿತಾದರೂ,ಎರಡು ಪ್ರಕರಣಗಳಲ್ಲಿ ಆತನಿಗೆ ವಿಧಿಸಲಾಗಿದ್ದ ಮರಣ ದಂಡನೆಯನ್ನು ತಗ್ಗಿಸಿ ಆತ ಸಾಯುವವರೆಗೂ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಬೇಕೆಂದು ಆದೇಶಿಸಿತು. ಈ ಪ್ರಕರಣಗಳಲ್ಲಿ ಪ್ರತ್ಯಕ್ಷದರ್ಶಿ ಸಾಕ್ಷಿಗಳಿಲ್ಲ ಎನ್ನುವುದನ್ನು ಅದು ಬೆಟ್ಟು ಮಾಡಿತು.
 
  ಬಿಹಾರದ ಮಾಧೇಪುರ ನಿವಾಸಿಯಾದ ಝಾ 2007ರಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತನ್ನಿಬ್ಬರು ಬಲಿಪಶುಗಳ ಶಿರಚ್ಛೇದಗೈದು ಶವಗಳನ್ನು ತಿಹಾರ್ ಜೈಲಿನ ಬಳಿ ಎಸೆದಿದ್ದ. ವಿಚಾರಣಾ ನ್ಯಾಯಾಲಯವು 2013,ಫೆಬ್ರವರಿಯಲ್ಲಿ ಒಂದು ಪ್ರಕರಣದಲ್ಲಿ ಸಾಯುವವರೆಗೂ ಜೈಲು ಶಿಕ್ಷೆ ಮತ್ತು ಇನ್ನೊಂದು ಪ್ರಕರಣದಲ್ಲಿ ಮರಣ ದಂಡನೆಯನ್ನು ವಿಧಿಸಿತ್ತು. ಇದಕ್ಕೂ ಮುನ್ನ 2006ರಲ್ಲಿಯೂ ಝಾ ಅನಿಲ ಮಂಡಲ್ ಎಂಬಾತನನ್ನು ಕೊಂದು ತಲೆ ಮತ್ತು ಕೈಕಾಲುಗಳನ್ನು ತುಂಡರಿಸಿದ ಬಳಿಕ ಶವವನ್ನು ಅದೇ ತಿಹಾರ್ ಜೈಲಿನ ಹೊರಗೆ ಎಸೆದಿದ್ದ. ಈ ಪ್ರಕರಣದಲ್ಲಿ ಆತನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿತ್ತು.
ಕೊಲೆಗಳನ್ನು ಮಾಡಿದ ಬಳಿಕ ಝಾ ತನ್ನನ್ನು ಹಿಡಿಯುವಂತೆ ಹಲವಾರು ಪತ್ರಗಳನ್ನು ಬರೆದು ಪೊಲೀಸರಿಗೆ ಸವಾಲು ಹಾಕಿದ್ದನಲ್ಲದೆ, ಪ್ರತಿ 15 ದಿನಗಳಿಗೊಮ್ಮೆ ಇಂತಹುದೇ ‘ಉಡುಗೊರೆ’ಗಳನ್ನು ಕಳುಹಿಸುವುದಾಗಿ ತಿಳಿಸಿದ್ದ.
2007,ಮೇ 25ರಂದು ಇಲ್ಲಿಯ ಮಿಯಾಂವಾಲಿ ನಗರದಲ್ಲಿ ಆತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು.
1998ರಲ್ಲಿಯೂ ಕೊಲೆ ಪ್ರಕರಣವೊಂದರಲ್ಲಿ ಆತ ಬಂಧಿಸಲ್ಪಟ್ಟಿದ್ದನಾದರೂ ಸಾಕ್ಷಿಗಳ ಕೊರತೆಯಿಂದಾಗಿ ಬಿಡುಗಡೆಗೊಂಡಿದ್ದ. ಇನ್ನೊಂದು ಕೊಲೆ ಪ್ರಕರಣದಲ್ಲಿ ಆತನ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸುವಲ್ಲಿ ಪೊಲೀಸರ ವೈಫಲ್ಯದ ಬಳಿಕ 2007,ಡಿಸೆಂಬರ್‌ನಲ್ಲಿ ನ್ಯಾಯಾಲಯವು ಆತನನ್ನು ಖುಲಾಸೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News