ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ಹೊಸದಿಲ್ಲಿ,ಜ.27: ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯ ಕುರಿತಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರಕ್ಕೆ ನೋಟಿಸ್ ಹೊರಡಿಸಿದ್ದು, ಜ.29ರೊಳಗೆ ಉತ್ತರಿಸುವಂತೆ ನಿರ್ದೇಶ ನೀಡಿದೆ. ಕಾಂಗ್ರೆಸ್ ಪಕ್ಷ ಮತ್ತು ಅರುಣಾಚಲ ಪ್ರದೇಶ ವಿಧಾನಸಭೆಯ ಸ್ಪೀಕರ್ ನಬಮ್ ರೆಬಿಯಾ ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶವನ್ನು ಕೋರಿದ್ದರು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆ.1ಕ್ಕೆ ನಿಗದಿಗೊಳಿಸಿದೆ.
ಇದಕ್ಕೂ ಮುನ್ನ ನಾಟಕೀಯ ಬೆಳವಣಿಗೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವಂತೆ ಅರುಣಾಚಲ ಪ್ರದೇಶದ ರಾಜ್ಯಪಾಲ ಜ್ಯೋತಿಪ್ರಸಾದ್ ರಾಜಖೋವಾ ಅವರು ಮಾಡಿದ್ದ ಶಿಫಾರಸನ್ನು 15 ನಿಮಿಷಗಳಲ್ಲಿ ತನಗೆ ಸಲ್ಲಿಸುವಂತೆ ರಾಜ್ಯಪಾಲರ ಪರ ವಕೀಲರಿಗೆ ಸೂಚಿಸಿತ್ತು. ಕಾಂಗ್ರೆಸ್‌ನ ಮುಖ್ಯ ಸಚೇತಕ ರಾಜೇಶ ಟಾಕೋ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ನಬಮ್ ಟುಕಿ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿರುವ ರಾಜ್ಯಪಾಲರ ವರದಿ ಮತ್ತು ರಾಷ್ಟ್ರಪತಿಗಳಿಗೆ ಕೇಂದ್ರದ ಶಿಫಾರಸನ್ನು ಅರ್ಜಿಯು ಪ್ರಶ್ನಿಸಿದೆ.
ಕಾಂಗ್ರೆಸ್ ಸಲ್ಲಿಸಿದ್ದ ಮೊದಲ ಅರ್ಜಿಯಲ್ಲಿ ಹಲವಾರು ತಪ್ಪುಗಳಿರುವುದನ್ನು ನ್ಯಾಯಮೂರ್ತಿಗಳಲ್ಲಿ ಓರ್ವರಾದ ಜೆ.ಎಸ್. ಕೆಹರ್ ಬೆಟ್ಟು ಮಾಡಿದ ನಂತರ ಹೊಸದಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.
ಟುಕಿ ಸರಕಾರದ ಕುರಿತು ಕಳೆದ ಒಂದು ತಿಂಗಳಿನಿಂದಲೂ ಉಂಟಾಗಿರುವ ಬಿಕ್ಕಟ್ಟು ಮುಂದುವರಿದಿರುವಂತೆಯೇ ರಾಜ್ಯಪಾಲರ ವಿವೇಚನಾಧಿಕಾರದ ವ್ಯಾಪ್ತಿಯ ಕುರಿತು ಸಂವಿಧಾನದ ನಿಯಮಾವಳಿಗಳನ್ನು ಐವರು ನ್ಯಾಯಾಧೀಶರ ಪೀಠವು ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಸಲ್ಲಿಸಿರುವ ಅರ್ಜಿಯು ಮಹತ್ವವನ್ನು ಪಡೆದುಕೊಂಡಿದೆ.
60 ಸದಸ್ಯ ಬಲದ ವಿಧಾನ ಸಭೆಯಲ್ಲಿ 47 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಅವರ ಪೈಕಿ 21 ಶಾಸಕರು ಬಂಡೆದ್ದ ಬಳಿಕ ತೀವ್ರ ಹಿನ್ನಡೆಯನ್ನು ಅನುಭವಿಸಿತ್ತು. ಟುಕಿ ಸರಕಾರವನ್ನು ಉರುಳಿಸಲು ಬಿಜೆಪಿಯ 11 ಶಾಸಕರು ಬಂಡಾಯ ಕಾಂಗ್ರೆಸ್ ಶಾಸಕರನ್ನು ಬೆಂಬಲಿಸಿದ್ದರು. ಬಳಿಕ 14 ಬಂಡಾಯ ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಲಾಗಿತ್ತು.
ಇಷ್ಟಾದ ಬಳಿಕ ರಾಜ್ಯಪಾಲರು ಡಿ.16ರಂದು ವಿಧಾನ ಸಭೆಯ ಅಧಿವೇಶನವನ್ನು ಕರೆದಿದ್ದರು. ಇಟಾ ನಗರದ ಸಮುದಾಯ ಭವನದಲ್ಲಿ ನಡೆದಿದ್ದ ಈ ಬೈಠಕ್‌ನಲ್ಲಿ ಉಪ ಸ್ಪೀಕರ್ ಅವರು 14 ಬಂಡಾಯ ಕಾಂಗ್ರೆಸ್ ಶಾಸಕರ ಅನರ್ಹತೆಯನ್ನು ಹಿಂದೆಗೆದುಕೊಂಡಿದ್ದರಲ್ಲದೆ, ಸ್ಪೀಕರ್ ಹುದ್ದೆಯಿಂದ ರೆಬಿಯಾ ಅವರನ್ನು ವಜಾಗೊಳಿಸಿದ್ದರು.
ರಾಜ್ಯಪಾಲರು ಮತ್ತು ಉಪ ಸ್ಪೀಕರ್‌ರ ವಿವಿಧ ನಿರ್ಣಯಗಳನ್ನು ರೆಬಿಯಾ ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಅದು ಫೆ.1ರವರೆಗೆ ಈ ನಿರ್ಧಾರಗಳನ್ನು ಅಮಾನತಿನಲ್ಲಿರಿಸಿ ಮಧ್ಯಾಂತರ ಆದೇಶವನ್ನು ಹೊರಡಿಸಿತ್ತು.