ಚಾಂಡಿಗೆ 1.9 ಕೋಟಿ ರೂ. ಲಂಚ ನೀಡಿದ್ದೆ: ಸರಿತಾ ಸೌರ ಫಲಕ ಹಗರಣ
ತಿರುವನಂತಪುರ, ಜ.27: ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತವರ ಸಂಪುಟ ಸಹೋದ್ಯೋಗಿ ಅರ್ಯಾಡೆನ್ ಮುಹಮ್ಮದ್ ಲಂಚ ಪಡೆದಿದ್ದಾರೆಂದು ಆರೋಪಿಸುವ ಮೂಲಕ ಸೌರ ಫಲಕ ಹಗರಣದ ಪ್ರಧಾನ ಆರೋಪಿ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾಳೆ.
ಹಗರಣದ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಶಿವರಾಜನ್ ಆಯೋಗದ ಮುಂದೆ ಕೊಚ್ಚಿಯಲ್ಲಿಂದು ಹೇಳಿಕೆ ನೀಡಿದ ಪ್ರಧಾನ ಆರೋಪಿ ಸರಿತಾ.ಎನ್.ನಾಯರ್, ರಾಜ್ಯದಲ್ಲಿ ಬೃಹತ್ ಸೌರ ವಿದ್ಯುತ್ ಯೋಜನೆ ಸ್ಥಾಪಿಸಲು ಸಹಾಯ ಮಾಡುವುದಕ್ಕಾಗಿ ಚಾಂಡಿಯವರ ಪ್ರಮುಖ ಸಹಾಯಕನಿಗೆ ರೂ.1.90 ಕೋಟಿ ಹಣ ನೀಡಲಾಗಿದೆಯೆಂದು ಆರೋಪಿಸಿದ್ದಾರೆ.
ವಿದ್ಯುತ್ ಸಚಿವ ಅರ್ಯಾಡೆನ್ ಮುಹಮ್ಮದ್‌ರ ಆಪ್ತ ಸಹಾಯಕನಿಗೆ ರೂ.40 ಲಕ್ಷ ತಾನು ನೀಡಿದ್ದೇನೆಂದೂ ಆಕೆ ಹೇಳಿದ್ದಾಳೆ.
ಆದರೆ, ಈ ಆರೋಪ ತಳ್ಳಿ ಹಾಕಿರುವ ಚಾಂಡಿ, ಇದು ಪ್ರಕರಣದಿಂದ ಪಾರಾಗಲು ಸರಿತಾ ನಡೆಸಿರುವ ಪ್ರಯತ್ನವಾಗಿದೆ ಎಂದಿದ್ದಾರೆ.
ತಮಗೆ ಲಂಚ ನೀಡಿದ ಬಳಿಕ ಆಕೆಗೆ ಯಾವ ಲಾಭ ದೊರೆತಿದೆಯೆಂಬುದನ್ನು ಸರಿತಾ ಉಲ್ಲೇಖಿಸಲೆಂದು ಅವರು ಸವಾಲು ಹಾಕಿದ್ದಾರೆ.