ಈ ಸಾವು ನ್ಯಾಯವೇ?
ಹೈದರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಎಂಬ ಸಂಶೋಧನಾ ವಿದ್ಯಾರ್ಥಿ ವ್ಯವಸ್ಥೆಯ ಒತ್ತಡಕ್ಕೆ ಬಲಿಯಾದ. ಇದರಲ್ಲಿ ತಪ್ಪುಯಾರದು ಎಂಬುದನ್ನು ತಿಳಿಯಲು ಕಷ್ಟವಿಲ್ಲ. ಆದರೆ ಸತ್ಯವನ್ನೇ ಹೂತು ಹಾಕುವವರಂತೆ ಈ ಎರಡು ತಂಡಗಳು ಸ್ಪರ್ಧಿಸುತ್ತಿವೆ. ವೈರಿಯ ವೈರಿ ಶತ್ರು ಎಂಬಂತೆ ಇಂತಹ ಹೋರಾಟದಲ್ಲಿ ಪಾಪಿಗಳು ಯಾವುದಾದರೂ ಒಂದು ತಂಡಕ್ಕೆ ಬೇಕಾದವರಾಗಿ ರಕ್ಷಣೆ ಪಡೆಯುತ್ತಾರೆ. ಒಂದು ಪ್ರತಿಭಾನ್ವಿತ, ಅದಲ್ಲದಿದ್ದರೂ ಒಂದು ಯುವ ಬದುಕು, ಬೆಳಕನ್ನು ನೀಡುವ ಇಲ್ಲವೇ ಪಡೆಯುವ ಹೊತ್ತಿಗೆ ಕಮರಿಹೋದ ಈ ದುರಂತದಲ್ಲಿ ಆತನ ಜಾತಿ ಮುಖ್ಯವಾಗುವುದು ಅಸಹ್ಯಕರ. ಆತ ದಲಿತನೇ ಆಗಿದ್ದಲ್ಲಿ ಅದು ನಮ್ಮ ಸಾಮಾಜಿಕ ಅವ್ಯವಸ್ಥೆಯ ಪ್ರತೀಕ. ದಲಿತನಲ್ಲದೆ ಹೋದರೂ ಪರಿಸ್ಥಿತಿಯ ಗಾಂಭೀರ್ಯ, ವಿಷಾದ, ವ್ಯಂಗ್ಯ ಕಡಿಮೆಯೇನೂ ಆಗುವುದಿಲ್ಲ. ಆಡಳಿತ ಸೂತ್ರ ಹಿಡಿದ ಸರಕಾರ ತನ್ನೆಲ್ಲ ವ್ಯಕ್ತಿ-ಸಮಷ್ಟಿ ಪ್ರತಿಷ್ಠೆಗಳನ್ನು ಮೂಲೆಗೊತ್ತಿ ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗುತ್ತದೆನ್ನುವ ವಾತಾವರಣವನ್ನು ಸೃಷ್ಟಿಸಬೇಕು. ಅದು ಬಿಟ್ಟು ರೋಹಿತ್ ವೇಮುಲಾ ದಲಿತನಲ್ಲ ಎಂಬ ಸಬೂಬು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುವುದು ಘೋರ ಅಪರಾಧ. ರೋಹಿತ್ ವೇಮುಲಾ ದಲಿತನಲ್ಲದಿದ್ದರೆ ಆಳುವ ಪಕ್ಷಕ್ಕೆ ಬೀಳುವ ಹೊಡೆತದ ಪರಿಣಾಮ ಕಡಿಮೆಯೆಂಬುದು ಸ್ಪಷ್ಟ. ಈ ದೇಶದಲ್ಲಿ ಕಳೆದ ಆರೇಳು ದಶಕಗಳಿಂದಲೂ ದಲಿತರನ್ನು, ಬಡವರನ್ನು, ಅನಕ್ಷರಸ್ಥರನ್ನು (ಮತ್ತು ಇವೆಲ್ಲವೂ ಸೇರಿಕೊಂಡಂತಿರುವ ಅಲ್ಪಸಂಖ್ಯಾತರನ್ನು) ‘ಮೇಲೆತ್ತುವ’ ಪ್ರಹಸನ ನಡೆದೇ ಇದೆ. ಈ ನಾಟಕದ ಪಾತ್ರಧಾರಿಗಳು ಯುಪಿಎ ಮತ್ತು ಎನ್‌ಡಿಎ ಘಟಕದ ಎಲ್ಲ ಪಕ್ಷಗಳಲ್ಲೂ ಇದ್ದಾರೆನ್ನುವುದೇ ಸೋಜಿಗ ಸಹಜ. ಜಾತಿ ಲೆಕ್ಕಾಚಾರಗಳಲ್ಲೇ ಮಗ್ನರಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವ ರಾಜಕಾರಣಿಗಳು ಜನ ಒಟ್ಟಾಗಿ ಸಮನ್ವಯತೆಯನ್ನು ಹೊಂದದಂತೆ ಜಾಗ್ರತೆಯಿಂದ ನೋಡಿಕೊಳ್ಳುತ್ತಾರೆ. ಧರ್ಮ ಮತ್ತು ಜಾತಿ ಈ ದೇಶಕ್ಕೆ ಒಂದು ಶಾಪವಾಗಿ ಪರಿಣಮಿಸಿದೆಯೆಂಬುದಕ್ಕೆ ವಿವರಣೆ ಬೇಕಾಗಿಲ್ಲ. ಇಂತಹ ಸಂದರ್ಭದಲ್ಲಿ ರೋಹಿತ್ ವೇಮುಲಾರ ಜೀವಕ್ಕೆ ಜಾತಿಯೆಂಬ ಕೊಂಡಿ ಸಿಕ್ಕಿಸುವುದು ಮತ್ತು ಅದರಿಂದ ಮತಗಳ ಲಾಭ-ನಷ್ಟ ಲೆಕ್ಕಾಚಾರ ಹಾಕುವುದು ಅಮಾನವೀಯ; ದುರದೃಷ್ಟಕರ. ಹಿಂದೆಲ್ಲ ಒಂದು ರೈಲು ಅಪಘಾತವಾಗಿ ಜೀವನಷ್ಟವಾದರೆ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡುವ ಲಾಲ್ ಬಹದೂರ್ ಶಾಸ್ತ್ರಿಯವರಂತಹ ಉದಾತ್ತ ರಾಜಕೀಯ ನಾಯಕರಿದ್ದರು. ಆದರೆ ಈಗ ಮೂರೂ ಬಿಟ್ಟು ‘‘ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ’’ ಎಂದು ಹೇಳಿಕೆ ಕೊಡುವುದು, ಅದನ್ನು ಬೆಂಬಲಿಸಿ ಇತರ ಸಹೋದ್ಯೋಗಿಗಳು ‘‘ಇವೆಲ್ಲ ವಿರೋಧ ಪಕ್ಷಗಳ ರಾಜಕೀಯ ಕುತಂತ್ರ’’ ಎನ್ನುವುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷಗಳು ಎಲ್ಲವನ್ನೂ ತತ್ಕಾಲದ ರಾಜಕೀಯವಾಗಿ ಪ್ರತಿಬಿಂಬಿಸುತ್ತಿವೆ. ಮಾನವೀಯವಾಗಿ ನೋಡಬೇಕಾದ ಎಲ್ಲ ದುರಂತಗಳೂ ಇಂತಹ ಕುತ್ಸಿತ ರಾಜಕಾರಣಕ್ಕೆ ತುತ್ತಾಗಿ ಮರೆಯಾಗುವುದು ಪ್ರಜಾತಂತ್ರದ ಅನಾಹುತಗಳಲ್ಲೊಂದು. ಜಿಎಸ್‌ಟಿಯನ್ನು ಹೊರತುಪಡಿಸಿ ಸಂಸತ್ತಿನ ಕಳೆದ ಎರಡು ಅಧಿವೇಶನಗಳ ಎಷ್ಟು ಶೇಷಗಳು ಈಗ ಚರ್ಚೆಯಾಗುತ್ತಿವೆ?
ವ್ಯಕ್ತಿಯೊಬ್ಬ ಸತ್ತಾಗ ಇಲ್ಲವೇ ಇನ್ಯಾವುದೇ ಅಕ್ರಮಕ್ಕೆ ತುತ್ತಾದಾಗ ಅದು ಮುಖ್ಯವಾಗುವುದು ಆ ವ್ಯಕ್ತಿಯ ದೊಡ್ಡಸ್ತಿಕೆಯಿಂದಾಗಿ ಅಲ್ಲ. ಬದಲಿಗೆ, ಆ ಘಟನೆ ಸಮಾಜದ ಮತ್ತು ಸಮಕಾಲೀನ ಪ್ರಸ್ತುತತೆ ಮತ್ತು ಬೀರಬಲ್ಲ/ಮಾಡಬಲ್ಲ ಪ್ರಭಾವದಿಂದಾಗಿ. ದಿನನಿತ್ಯ ಅತ್ಯಾಚಾರಗಳು ನಡೆಯುತ್ತವೆ; ಆದರೆ ನಿರ್ಭಯಾರ ಅತ್ಯಾಚಾರ ದಿಲ್ಲಿಯಲ್ಲಿ ನಡೆದ್ದರಿಂದ ಮತ್ತು ಸಾಕಷ್ಟು ಪ್ರಚಾರವನ್ನು ಪಡೆದು ಹೆಣ್ಣೊಬ್ಬಳ ಸುರಕ್ಷಿತತೆಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿತು. ದಿನನಿತ್ಯ ಸಾವುಗಳು ಸಂಭವಿಸುತ್ತವೆ; ಆದರೆ ರೋಹಿತ್ ವೇಮುಲಾರ ಸಾವು ಸಾಂದರ್ಭಿಕ ಕಾರ್ಯಕಾರಣಗಳಿಗಾಗಿ ಮುಖ್ಯವಾಗುವುದರಿಂದ ಇದನ್ನು ‘ಒಂದು ಸಾವು’ ಅಥವಾ ‘ಇನ್ನೂ ಒಂದು ಸಾವು’ ಎಂದಷ್ಟೇ ಪರಿಗಣಿಸುವುದು ತಪ್ಪಾಗುತ್ತದೆ.
ಇಂತಹ ಸಂದರ್ಭದಲ್ಲಿ ಆಳುವ ಮತ್ತು ವಿರೋಧಪಕ್ಷಗಳ ಮತ್ತಿತರ ರಾಜಕಾರಣಿಗಳು ಸಹಜವಾಗಿಯೇ ಸಂಬಂಧಿತರನ್ನು ಭೇಟಿಮಾಡುತ್ತಾರೆ. ಇದರಲ್ಲಿ ರಾಜಕಾರಣವನ್ನು ಗುರುತಿಸುವವರು ರಾಜಕಾರಣದ ಋಣವನ್ನು ಗುರುತಿಸುವುದೇ ಇಲ್ಲ. ರೋಹಿತ್ ವೇಮುಲಾರ ಸಾವಿನ ನಂತರ ಅಲ್ಲಿಗೆ ಸ್ಮತಿ ಇರಾನಿ, ವೆಂಕಯ್ಯ ನಾಯ್ಡು ಮುಂತಾದ ಆಳುವ ಪಕ್ಷದ ರಾಜಕಾರಣಿಗಳು ಭೀತಮನರಾಗಿ ದೂರವುಳಿದು ತನಿಖಾ ತಂಡಗಳನ್ನು, ಪ್ರತಿನಿಧಿಗಳನ್ನು ಕಳುಹಿಸಿದರು. ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಮುಂತಾದ ವಿರೋಧಿ ರಾಜಕಾರಣಿಗಳು ಸ್ವತಃ ಹೋದರು. ಹೀಗೆ ಹೋದದ್ದನ್ನು ಆಳುವ ರಾಜಕಾರಣಿಗಳು ಟೀಕಿಸಿದರು. ಹೋದರೂ ಟೀಕೆ; ಅಕಸ್ಮತ್ತಾಗಿ ವಿರೋಧ ಪಕ್ಷದವರು ಹೋಗದೇ ಇದ್ದಿದ್ದರೆ ಅವರಿಗೆ ಈ ಬಗ್ಗೆ ಯಾವುದೇ ಕಾಳಜಿಯಿಲ್ಲವೆಂಬ ದೂರು ಇರುತ್ತಿತ್ತು. ಒಂದು ಸಾವಿನ ಸುತ್ತ ಎಷ್ಟೊಂದು ವಿದ್ಯಮಾನಗಳು!
ರೋಹಿತ್ ವೇಮುಲಾರ ಸಾವಿನ ಕುರಿತು ತನಿಖೆ ನಡೆದು ತಪ್ಪಿತಸ್ಥರು ಶಿಕ್ಷೆಗೊಳಗಾಗುತ್ತಾರೆಂಬ ವಿಶ್ವಾಸ ಅನೇಕರಿಗಿಲ್ಲ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳೂ ಇಂತಹ ಘಟನೆಯ ಹಿನ್ನೆಲೆಯಲ್ಲಿ ತಮ್ಮ ಪ್ರಸಾರ/ಟಿಆರ್‌ಪಿ ದರ ಹೆಚ್ಚಾಗುವಂತೆ ಯತ್ನಿಸುತ್ತಿದ್ದಾರೆಯೇ ವಿನಃ ಪ್ರಾಮಾಣಿಕ ಕಾಳಜಿಯಿರುವಂತೆ ವರ್ತಿಸುತ್ತಿಲ್ಲ. ಸಮಾನಾಂತರ ತನಿಖೆಯನ್ನು ನಡೆಸಿ ದಿಕ್ಕುತಪ್ಪಿಸುವುದೇ ಹೆಚ್ಚು. ಇನ್ನೊಂದಷ್ಟು ದಿನ ಹೋದರೆ ಈ ಘಟನೆ ಮರೆಯಾಗಿ ಯಾವುದೋ ಕ್ರೀಡೆ ಇಲ್ಲವೆ ಸಿನೆಮಾ ಅಥವಾ ಅಕ್ರಮಗಳು ಮತ್ತು ಇನ್ನಿತರ ಅಂತಹ ಮನರಂಜಕಗಳು ಕೇಂದ್ರ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ.
ಇಂತಹ ಸಂದರ್ಭದಲ್ಲಿ ರೋಹಿತ್ ವೇಮುಲಾರ ಸಾವಿನ ಕುರಿತು ನಾವೆಷ್ಟೇ ಆತಂಕಿಸಿದರೂ ಕೊನೆಗೂ ಅವು ಅರಣ್ಯರೋದನವಾಗದಂತೆ, ಅಷ್ಟು ಮಾತ್ರವಲ್ಲ, ಇನ್ನು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಕರ್ತವ್ಯ ಎಲ್ಲರ ಮೇಲಿದೆ.
ಸದ್ಯ ಈತನ ಸಾವು ಕೆಲವು ಬೆಳವಣಿಗೆಗಳನ್ನು ಸಾಧಿಸಿದೆ. ಅಮಾನತುಗೊಂಡ ಇತರ ಸಂಶೋಧನಾ ವಿದ್ಯಾರ್ಥಿಗಳನ್ನು ಮರುಸೇರ್ಪಡೆ ಗೊಳಿಸಲಾಗಿದೆ. ಒಂದು ವೇಳೆ ಅಮಾನತು ಸರಿಯೆಂದಾದರೆ, ರೋಹಿತ್ ವೇಮುಲಾರ ಸಾವಿನ ಹೊರತಾಗಿಯೂ ಅವರ ಅಮಾನತು ರದ್ದಾಗಬಾರದಿತ್ತು. ಅಮಾನತು ರದ್ದಾಗುವಂತಹ ಸಂದರ್ಭವಿದ್ದಿದ್ದರೆ, ಅದಕ್ಕಾಗಿ ರೋಹಿತ್ ವೇಮುಲಾರ ಸಾವಿಗೆ ಕಾಯಬೇಕಿತ್ತೇ? ಸಂಬಂಧಿತ ಹಿತಾಸಕ್ತಿಗಳು ಹೀಗೆ ಭಯಾನಕ ಪರಿಣಾಮ ಗಳು ಎದುರಾಗಬಹುದೆಂಬ ಊಹೆಯಿಲ್ಲದಷ್ಟು ಮೂಢರೇ ಅಥವಾ ಸಂವೇದನಾರಹಿತರೇ?
ಎರಡು:
ವಿಶ್ವವಿದ್ಯಾನಿಲಯವು ಎಂಟು ಲಕ್ಷ ರೂಪಾಯಿಗಳ ಪರಿಹಾರ ವನ್ನು ಘೋಷಿಸಿದೆ. ಅದನ್ನು ಮೃತನ ತಾಯಿ ತಿರಸ್ಕರಿಸಿದ್ದಾರೆ. ಪ್ರಾಯಃ ಈ ತಿರಸ್ಕಾರಕ್ಕೆ ಪ್ರತಿಭಟನಾಕಾರರ ಒತ್ತಾಯವೇ ಕಾರಣವಿರಬಹುದು. ಆಕೆ ಅದನ್ನು ಸ್ವೀಕರಿಸಿದರೆ ರೋಹಿತ್ ವೇಮುಲಾರ ಸಾವು ತನ್ನ ಘನತೆ ಮತ್ತು ಗುರುತ್ವವನ್ನು ಕಳೆದುಕೊಳ್ಳುತ್ತಿತ್ತೇ? ಸಾವಿಗೆ ಹಣದಿಂದ ಬೆಲೆಕಟ್ಟಲಾಗದು. ಆದರೆ ಇಂತಹ ಪರಿಹಾರಗಳು ತಕ್ಷಣದ ನೋವನ್ನು ಶಮನಗೊಳಿಸುವ ಚಿಕಿತ್ಸೆ. ಮೋಟಾರು ವಾಹನ ಅಪಘಾತಗಳಲ್ಲಿ ಇಂತಹ ಪರಿಹಾರಗಳು ಹಲವು ವರ್ಷಗಳ ಅವಿರತ ಹೋರಾಟದ ನಂತರವೇ ಸಿಕ್ಕುತ್ತವೆ. ಅಷ್ಟು ಹೊತ್ತಿಗೆ ಪರಿಹಾರ ಕೋರಿದವರು ನಿರಾಸೆಯ ಅಂಚಿನಲ್ಲಿರುತ್ತಾರೆ. ಆದರೂ ಪಡೆಯುತ್ತಾರೆ. ಏಕೆಂದರೆ ಅದು ಬಿಟ್ಟರೆ ಬೇರೆ ದಿಕ್ಕಿಲ್ಲ. ಆದ್ದರಿಂದ ತೀರಾ ಹಣವಂತರ ಹೊರತಾಗಿ ಪರಿಹಾರದ ಅಗತ್ಯವಿರುವ ಇತರರು ಅದನ್ನು ನಿರಾಕರಿಸುವುದು ಸರಿಯಲ್ಲವೆನ್ನಿಸುತ್ತದೆ. ಮೂರು: ರೋಹಿತ್ ವೇಮುಲಾರ ಸಾವಿನ ಕಾರಣಕ್ಕೆ ಮೇಲ್ಜಾತಿಯನ್ನು ಗುರಿಮಾಡಿಕೊಂಡು ದ್ವೇಷ ಬೆಳೆಸುವುದು ಸಾಮಾಜಿಕ ಕ್ಷೋಭೆಗೆ ಕಾರಣವಾಗಬಹದು. ಈಗಾಗಲೇ ರಾಜಕಾರಣದಲ್ಲಿ ಯುಪಿಎ ಮತ್ತು ಎನ್‌ಡಿಎಗಳ ನಡುವಣ ಘರ್ಷಣೆಯಲ್ಲಿ ಅನೇಕ ದಕ್ಷ ಅಧಿಕಾರಿಗಳು ಬಲಿಯಾಗಿದ್ದಾರೆ. ಸರಕಾರದ ಮುಖವಾಣಿಯಂತಿರುವ ತನಿಖಾ ತಂಡಗಳು ಸಮಾಜದ ಗಮನವನ್ನು ಇತರೆಡೆ ಸೆಳೆಯಲು ಅಗತ್ಯ ನಾಟಕಗಳನ್ನು ಸಿದ್ಧಗೊಳಿಸುತ್ತಾರೆ. ಇದರ ಅಂತಿಮ ಸೋಲು-ಗೆಲುವು ಒಂದು ತಲೆಮಾರಿನಲ್ಲಿ ಇತ್ಯರ್ಥವಾಗುವಂಥದ್ದಲ್ಲ. ಆದರೆ ಈ ಅವಧಿಯಲ್ಲಿ ನಷ್ಟಗೊಂಡ ಬದುಕುಗಳು ಮರಳಿ ಬರುವುದಿಲ್ಲ. ಕಣ್ಣಿಗೆ ಕಣ್ಣೇ ಪರಿಹಾರವಾದರೆ ಜಗತ್ತು ಒಕ್ಕಣ್ಣರ ರಾಜ್ಯವಾಗುಳಿದೀತು ಎಂಬ ಮಹಾತ್ಮರ ಉಕ್ತಿಯನ್ನು ಸಮಾಜ ಸಾಧ್ಯವಾಗಿಸುತ್ತಿದೆಯೋ ಎಂಬ ಸಂಶಯ ಬರುತ್ತಿದೆ. ನಿಜಕ್ಕೂ ಬೇಕಾಗಿರುವುದು ವೆನಿಸಿನ ವರ್ತಕನ ಮಾಂಸದ ಹಸಿವನ್ನು ಕೊನೆಗೊಳಿಸುವ ದೃಶ್ಯ.
ಇನ್ನೊಂದು ಅಂಶವನ್ನು ಗುರುತಿಸಬೇಕು: ನಿರ್ಭಯಾ ಅತ್ಯಾಚಾರದ ದುರಂತದ ನಂತರ ಈ ದೇಶದಲ್ಲಿ ದಂಡ ಪದ್ಧತಿ ಹೆಚ್ಚು ನಿಷ್ಠುರವಾಗಿದೆಯೆಂದೇನೂ ಇಲ್ಲ. ತಪ್ಪಿಸಿಕೊಳ್ಳುವವರಿಗೆ ಸಾವಿರ ದಾರಿಗಳು ಈಗಲೂ ಲಭ್ಯವಿವೆ. ಎಲ್ಲಿಯವರೆಗೆ ಕಾನೂನಿನಡಿ ನ್ಯಾಯ ತೀರ್ಮಾನವಾಗುತ್ತದೆಯೋ ಅಲ್ಲಿಯ ವರೆಗೆ ಎಷ್ಟೇ ಸದ್ದಾದರೂ ಕೊನೆಗೆ ನ್ಯಾಯಾಲಯದೊಳಗೆ ನೀಡುವ ಸಾಕ್ಷ್ಯಗಳೇ ಕೊನೆಯ ವಕ್ತಾರರಾಗಿರುತ್ತಾರೆ. ಆದ್ದರಿಂದ ನಾವಾಡುವ ಮಾತು ನಾವು ಕೈಗೊಳ್ಳುವ ಕ್ರಮಗಳು, ನಾವು ತಳೆಯುವ ನಿಲುವು ಎಲ್ಲವೂ ಪ್ರಜಾತಂತ್ರದ ಅನಿವಾರ್ಯ ಅಂಗವಾದ ನ್ಯಾಯನಿರ್ಣಯವನ್ನು ಬಾಧಿಸುವ ರೀತಿಯಲ್ಲಿರಬಾರದು.
ಪುಣೆಯ ಎಫ್‌ಟಿಐಐಯ ವಿದ್ಯಾರ್ಥಿಗಳು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಎಲ್ಲ ವಿರೋಧ ಪಕ್ಷಗಳ ಮತ್ತು ಚಿಂತಕರ ಬೆಂಬಲ ಸಿಕ್ಕಿದಾಗ್ಯೂ ಗಜೇಂದ್ರ ಚೌಹಾಣ್‌ರನ್ನು ಸರಕಾರ ಹಿಂದಕ್ಕೆ ಕರೆಸಿಕೊಳ್ಳಲಿಲ್ಲ. ಪ್ರಮುಖ ಪದಗಳಿಗೆಲ್ಲ ಏಕಸಂಸ್ಕೃತಿಯ ಹರಿಕಾರರನ್ನೇ ನೇಮಿಸುತ್ತಿದೆ. ಬಹುಮತವೆಂಬುದು ಎಲ್ಲ ಥರದ ಹಿಟ್ಲರಿಕೆಗೂ ಸಮರ್ಥನೆ ನೀಡುತ್ತಿದೆ. ಎನ್‌ಡಿಎಯ ಯಾವನೇ ಧುರೀಣನನ್ನೂ ಈ ಬಗ್ಗೆ ಕೇಳಿ: ಅವನು ಸಮರ್ಥಿಸುವುದೇ ಯುಪಿಎಯ ಕ್ರಮಗಳನ್ನಾಧರಿಸಿ. ನಾಳೆೆ ತುರ್ತುಸ್ಥಿತಿ ಹೇರಲ್ಪಟ್ಟರೆ ಅದಕ್ಕೆ ಸಮರ್ಥನೆ 1975ರ ತುರ್ತುಸ್ಥಿತಿ. ಹೀಗೆ ಪರಸ್ಪರ ಭ್ರಾತೃತ್ವದ ಈ ವ್ಯವಸ್ಥೆಯಲ್ಲಿ ರೋಹಿತ್ ವೇಮುಲಾರ ಆತ್ಮಕ್ಕೆ ಶಾಂತಿ ಸಿಗುವುದಾದರೂ ಹೇಗೆ?
ನಾವೆಷ್ಟೇ ನಿರಾಕರಿಸಿದರೂ ದೇಶದ ರಾಜಕಾರಣವು ಯುಪಿಎ ಮತ್ತು ಎನ್‌ಡಿಎ ಎಂಬ ಎರಡು ಮುಖ್ಯ ತಂಡಗಳ ಸ್ವತ್ತಾಗಿದೆಯೆಂಬ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅವಕಾಶವಾದಿ ರಾಜಕಾರಣದಲ್ಲಿ ಇವೆರಡು ತಂಡಗಳು ಮತ್ತು ಇವೆರಡನ್ನೂ ಅಗಾಗ್ಗೆ ಬೆಂಬಲಿಸಿಕೊಂಡು ಬಂದಿರುವ ಇತರ ಪಕ್ಷಗಳು ಈ ದೇಶವೆಂದೂ ತಲೆಯೆತ್ತದಂತೆ ಪಾತಾಳಕ್ಕೆ ತಳ್ಳುತ್ತಿವೆ. ಜನರಿಗೆ ಇತರ ಆಯ್ಕೆ ಇನ್ನೂ ಇಲ್ಲ. ಆದ್ದರಿಂದ ಇವೆರಡು ತಂಡಗಳು ವಾತಾಪಿ-ಇಲ್ವಲರಂತೆ ಜನರನ್ನು ಭಕ್ಷಿಸಿಕೊಂಡು ಅಧಿಕಾರವನ್ನು ಪರ್ಯಾಯೋತ್ಸವದಂತೆ ಯುಪಿಎ, ಅದಲ್ಲದಿದ್ದರೆ ಎನ್‌ಡಿಎ ಎಂಬಂತೆ ಬದಲಿಸಿಕೊಳ್ಳುತ್ತಿವೆ. ‘ವಾತಾಪಿ ಜೀರ್ಣೋಭವ’ ಎಂಬ ಅಗಸ್ತ್ಯರ ವರಕ್ಕೆ ಜನ ಕಾಯಬೇಕು. ಅಧಿಕಾರದ ತಿಲೋತ್ತಮೆಯ ಸುತ್ತ ಇವೆರಡೂ ಹೋರಾಡಿ ಸಾಯಬೇಕು. ಅಲ್ಲಿಯ ವರೆಗೆ ರೋಹಿತ್ ವೇಮುಲಾರಂತಹ ಅಸಂಖ್ಯ ದುರ್ದೈವಿ ಜೀವಿಗಳಿಗೆ ಮೋಕ್ಷವಿಲ್ಲ.