×
Ad

ಕ್ರಾಂತಿಕಾರಿ ಚಟುವಟಿಕೆಯ ಮುಂಚೂಣಿಯಲ್ಲಿ ಬಾಲಕಿಯರು: ಇವರಾರೂ ಕ್ಷಮೆ ಯಾಚಿಸಲಿಲ್ಲ!

► ಬ್ರಿಟಿಷ್ ಅಧಿಕಾರಿಯ ಹತ್ಯೆಗೈದಿದ್ದ 14ರ ಹರೆಯದ ಸುನೀತಿ ಚೌಧರಿ-16ರ ಶಾಂತಿ ಘೋಷ್ ► ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

Update: 2025-12-17 14:28 IST

ಶಾಂತಿ ಘೋಷ್ ಮತ್ತು ಸುನೀತಿ ಚೌಧರಿ

ಭಾಗ - 10

ಸುನೀತಿ ಚೌಧರಿಗೆ ಶಾಂತಿ ಘೋಷ್ ಪರಿಚಯವಾಗಿದ್ದು 1929ರಲ್ಲಿ. ಇಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿನಿಯರು. ಶಾಂತಿ ಘೋಷ್ ಒಂದು ವರ್ಷ ಸೀನಿಯರ್. ಇಬ್ಬರೂ ಜುಗಾಂತರ ಸಂಘಟನೆಗೆ ಸೇರ್ಪಡೆಯಾದರು. ಈ ಸಂಘಟನೆಯ ಪ್ರಫುಲ್ಲ ನಂದಿನಿ ಬ್ರಹ್ಮ ಖಡ್ಗ, ಲಾಠಿ ಬಳಕೆಯಲ್ಲಿ ಇಬ್ಬರಿಗೂ ಕಠಿಣ ತರಬೇತಿ ನೀಡಿದ್ದರು. ಈ ವೇಳೆ ಇಬ್ಬರೂ ಸಾಕಷ್ಟು ಕ್ರಾಂತಿಕಾರಿ ಸಾಹಿತ್ಯವನ್ನು ಓದಿಕೊಂಡಿದ್ದರು. ಸುನೀತಿ ಈ ವೇಳೆಗೆ ಬಾಂಬು ತಜ್ಞ ಉಲ್ಲಾಸ್ಕರ್ ದತ್ತ ಅವರಿಂದ ಪ್ರಭಾವಿತಳಾಗಿದ್ದಳು.

ಜುಗಾಂತರ ಸಂಘಟನೆಯಲ್ಲಿ ನೇರ ಹೋರಾಟ ಪುರುಷರೇ ಮಾಡುತ್ತಿದ್ದು ಮಹಿಳೆಯರು ಬಹುತೇಕ ಬೇಹುಗಾರಿಕೆ, ಶಸ್ತ್ರ ಪೂರೈಕೆ, ಆಶ್ರಯ ನೀಡುವುದು ಮುಂತಾದ ತೆರೆಮರೆಯ ಕೆಲಸಕ್ಕೆ ಸೀಮಿತಗೊಂಡಿದ್ದರು. ಸುನೀತಿ ಮತ್ತು ಶಾಂತಿ ಇಬ್ಬರೂ ತಮ್ಮನ್ನು ನೇರ ಮುಂಚೂಣಿ ಕೆಲಸಕ್ಕೆ ನಿಯೋಜಿಸಬೇಕು ಎಂದು ಬೇಡಿಕೆ ಇಟ್ಟರು. ಅವರ ಹಠಕ್ಕೆ ಮಣಿದ ಸಂಘಟನೆ ಅವರಿಗೆ ಬಂದೂಕಿನ ತರಬೇತಿಯನ್ನೂ ನೀಡಿತು.

ನೇತಾಜಿಯವರು 1931ರಲ್ಲಿ ತ್ರಿಪುರಾ ಜಿಲ್ಲಾ ವಿದ್ಯಾರ್ಥಿ ಸಂಘಟನೆಯ ವಾರ್ಷಿಕ ಅಧಿವೇಶನಕ್ಕೆ ಬಂದಾಗ, ಶಾಂತಿ ಘೋಷ್ ಅವರಲ್ಲಿ ಆಟೋಗ್ರಾಫ್ ಕೇಳಿದಾಗ, ನೇತಾಜಿ, ‘‘ಓ ಮಾತೃ ಶಕ್ತಿಯೇ, ನಿಮ್ಮ ಘನತೆಗಾಗಿ ನಿಮ್ಮ ಕೈಗಳು ಶಸ್ತ್ರ ಹಿಡಿಯಲಿ!’’ ಎಂದು ಬರೆದಿದ್ದರು.

ಸುನೀತಿ ಮತ್ತು ಶಾಂತಿ ಘೋಷ್ ಕ್ರಾಂತಿಯ ನೇರ ಕಾರ್ಯಾಚರಣೆಗೆ ಇಳಿದದ್ದು ಈ ಭೌತಿಕ, ಮಾನಸಿಕ ತರಬೇತಿಯ ಬಳಿಕ.

ಮಾರ್ಚ್, 1930ರಂದು ಚಾರ್ಲ್ಸ್ ಬಕ್ ಲಾಂಡ್ ಸ್ಟೀವನ್ಸ್ ಎಂಬಾತ ತ್ರಿಪುರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನಿಯುಕ್ತಿಗೊಳ್ಳುತ್ತಾನೆ. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಆರಂಭವಾಗಿದ್ದೇ ದೇಶಾದ್ಯಂತ ಚಳವಳಿಗಾರರ ಬಂಧನ ಸತ್ರ ಆರಂಭವಾಯಿತು. ತ್ರಿಪುರಾದಲ್ಲೂ ಇಂಥಾ ಬಂಧನಗಳಾದವು. ಈ ಜಿಲ್ಲಾಧಿಕಾರಿ ಅಷ್ಟಕ್ಕೇ ನಿಲ್ಲದೆ ಬಂಧಿತರಿಗೆ ಹಿಂಸೆ ನೀಡಲೂ ಆರಂಭಿಸಿದ. ಈ ಬಂಧಿತ ಹೋರಾಟಗಾರರ ಮನೆಯವರ ಮೇಲೂ ಪೊಲೀಸ್ ದಮನಕ್ಕೆ ಅನುಮತಿ ಕೊಟ್ಟ. ಈ ಬಗ್ಗೆ ತೀವ್ರ ಪ್ರತಿಕ್ರಿಯೆ ಬರುತ್ತಿದ್ದಂತೆ ಜೀವಭಯದಿಂದ ಈತ ಕಚೇರಿಗೂ ಹೋಗುವುದು ನಿಲ್ಲಿಸಿ ಪೊಲೀಸ್ ರಕ್ಷಣೆ ಇದ್ದ ತನ್ನ ಮನೆಯಿಂದಲೇ ಆಜ್ಞೆ ಹೊರಡಿಸುತ್ತಿದ್ದ.

ಈತನ ಹತ್ಯೆಗೆ ಜುಗಾಂತರ ಸಂಘಟನೆಯ ಪ್ರತಿಯೊಬ್ಬನೂ ತುದಿಗಾಲಲ್ಲಿ ನಿಂತಿದ್ದರೂ ಆತನ ಬಂಗಲೆ ಒಳಗೆ ಪ್ರವೇಶ ಪಡೆಯುವುದೇ ಸವಾಲಾಗಿತ್ತು. ಸುನೀತಿ ಮತ್ತು ಶಾಂತಿ ಘೋಷ್ ಈ ಸವಾಲು ಸ್ವೀಕರಿಸಿದರು.

ಆ ದಿನ ಡಿಸೆಂಬರ್ 14, 1931ರಂದು ಮನೆಯೆದುರು ಒಂದು ಎತ್ತಿನ ಗಾಡಿ ನಿಂತಿತು. ಅದರಿಂದ ಇಬ್ಬರು ಕಿಲಿಕಿಲಿ ನಗುತ್ತಿದ್ದ ಶಾಲಾ ಬಾಲಕಿಯರು ಇಳಿದರು. ಸಾಹೇಬರನ್ನು ಭೇಟಿ ಮಾಡಲು ಅನುಮತಿ ಕೇಳಿದರು. ಬಂದ ಉದ್ದೇಶ ಕೇಳಿದಾಗ ‘‘ನಮ್ಮ ಶಾಲೆಯ ಈಜು ಸ್ಪರ್ಧೆಗೆ ಅನುಮತಿಗಾಗಿ ಅರ್ಜಿ’’ ಎಂದರು. ಆ ಅರ್ಜಿ ತೋರಿಸಿ ಇದಕ್ಕೆ ಜಿಲ್ಲಾಧಿಕಾರಿ ಅನುಮತಿ ಬೇಕಿತ್ತು ಎಂದರು ಬಾಲಕಿಯರು.

ಸರಿ, ಒಳಗೆ ಬಿಡಲಾಯಿತು. ಮನೆಯ ಕಚೆೇರಿಯಲ್ಲಿ ಸ್ಟೀವನ್ಸ್ ತನ್ನ ಅಸಿಸ್ಟೆಂಟ್ ಅಧಿಕಾರಿಯೊಂದಿಗೆ ಕೂತಿದ್ದನು.

ಈ ಅರ್ಜಿ ಕೊಟ್ಟು ಬಾಲಕಿಯರು ಮುಗ್ಧ ಆರಾಧನಾ ಭಾವದ ನಗುವಲ್ಲಿ, ‘‘ಸಾರ್, ಇದಕ್ಕೆ ನಿಮ್ಮ ಅನುಮತಿ ದಯವಿಟ್ಟು ಕೈಯಲ್ಲಿ ಬರೆದು ಕೊಡಿ’’ ಎಂದರು.

ಸ್ಟೀವನ್ಸ್ ಸ್ಪರ್ಧೆಗೆ ಅನುಮತಿ ನೀಡಿ ಸಹಿ ಹಾಕಿ; ಆಮೇಲೆ ಇಬ್ಬರು ಅಧಿಕಾರಿಗಳು ಒಳಗೆ ಹೋಗಿ ಸ್ಟೀವನ್ಸ್ ಒಬ್ಬನೇ ಹೊರ ಬಂದನು. ನೋಡಿದರೆ ಈ ಇಬ್ಬರೂ ಬಾಲಕಿಯರ ನಗು ಮಾಯವಾಗಿತ್ತು. ಇಬ್ಬರೂ ಚೂಪು ಕಣ್ಣಲ್ಲಿ ಅವನನ್ನೇ ದಿಟ್ಟಿಸಿ ಮೈ ಮುಚ್ಚಿಕೊಂಡಿದ್ದ ಶಾಲು ಎಸೆದರು. ಇಬ್ಬರ ಕೈಲೂ ರಿವಾಲ್ವರ್ ಇತ್ತು. ಪಾಯಿಂಟ್ ಬ್ಲಾಂಕ್ ರೇಂಜಲ್ಲಿ ಸ್ಟೀವನ್ಸ್ ಕಣ್ಣೆವೆ ತೆಗೆಯುವಷ್ಟರಲ್ಲಿ ಇಬ್ಬರೂ ಗುಂಡು ಹಾರಿಸಿದರು. ಸ್ಟೀವನ್ಸ್ ಸ್ಥಳದಲ್ಲೇ ಅಸು ನೀಗಿದ.

ಗುಂಡಿನ ಸದ್ದಿಗೆ ದಿಗ್ಭ್ರಾಂತರಾದ ಪೊಲೀಸರು ಓಡಿ ಬಂದು ಈ ಇಬ್ಬರನ್ನೂ ಬಂಧಿಸಿದರು. ಇಬ್ಬರೂ ತಪ್ಪಿಸಿಕೊಳ್ಳುವ ಯತ್ನ ಮಾಡಲಿಲ್ಲ.

ಸ್ಟೀವನ್ಸ್ ಹತ್ಯೆ ನಡೆದಿದ್ದು ಹೀಗೆ.

ಈ ಹತ್ಯೆಯ ಬಳಿಕದ ಪೊಲೀಸ್ ಹಿಂಸೆಗೆ ಈ ಇಬ್ಬರೂ ಎಷ್ಟು ತಯಾರಿ ನಡೆಸಿದ್ದರೆಂದರೆ ತರಬೇತಿಯ ಅವಧಿಯಲ್ಲಿ ತಮ್ಮ ಉಗುರಿಗೆ ತಾವೇ ಸೂಜಿ ಚುಚ್ಚಿಸಿಕೊಂಡು ಅದರ ಅಸಾಧ್ಯ ಹಿಂಸೆ ಅನುಭವಿಸುವ ಅನುಭವ ಪಡೆದಿದ್ದರಂತೆ.

ಬಾಲಕಿಯರಾದ 14 ವರ್ಷದ ಸುನೀತಿ ಚೌಧರಿ ಮತ್ತು 16ರ ಹರೆಯದ ಶಾಂತಿ ಘೋಷ್ ಇಬ್ಬರಿಗೂ ಅಪ್ರಾಪ್ತ ವಯಸ್ಕರಾದ ಕಾರಣ ಏಳು ವರ್ಷಗಳ ಜೈಲು ಶಿಕ್ಷೆಯಾಯಿತು.

ಕೋರ್ಟು ವಿಚಾರಣೆಯುದ್ದಕ್ಕೂ ಕೂರಲು ಕುರ್ಚಿ ಕೊಡದ ಕಾರಣ ಇಬ್ಬರೂ ಜಡ್ಜ್‌ಗೆ ಬೆನ್ನು ಹಾಕಿ ನಿಂತಿದ್ದರು! ವಿಚಾರಣೆಯುದ್ದಕ್ಕೂ ಉಲ್ಲಾಸದಿಂದ ಇದ್ದ ಈ ಇಬ್ಬರೂ ತೀರ್ಪಿನ ದಿನ ಮಾತ್ರ ನಿರಾಸೆಪಟ್ಟಿದ್ದರು.

‘‘ನಮಗೆ ಗಲ್ಲು ಶಿಕ್ಷೆ ಸಿಗಬೇಕಿತ್ತು!’’ ಎಂದು ಉದ್ಗರಿಸಿದ್ದರು.

1939ರಲ್ಲಿ ಇವರ ಬಿಡುಗಡೆಯಾಯಿತು.

ಬಿಡುಗಡೆಯ ಬಳಿಕ ಇಬ್ಬರೂ ತಮ್ಮ ಶಿಕ್ಷಣ ಪೂರೈಸಿದರು. ಶಾಂತಿ ಘೋಷ್ ಆರಂಭದಲ್ಲಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತೆಯಾಗಿದ್ದರು. ಸ್ವಾತಂತ್ರ್ಯಾನಂತರ ಅವರು ಕಾಂಗ್ರೆಸ್ ಸೇರಿ ಬಂಗಾಲದ ವಿಧಾನ ಸಭೆಗೆ 1952 ರಿಂದ 1968ರವರೆಗೆ ಆಯ್ಕೆಯಾದರು. ಸುನೀತಿ ಚೌಧರಿ ವೈದ್ಯೆಯಾಗಿ ಸೇವೆ ಸಲ್ಲಿಸಿದರು. ತನ್ನ ಸಹೋದರನ ಗೆಳೆಯ, ರಾಜಕೀಯ ಕಾರ್ಯಕರ್ತನನ್ನು ಮದುವೆಯಾದರು. ಶಾಸಕಿಯಾಗುವ ಅವಕಾಶ ಇದ್ದಾಗಲೂ ಅದನ್ನು ನಿರಾಕರಿಸಿ ಬಡವರ ವೈದ್ಯೆಯಾಗಿ ಗಂಡ-ಮಗಳೊಂದಿಗೆ ಬದುಕು ಸಾಗಿಸಿದರು. ಸುನೀತಿ 1988ರಲ್ಲಿ ತೀರಿಕೊಂಡರೆ ಶಾಂತಿ ಘೋಷ್ 1989ರಲ್ಲಿ ತೀರಿಕೊಂಡರು.

ಆರೆಸ್ಸೆಸ್ ಇವರನ್ನೆಲ್ಲಾ ಹೆಚ್ಚು ಪ್ರಚಾರ ಮಾಡಿದ್ದೇ ಇಲ್ಲ. ಆರೆಸ್ಸೆಸ್‌ನ ಮಹಿಳೆಯರು ಯಾರೂ ಆ ಕಾಲದಲ್ಲಿ ಬೀದಿಗಿಳಿದದ್ದೂ ಇಲ್ಲ. ಮಹಿಳೆಯ ಪಾತ್ರ ಪವಿತ್ರ ಗೃಹಿಣಿಯಾಗಿರುವುದು ಎಂದು ಆರೆಸ್ಸೆಸ್ ಭಾವಿಸಿತ್ತು. ಈಗಲೂ ಆಗಾಗ ಮಕ್ಕಳನ್ನು ಹಡೆಯಿರಿ ಎಂದು ಕರೆಕೊಡುವುದು ಬಿಟ್ಟರೆ ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧ ಎದ್ದೇಳಿ ಎಂದು ಸುತಾರಾಂ ಆರೆಸ್ಸೆಸ್ ಹೇಳಿದ್ದಿಲ್ಲ!

ಮಾತೃ ಸ್ವರೂಪಿ ಎಂದು ಪೀಠಕ್ಕೇರಿಸಿ ಸಂಸಾರ, ಮಕ್ಕಳನ್ನು ಪೊರೆಯುವುದು ಸಾರ್ಥಕ್ಯದ ಕೆಲಸ ಎಂಬ ಭಾವನೆ ತಲೆಗೆ ತುಂಬುತ್ತಾ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ್ ಕಂಜರ್ಪಣೆ

contributor

Similar News