ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯುವಲ್ಲಿ ಭಾರತ ಸರಕಾರ ವಿಫಲ ಮಾನವ ಹಕ್ಕು ಗುಂಪುಗಳ ವರದಿ
ಲಂಡನ್, ಜ.28: ಭಾರತ ಸರಕಾರವು ಮತೀಯ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ತಡೆಯಲು ‘ವಿಫಲವಾಗಿದೆ’ ಹಾಗೂ ಅದನ್ನು ಟೀಕಿಸುವ ನಾಗರಿಕ ಸಮಾಜದ ಗುಂಪುಗಳ ಮೇಲೆ ನಿರ್ಬಂಧ ಹೇರುತ್ತಿದೆಯೆಂದು ಎರಡು ಜಾಗತಿಕ ಖ್ಯಾತ ಮಾನವ ಹಕ್ಕು ಗುಂಪುಗಳು ಬುಧವಾರ ಆರೋಪಿಸಿವೆ.
ವಿದೇಶಿ ನಿಧಿಯನ್ನು ತಡೆಯುತ್ತಿರುವುದು ಹಾಗೂ ಸರಕಾರೇತರ ಸಂಘಟನೆಗಳು ಹಾಗೂ ಕಾರ್ಯಕರ್ತರ ಮೇಲೆ ಗುರಿಯಿರಿಸುತ್ತಿರುವುದಕ್ಕಾಗಿ ಹ್ಯೂಮನ್ ರೈಟ್ಸ್ ವಾಚ್ ಹಾಗೂ ಆಮ್ನೆಸ್ಟಿ ಇಂಟರ್ನ್ಯಾಶನಲ್‌ಗಳೆಂಬ ಈ ಗುಂಪುಗಳು ಸರಕಾರವನ್ನು ಖಂಡಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಅಭಿವ್ಯಕ್ತಿ ಸ್ವಾತಂತ್ರ ಹಾಗೂ ಮತೀಯ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದಾಳಿಗಳನ್ನು ತಡೆಯಲು ವಿಫಲವಾಗಿದೆಯೆಂದು ಎಚ್‌ಆರ್‌ಡಬ್ಲು ತನ್ನ 2016ರ ಜಾಗತಿಕ ವರದಿಯಲ್ಲಿ ದೂರಿದೆ.
ಅಧಿಕಾರಿಗಳು, ಸರಕಾರ ಅಥವಾ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಟೀಕಿಸುವ ನಾಗರಿಕ ಸಮಾಜ ಗುಂಪುಗಳಿಗೆ ವಿದೇಶಿ ನಿಧಿಯನ್ನು ತಡೆಯುತ್ತಿದ್ದಾರೆ ಹಾಗೂ ನಿರ್ಬಂಧಗಳನ್ನು ಹೆಚ್ಚಿಸುತ್ತಿದ್ದಾರೆಂದು ಅದು ತನ್ನ 659 ಪುಟಗಳ ವರದಿಯಲ್ಲಿ ಹೇಳಿದೆ. ಈ ವರ್ಷ, ವಿರೋಧಾಭಿಪ್ರಾಯದ ಮೇಲೆ ಭಾರತ ಸರಕಾರದ ಗದಾಪ್ರಹಾರವು ದೇಶದ ಅಭಿವ್ಯಕ್ತಿ ಸ್ವಾತಂತ್ರದ ಸುದೀರ್ಘ ಹಾಗೂ ಶ್ರೀಮಂತ ಪರಂಪರೆಯನ್ನು ಕಳೆಗುಂದಿಸಿದೆ. ನಿರಾಕರಣೆ ಹಾಗೂ ಪ್ರತಿಕಾರದ ಬದಲು ಅಧಿಕಾರಿಗಳು ಸಹಿಷ್ಣುತೆ ಹಾಗೂ ಶಾಂತಿಯುತ ಚರ್ಚೆಗಳನ್ನು ಉತ್ತೇಜಿಸಬೇಕು ಮತ್ತು ಹಿಂಸಾಚಾರ ಮಾಡುವವರು ಅಥವಾ ಪ್ರಚೋದನೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಚ್‌ಆರ್‌ಡಬ್ಲುನ ದಕ್ಷಿಣ ಏಶ್ಯಾದ ನಿರ್ದೇಶಕಿ ಮೀನಾಕ್ಷಿ ಗಂಗುಲಿ ಕರೆ ನೀಡಿದ್ದಾರೆ.
ಜನಪ್ರಿಯವಲ್ಲದ ಅಥವಾ ಅಲ್ಪಸಂಖ್ಯಾತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರ ವಿರುದ್ಧ ದೇಶದ್ರೋಹ, ಕ್ರಿಮಿನಲ್ ಮಾನಹಾನಿ ಹಾಗೂ ದ್ವೇಷ ಭಾಷಣ ಕಾನೂನುಗಳನ್ನು ಉಪಯೋಗಿಸಿ ಅಧಿಕಾರಿಗಳು ಕಿರುಕುಳ ನೀಡುತ್ತಾರೆ ಹಾಗೂ ಕ್ರಮಕೈಗೊಳ್ಳುತ್ತಾರೆ. ಪುಸ್ತಕಗಳು, ಚಲನಚಿತ್ರಗಳು ಅಥವಾ ಚಿತ್ರಕಲೆಯ ಮೂಲಕ ತಮ್ಮನ್ನು ವಿರೋಧಿಸಲಾಗಿದೆಯೆಂದು ಪ್ರತಿಪಾದಿಸುವ ಹಿತಾಸಕ್ತಿ ಗುಂಪುಗಳಿಗೆ ಸರಕಾರವು ಸಾಮಾನ್ಯವಾಗಿ ‘ತಡೆಯುವ ಅಧಿಕಾರ’ ನೀಡುತ್ತಿದೆ ಹಾಗೂ ಅಂತಹ ಕೃತಿಗಳನ್ನು ಸೆನ್ಸಾರ್ ಮಾಡುತ್ತದೆ ಅಥವಾ ಲೇಖಕರಿಗೆ ಬೇರೆ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆಯೆಂದು ವರದಿ ಆರೋಪಿಸಿದೆ.
ಆಳುವ ಬಿಜೆಪಿಯ ಕೆಲವು ನಾಯಕರ ಮುಸ್ಲಿಮ್ ವಿರೋಧಿ ಹೇಳಿಕೆಗಳು ಮತೀಯ ಅಲ್ಪಸಂಖ್ಯಾತರಲ್ಲಿ ಅಸುರಕ್ಷೆಯ ಭಾವನೆಯನ್ನು ಮೂಡಿಸಿರುವುದು ಚಿಂತಾಜನಕ, ಪ್ರವೃತ್ತಿಯಾಗಿದೆಯೆಂದಿರುವ ವರದಿ, ಮಾಂಸಕ್ಕಾಗಿ ಹಸುಗಳನ್ನು ಕದ್ದ ಅಥವಾ ಕೊಂದ ಸಂಶಯದಲ್ಲಿ ನಾಲ್ವರು ಮುಸ್ಲಿಮರನ್ನು ಗುಂಪುಗಳು ಹತ್ಯೆ ಮಾಡಿರುವುದನ್ನು ಉದಾಹರಿಸಿದೆ.
ಸರಕಾರವು ಗ್ರೀನ್‌ಪೀಸ್ ಇಂಡಿಯಾಗಳಂತಹ ಸಂಘಟನೆಗಳಿಗೆ ವಿದೇಶಿ ನಿಧಿಯನ್ನು ತಡೆದಿದೆ ಹಾಗೂ ಫೋರ್ಡ್ ಫೌಂಡೇಶನ್ ಸಹಿತ ಇತರ ಹಲವು ಸಂಘಟನೆಗಳ ಮೇಲೆ ಗುರಿಯಿರಿಸಿವೆ. ಅಧಿಕಾರಿಗಳು ತೀಸ್ತಾ ಸೆಟಲ್ವಾಡ್ ಹಾಗೂ ಜಾವೇದ್ ಆನಂದ್‌ರಂತಹ ಕಾರ್ಯಕರ್ತರಿಗೆ ‘ದೇಶ ವಿರೋಧಿಗಳು’ ಎಂಬ ಹಣೆಪಟ್ಟಿ ಹಚ್ಚಿದ್ದಾರೆ. 2002ರ ಗುಜರಾತ್ ಹಿಂಸಾಚಾರ ಸಂತ್ರಸ್ತರಿಗೆ ಅವರು ನ್ಯಾಯ ಕೇಳಿದುದೇ ತಪ್ಪಾಗಿದೆ. ಇಂತಹ ತಂತ್ರಗಳು ಇತರ ಗುಂಪುಗಳ ಕೆಲಸಗಳ ಮೇಲೆ ತಣ್ಣೀರೆರಚಿದ ಪರಿಣಾಮ ಬೀರುತ್ತವೆಯೆಂದು ಎಚ್‌ಆರ್‌ಡಬ್ಲು ಹೇಳಿದೆ.
ಮೋದಿ ಸರಕಾರವು ‘ರಾಜಕೀಯ ಲಾಭಕ್ಕಾಗಿ’ ಕಾರ್ಯಕರ್ತರನ್ನು ಹಾಗೂ ಪ್ರತಿಭಟನೆ ಗುಂಪುಗಳನ್ನು ಗುರಿಯಿರಿಸುತ್ತಿದೆ. ದಿ ಪೀಪಲ್ಸ್ ವಾಚ್‌ನ ಬ್ಯಾಂಕ್ ಖಾತೆಗಳನ್ನು 2012ರಿಂದ ಆಗಾಗ ಸ್ತಂಭನಗೊಳಿಸಲಾಗಿದೆ. ಇದರಿಂದಾಗಿ ಕೆಲವು ಉದ್ಯೋಗಿಗಳನ್ನು ವಜಾ ಮಾಡಬೇಕಾಯಿತು ಹಾಗೂ ಹಲವು ಕಾರ್ಯಕ್ರಮಗಳನ್ನು ಕೈಬಿಡಬೇಕಾಯಿತು. ಸಮಯ ಅಧಿಕಾರದಲ್ಲಿದ್ದ ದಿಲ್ಲಿ ಸರಕಾರವು ಈ ರೀತಿಯ ಕಿರುಕುಳವನ್ನು ಸಮರ್ಥಿಸಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಪಯೋಗಿಸಿಕೊಂಡಿತು. ಅದೇ ಕಾಯ್ದೆಯನ್ನು ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹಾಲಿ ಸರಕಾರ ರಾಜಕೀಯ ಲಾಭಕ್ಕಾಗಿ ಉಪಯೋಗಿಸುತ್ತಿದೆಯೆಂದು ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಆರೋಪಿಸಿದೆ.