×
Ad

ಬ್ರೆಝಿಲ್ ಒಲಿಂಪಿಕ್ಸ್ ಮೇಲೆ ಝಿಕಾ ಕರಿ ನೆರಳು

Update: 2016-01-29 23:39 IST

ಸೋಂಕು ಜಗತ್ತಿನಾದ್ಯಂತ ವೇಗವಾಗಿ ಹರಡುವ ಭೀತಿ

ರಿಯೊ ಡಿ ಜನೈರೊ, ಜ. 29: ದಕ್ಷಿಣ ಅಮೆರಿಕದಾದ್ಯಂತ ವೇಗವಾಗಿ ಹರಡುತ್ತಿರುವ ಝಿಕಾ ವೈರಸ್‌ನ ಕರಿನೆರಳು ಬ್ರೆಝಿಲ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮೇಲೆ ಬಿದ್ದಿದೆ. ಈ ವರ್ಷ ಇಲ್ಲಿ ನಡೆಯಲಿರುವ ಒಲಿಂಪಿಕ್ಸ್ ವೇಳೆ, ಸುಮಾರು 5 ಲಕ್ಷ ಜನರು ಬ್ರೆಝಿಲ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಹಾಗಾಗಿ, ವೈರಸ್ ವಿಶ್ವಾದ್ಯಂತ ಹರಡುವಲ್ಲಿ ಈ ಕ್ರೀಡಾಕೂಟ ಎಷ್ಟರ ಮಟ್ಟಿಗೆ ದೇಣಿಗೆ ನೀಡಬಹುದು ಎಂಬ ಚಿಂತೆ ಆರೋಗ್ಯ ಅಧಿಕಾರಿಗಳನ್ನು ಕಾಡತೊಡಗಿದೆ.

ಝಿಕಾ ವೈರಸ್ ಅಮೆರಿಕಕ್ಕೆ ಹರಡುವ ಸಾಧ್ಯತೆಯ ಬಗ್ಗೆ ಸಾಂಕ್ರಾಮಿಕ ರೋಗ ಪರಿಣತರು ಈಗ ವಿಶೇಷವಾಗಿ ಗಮನ ಹರಿಸಿದ್ದಾರೆ. ಆಗಸ್ಟ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಸುಮಾರು 2 ಲಕ್ಷ ಅಮೆರಿಕನ್ನರು ಬ್ರೆಝಿಲ್‌ಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಅವರು ಅಮೆರಿಕಕ್ಕೆ ವಾಪಸಾದಾಗ, ಬೇಸಿಗೆಯ ಬಿಸಿಗೆ ಚಟುವಟಿಕೆ ಹೆಚ್ಚಿಸಿಕೊಳ್ಳುವ ಸೊಳ್ಳೆಗಳು ರೋಗವನ್ನು ಅಮೆರಿಕದಾದ್ಯಂತ ಹರಡುವ ಭೀತಿ ಹುಟ್ಟಿಕೊಂಡಿದೆ.
2014ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ ವೇಳೆ ಈ ರೋಗ ಬ್ರೆಝಿಲ್‌ಗೆ ಬಂದಿರಬೇಕು ಎಂಬ ಸಂಶಯವನ್ನು ಬ್ರೆಝಿಲ್‌ನ ಸಂಶೋಧಕರು ಹೊಂದಿದ್ದಾರೆ. ಅಂದು ಲಕ್ಷಾಂತರ ಪ್ರವಾಸಿಗರು ಬ್ರೆಝಿಲ್‌ಗೆ ಭೇಟಿ ನೀಡಿದ್ದರು.

ಬ್ರೆಝಿಲ್‌ನಲ್ಲಿ ತಾಂಡವವಾಡುತ್ತಿರುವ ವೈರಸ್‌ನ ಮಾದರಿ ಪೆಸಿಫಿಕ್ ಸಮುದ್ರದ ಪಾಲಿನೇಶ್ಯ ದ್ವೀಪ ಸಮೂಹದಿಂದ ಬಂದಿರಬೇಕು ಎಂದು ವೈರಸ್ ಅಧ್ಯಯನಕಾರರು ಹೇಳುತ್ತಾರೆ.


ಫೆ. 1ರಂದು ಡಬ್ಲುಎಚ್‌ಒ ತುರ್ತು ಸಭೆ

ವಿಶ್ವಸಂಸ್ಥೆ, ಜ. 29: ಝಿಕಾ ವೈರಸ್‌ನ ಸೋಂಕು ಅಮೆರಿಕದ ಖಂಡಗಳಲ್ಲಿ ‘‘ಅತ್ಯಂತ ಅಪಾಯಕಾರಿ’’ ದರದಲ್ಲಿ ಹರಡುತ್ತಿರುವ ಬಗ್ಗೆ ಆರೋಗ್ಯ ಪರಿಣತರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಪ್ರಕರಣಗಳ ಸಂಖ್ಯೆ 40 ಲಕ್ಷಕ್ಕೆ ಹೆಚ್ಚಬಹುದು ಎಂದು ಅವರು ಅಂದಾಜಿಸಿದ್ದಾರೆ.

ಅದೇ ವೇಳೆ, ನಿಗೂಢ ವೈರಸ್ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ತುರ್ತು ಸಭೆಯೊಂದನ್ನು ಕರೆದಿದೆ.
ಝಿಕಾ ವೈರಸನ್ನು ಅಂತಾರಾಷ್ಟ್ರೀಯ ತುರ್ತು ಸ್ಥಿತಿ ಎಂಬುದಾಗಿ ಘೋಷಿಸಬೇಕೇ ಎಂಬ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರು ಫೆಬ್ರವರಿ 1ರಂದು ಸಭೆ ಸೇರಲಿದ್ದಾರೆ ಎಂದು ಅದರ ಮಹಾನಿರ್ದೇಶಕಿ ಮಾರ್ಗರೆಟ್ ಚಾನ್ ಘೋಷಿಸಿದರು.


ವೆನೆಝುವೆಲದಲ್ಲಿ 4,700 ಝಿಕಾ ಪ್ರಕರಣ
 ಕ್ಯಾರಕಸ್ (ವೆನೆಝುವೆಲ), ಜ. 29: ವೆನೆಝುವೆಲದಲ್ಲಿ ಝಿಕಾ ವೈರಸ್ ಸೋಂಕಿನ ಸುಮಾರು 4,700 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
 ಈವರೆಗೆ ದಾಖಲಾಗಿರುವುದಕ್ಕಿಂತ ತುಂಬಾ ಹೆಚ್ಚಿನ ಶಂಕಿತ ಝಿಕಾ ಪ್ರಕರಣಗಳು ದೇಶದಲ್ಲಿ ಇರುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವೆ ಲೂಸಾನಾ ಮೆಲೊ ಸುದ್ದಿಗಾರರಿಗೆ ತಿಳಿಸಿದರು. ಹೆಚ್ಚಿನವರಿಗೆ ತಾವು ಈ ಸೋಂಕಿಗೆ ಒಳಗಾಗಿದ್ದೇವೆ ಎನ್ನುವುದೇ ತಿಳಿದಿರುವುದಿಲ್ಲ, ಯಾಕೆಂದರೆ, ಸಾಮಾನ್ಯವಾಗಿ ವೈರಸ್ ಸೋಂಕು ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ ಎಂದು ಅವರು ಹೇಳಿದರು.

ಮೆದುಳು ಹಾನಿಗೊಂಡ ಮಕ್ಕಳು

ಈ ರೋಗದ ಪ್ರಮುಖ ಅಂಶವೆಂದರೆ, ಅಸಹಜ ರೀತಿಯಲ್ಲಿ ಸಣ್ಣ ತಲೆಯ ಮಕ್ಕಳು ಹುಟ್ಟುತ್ತಾರೆ ಹಾಗೂ ಹುಟ್ಟುವಾಗಲೇ ಅವುಗಳ ಮೆದುಳಿಗೆ ಹಾನಿಯಾಗಿರುತ್ತದೆ.
 2014ರ ಬಳಿಕ ಸುಮಾರು 15 ಲಕ್ಷ ಮಂದಿ ಬ್ರೆಝಿಲ್‌ನಲ್ಲಿ ಈ ವೈರಸ್ ದಾಳಿಗೆ ಗುರಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಇತ್ತೀಚೆಗೆ ಮೆದುಳು ಹಾನಿಗೊಂಡ ಸಣ್ಣ ತಲೆಯ ಮಕ್ಕಳು ಹುಟ್ಟಿದ ಸಾವಿರಾರು ಪ್ರಕರಣಗಳ ಬಗ್ಗೆ ಬ್ರೆಝಿಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ವೈರಸ್‌ನಿಂದ ಸಾಮಾನ್ಯವಾಗಿ ಜೀವಾಪಾಯವೇನೂ ಸಂಭವಿಸುವುದಿಲ್ಲ. ಅದೇ ವೇಳೆ, ಈ ವೈರಸ್‌ನ ಸೋಂಕಿಗೆ ಒಳಗಾದವರು ಯಾವುದೇ ಲಕ್ಷಣಗಳನ್ನೂ ತೋರ್ಪಡಿಸುವುದಿಲ್ಲ.


ಲಸಿಕೆಗೆ ವರ್ಷಗಳೇ ಬೇಕು: ಅಮೆರಿಕ ಸಂಶೋಧಕರು
ಮಯಾಮಿ (ಅಮೆರಿಕ), ಜ. 29: ಝಿಕಾ ವೈರಸ್‌ನ ಸೋಂಕನ್ನು ತಡೆಯುವ ಲಸಿಕೆಯ ಸಂಶೋಧನೆಗೆ ವರ್ಷಗಳೇ ಬೇಕಾಗಬಹುದು ಎಂದು ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕು ರೋಗಗಳ ಸಂಸ್ಥೆಯ ನಿರ್ದೇಶಕ ಆ್ಯಂಟನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ.
ಸೊಳ್ಳೆಯಿಂದ ಹರಡುವ ಸಂಬಂಧಿತ ಇತರ ವೈರಸ್‌ಗಳ ಬಗ್ಗೆ ಈಗಾಗಲೇ ನಡೆಸಲಾಗಿರುವ ಸಂಶೋಧನೆಯ ಆಧಾರದಲ್ಲಿ, ಝಿಕಾ ವೈರಸ್‌ಗೆ ಲಸಿಕೆ ಕಂಡುಹಿಡಿಯುವ ಎರಡು ವಿಧಾನಗಳಲ್ಲಿ ಅಮೆರಿಕ ಸರಕಾರ ತೊಡಗಿಕೊಂಡಿದೆ ಎಂದು ಅವರು ತಿಳಿಸಿದರು.
ಝಿಕಾ ವೈರಸ್ ಬಗ್ಗೆ 1947ರಲ್ಲೇ ದಾಖಲಾಗಿದ್ದರೂ, ಇತ್ತೀಚಿನವರೆಗೂ ಅದು ಅಲ್ಲಲ್ಲಿ ಸಣ್ಣ ಪ್ರಮಾಣದ ಸೋಂಕನ್ನಷ್ಟೇ ಹರಡುತ್ತಿತ್ತು. ಅದರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News