×
Ad

ಝಿಕಾ ವೈರಸ್ ವಿರುದ್ಧ ಭಾರತದ ಯುದ್ಧ ಶುರು

Update: 2016-01-29 23:42 IST

ಹೊಸದಿಲ್ಲಿ,ಜ.29: ತ್ವರಿತವಾಗಿ ಹರಡುತ್ತಿರುವ ಝಿಕಾ ವೈರಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಭೀತಿ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಚುರುಕಾಗಿರುವ ಭಾರತವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಣಿಯಾಗುತ್ತಿದೆ. ಝಿಕಾ ಪೀಡಿತ ದೇಶಗಳಿಗೆ ಪ್ರಯಾಣಿಸುವವರಿಗಾಗಿ ಮತ್ತು ಅಲ್ಲಿಂದ ಬರುವವರಿಗಾಗಿ ಪ್ರಯಾಣ ಮಾರ್ಗಸೂಚಿಯನ್ನು ರೂಪಿಸಲು ಆರೋಗ್ಯ ಸಚಿವಾಲಯವು ಶುಕ್ರವಾರ ತಾಂತ್ರಿಕ ಸಮಿತಿಯೊಂದನ್ನು ರಚಿಸಿದೆ.
ಗರ್ಭದೊಳಗಿನ ಭ್ರೂಣಗಳ ಮೇಲೆಯೇ ದಾಳಿ ನಡೆಸುವ ಮೂಲಕ ಗರ್ಭಿಣಿ ಮಹಿಳೆಯರಿಗೆ ಭಾರೀ ಅಪಾಯದ ಆತಂಕವನ್ನು ಸೃಷ್ಟಿಸಿರುವ ಝಿಕಾ ವೈರಸ್ ಮಧ್ಯ ಮತ್ತು ದಕ್ಷಿಣ ಅಮೆರಿಕ ಹಾಗೂ ಕೆರಿಬ್ಬಿಯನ್ ದ್ವೀಪಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾವಳಿಯೆಬ್ಬಿಸಿದೆ.
ಆದರೆ ಝಿಕಾ ವೈರಸ್‌ನ ವಾಹಕವಾಗಿರುವ ಈಡಿಸ್ ಈಜಿಪ್ಟೈ ಸೊಳ್ಳೆ ಭಾರತಕ್ಕೆ ಹೆಚ್ಚಿನ ಕಳವಳವನ್ನುಂಟು ಮಾಡಿದೆ. ವ್ಯಾಪಕವಾಗಿರುವ ಈ ಸೊಳ್ಳೆಯು ದೇಶಾದ್ಯಂತ ಪ್ರತಿವರ್ಷ ನೂರಾರು ಸಾವುಗಳಿಗೆ ಕಾರಣವಾಗಿರುವ ಡೆಂಗ್ ವೈರಸ್‌ನ ವಾಹಕವೂ ಹೌದು.ಜ್ವರ,ಮೈಕೈ ನೋವು ಮತ್ತು ವಾಕರಿಕೆಯ ಜೊತೆಗೆ ಕೆಂಗಣ್ಣು ಬೇನೆ ಮತ್ತು ದದ್ದುಗಳು ಕಾಣಿಸಿಕೊಂಡಿದ್ದರೆ ವೈದ್ಯರನ್ನು ಸಂಪರ್ಕಿಸುವಂತೆ ಪ್ರಯಾಣಿಕರಿಗೆ ಸೂಚನಾ ಫಲಕಗಳನ್ನು ಪ್ರದರ್ಶಿಸುವಂತೆ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳಿಗೆ ನಿರ್ದೇಶ ನೀಡಲಾಗುವುದು ಎಂದು ಸಚಿವಾಲಯವು ತಿಳಿಸಿದೆ. ಸೋಂಕುಪೀಡಿತ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದರೆ ಝಿಕಾ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News