ಗುಜರಾತ್ ಹತ್ಯಾಕಾಂಡ : ಐಪಿಎಸ್ ಅಧಿಕಾರಿ ರಾಹುಲ್ ಶರ್ಮ ವಿರುದ್ಧದ ದೋಷಾರೋಪ ಪಟ್ಟಿಯನ್ನು ರದ್ದು ಪಡಿಸಿದ ಸಿಎಟಿ
ಹೊಸದಿಲ್ಲಿ , ಜ ೩೦ : ಗುಜರಾತ್ ನ ನಿವೃತ್ತ ಐಪಿಎಸ್ ಅಧಿಕಾರಿ ರಾಹುಲ್ ಶರ್ಮ ಅವರ ವಿರುದ್ಧ ರಾಜ್ಯ ಸರಕಾರ ಹಾಕಿದ್ದ ಇಲಾಖಾ ದೋಷಾರೋಪ ಪಟ್ಟಿಯನ್ನು ಕೇಂದ್ರೀಯ ಆಡಳಿತ ನ್ಯಾಯಪೀಠ (ಸಿ ಎ ಟಿ ) ರದ್ದು ಮಾಡಿದೆ. ೨೦೦೨ ಗುಜರಾತ್ ಹತ್ಯಾಕಾಂಡದ ತನಿಖೆ ನಡೆಸುತ್ತಿದ್ದ ನಾನಾವತಿ ತನಿಖಾ ಆಯೋಗಕ್ಕೆ ಆ ಸಂದರ್ಭದಲ್ಲಿ ಅಹ್ಮದಾಬಾದ್ ನಿಂದ ಮಾಡಲಾದ ಪ್ರಚೋದನಕಾರಿ ದೂರವಾಣಿ ಕರೆಗಳ ವಿವರಗಳನ್ನು ಸಲ್ಲಿಸಿದ್ದಕ್ಕಾಗಿ ರಾಹುಲ್ ಶರ್ಮ ವಿರುದ್ಧ ರಾಜ್ಯ ಸರಕಾರ ಕ್ರಮ ಕೈ ಗೊಂಡಿತ್ತು. ಆದರೆ ಅದನ್ನು ಸಿ ಎ ಟಿ ರದ್ದು ಮಾಡಿರುವುದು ಮಾತ್ರವಲ್ಲದೆ ದಕ್ಷ ಅಧಿಕಾರಿಯ ವಿರುದ್ಧವೇ ಇಂತಹ ಕ್ರಮ ಕೈಗೊಂಡಿದ್ದಕ್ಕೆ ಗುಜರಾತ್ ಸರಕಾರಕ್ಕೆ ಚಾಟಿ ಬೀಸಿದೆ.
"ಸತ್ಯ ಕಂಡು ಹಿಡಿಯಲು ಸಹಕರಿಸಿದ ಅಧಿಕಾರಿಯ ವಿರುದ್ಧವೇ ದೋಷಾರೋಪ ಪಟ್ಟಿ ಸಲ್ಲಿಸುವ ಮೂಲಕ ಗುಜರಾತ್ ಸರಕಾರ ಗಾಯದ ಮೇಲೆ ಬರೆ ಎಳೆದಿದೆ. ' ಸತ್ಯಮೇವ ಜಯತೆ ' ಗೆ ಯಾವುದೇ ಮಹತ್ವ ಇಲ್ಲವೇ " ಎಂದು ಸಿ ಎ ಟಿ ಸರಕಾರವನ್ನು ಪ್ರಶ್ನಿಸಿದೆ.
ಗುಜರಾತ್ ಹತ್ಯಾಕಾಂಡ ನಡೆದಾಗ ಕೆಲವು ನಿರ್ದಿಷ್ಟ ವ್ಯಕ್ತಿಗಳು ಮಾಡಿದ ಕರೆಯ ವಿವರಗಳನ್ನು ತನಿಖಾ ಸಂಸ್ಥೆ ಕೇಳಿತ್ತು. ಆದರೆ ಇದ್ದಕ್ಕಿದ್ದಂತೆ ಈ ಕರೆ ವಿವರಗಳು "ಕಾಣೆ"ಯಾಗಿದ್ದವು. ಆದರೆ ಕರೆ ವಿವರಗಳ ಒಂದು ಪ್ರತಿ ಪಡೆದಿದ್ದ ರಾಹುಲ್ ಶರ್ಮ ಅವರು ಅದನ್ನು ನಾನಾವತಿ ಆಯೋಗಕ್ಕೆ ಸಲ್ಲಿಸಿದ್ದು ಅಂದಿನ ನರೇಂದ್ರ ಮೋದಿ ಸರಕಾರವನ್ನು ಭಾರಿ ಮುಜುಗರಕ್ಕೆ ಸಿಲುಕಿಸಿತ್ತು.
ಇದಕ್ಕಾಗಿ ಮೋದಿ ಸರಕಾರ ರಾಹುಲ್ ಶರ್ಮ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿತ್ತು. ಮೊದಲು ರಾಹುಲ್ ಶರ್ಮ ಕರೆ ವಿವರಗಳನ್ನು ತಿರುಚಿದ್ದಾರೆ ಎಂದು ಅದು ಆರೋಪ ಮಾಡಿತು . ಆದರೆ ಆ ಹುರುಳಿಲ್ಲದ ಆರೋಪ ನಿಲ್ಲಲಿಲ್ಲ . ನಂತರ ಪಟ್ಟು ಬಿಡದ ಸರಕಾರ ಮೊದಲು ಶರ್ಮಗೆ ಕರೆ ವಿವರ ಸಿಕ್ಕಿದ್ದರಿಂದ ಅದು ಕಳೆದುಹೊಗಲು ಅವರೇ ಕಾರಣ ಎಂದು ಆರೋಪಿಸಿತು . ಆದರೆ ಈ ಎಲ್ಲ ಆರೋಪಗಳಿಂದ ಶರ್ಮ ಮುಕ್ತರಾಗಿದ್ದಾರೆ.