×
Ad

ಸೆಂಟ್ರಲ್ ಆಫ್ರಿಕದಲ್ಲಿ ವಿಶ್ವಸಂಸ್ಥೆ ಸೈನಿಕರಿಂದ ಲೈಂಗಿಕ ದೌರ್ಜನ್ಯ

Update: 2016-01-30 23:33 IST

ವಿಶ್ವಸಂಸ್ಥೆ, ಜ. 30: ಬಾಂಗ್ಲಾದೇಶ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಮೊರೊಕ್ಕೊ, ನೈಜರ್ ಮತ್ತು ಸೆನೆಗಲ್‌ಗಳಿಗೆ ಸೇರಿದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸದಸ್ಯರು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನಲ್ಲಿ ಅಪ್ರಾಪ್ತ ವಯಸ್ಸಿನವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
ಆರೋಪಕ್ಕೊಳಗಾದ ತನ್ನ ಶಾಂತಿ ಪಾಲನಾ ಸೈನಿಕರ ರಾಷ್ಟ್ರೀಯತೆಗಳನ್ನು ವಿಶ್ವಸಂಸ್ಥೆ ಬಹಿರಂಗಪಡಿಸಿರುವುದು ಇದೇ ಮೊದಲ ಬಾರಿಯಾಗಿದೆ.
ಒಟ್ಟು ಎಂಟು ಸೈನಿಕರು ಮತ್ತು ಇಬ್ಬರು ಪೊಲೀಸರು ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ ನೈಜರ್ ದೇಶದ ನಾಲ್ವರು ಸೈನಿಕರು ಕಳೆದ ವರ್ಷದ ಜುಲೈಯಿಂದ ಅಕ್ಟೋಬರ್‌ವರೆಗೆ ಇಬ್ಬರು ಅಪ್ರಾಪ್ತ ವಯಸ್ಕರೊಂದಿಗೆ ಕಾಮಕೇಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಅವರು ಆ ಬಾಲಕಿಯರಿಗೆ ಹಣ ಕೊಟ್ಟಿರಬಹುದು ಎನ್ನಲಾಗಿದೆ.
ಓರ್ವ ಮೊರೊಕ್ಕೊ ಸೈನಿಕ 2014ರ ಜನವರಿಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾನೆ ಎಂದು ವಿಶ್ವಸಂಸ್ಥೆ ಶಾಂತಿಪಾಲನಾ ಕಚೇರಿಯ ಸಹಾಯಕ ಮಹಾ ಕಾರ್ಯದರ್ಶಿ ಟೋನಿ ಬ್ಯಾಂಬರಿ ಹೇಳಿದರು.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಓರ್ವ ಸೈನಿಕ, ಸೆನೆಗಲ್‌ನ ಇಬ್ಬರು ಪೊಲೀಸರು ಮತ್ತು ಬಾಂಗ್ಲಾದೇಶದ ಇಬ್ಬರು ಸೈನಿಕರೂ ಇಂಥದೇ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಇದರೊಂದಿಗೆ, ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಸದಸ್ಯರು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನಲ್ಲಿ ನಡೆಸಿದ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗಳ ಸಂಖ್ಯೆ 22ಕ್ಕೇರಿದೆ. ಪ್ರಪಂಚದಾದ್ಯಂತ ಇಂಥ 69 ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News