ಝಿಕಾ ವೈರಸ್ ಲಸಿಕೆ ಪತ್ತೆಗೆ ಪೈಪೋಟಿ
ವಾಶಿಂಗ್ಟನ್, ಜ. 30: ಅಮೆರಿಕ ಖಂಡಗಳಲ್ಲಿ ವೇಗವಾಗಿ ಹರಡುತ್ತಿರುವ ಅಪಾಯಕಾರಿ ಸಾಂಕ್ರಾಮಿಕ ಝಿಕಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ಕಂಪೆನಿಗಳು ಮತ್ತು ವಿಜ್ಞಾನಿಗಳು ಪರಸ್ಪರರ ವಿರುದ್ಧ ಸ್ಪರ್ಧೆಯಲ್ಲಿ ತೊಡಗಿದ್ದಾರೆ.
ಝಿಕಾ ಈಗ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ 23 ದೇಶಗಳು ಮತ್ತು ಭೂಭಾಗಗಳಿಗೆ ಹರಡಿದೆ.
ಸೋಂಕಿನ ಅತ್ಯಂತ ಕೆಟ್ಟ ಪರಿಣಾಮಕ್ಕೊಳಗಾದ ಬ್ರೆಝಿಲ್‌ನಲ್ಲಿ ಸುಮಾರು 3,700 ದೋಷಪೂರಿತ ಮಕ್ಕಳ ಜನನ ಪ್ರಕರಣಗಳು ವರದಿಯಾಗಿವೆ. ಈ ರೀತಿಯ ದೋಷಪೂರಿತ ಮಕ್ಕಳ ಜನನಕ್ಕೆ ಝಿಕಾ ವೈರಸ್ ಕಾರಣ ಎಂಬುದಾಗಿ ಬಲವಾಗಿ ಶಂಕಿಸಲಾಗಿದೆ.
ಝಿಕಾ ಸೋಂಕಿಗೆ ಚಿಕಿತ್ಸೆಯಾಗಿ ಬಳಸಬಹುದಾದ ಲಸಿಕೆಯೊಂದು ಸಾರ್ವಜನಿಕ ಉಪಯೋಗಕ್ಕೆ ಲಭಿಸಲು ವರ್ಷಗಳಲ್ಲದಿದ್ದರೂ, ತಿಂಗಳುಗಳಾದರೂ ಬೇಕು ಎಂದು ಆರೋಗ್ಯ ಪರಿಣತರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಔಷಧ ತಯಾರಿಕಾ ಕಂಪೆನಿ ಇನೋವಿಯೊ ಫಾರ್ಮಾಸ್ಯೂಟಿಕಲ್ಸ್ ಇಂಕ್‌ನ್ನು ಒಳಗೊಂಡ ಒಕ್ಕೂಟವೊಂದು ಮುಂಚೂಣಿಯಲ್ಲಿದೆ. ತುರ್ತು ಸಂದರ್ಭದಲ್ಲಿ ಬಳಕೆಗಾಗಿ ಈ ವರ್ಷದ ಕೊನೆಯ ವೇಳೆಗೆ ಲಸಿಕೆಯೊಂದು ಸಿದ್ಧಗೊಳ್ಳುವ ನಿರೀಕ್ಷೆಯಿದೆ ಎಂದು ಒಕ್ಕೂಟದ ಪ್ರಧಾನ ಸಂಶೋಧಕರೊಬ್ಬರು ಹೇಳುತ್ತಾರೆ. ಅದೇ ವೇಳೆ, ತಾನು ಸಂಶೋಧಿಸುತ್ತಿರುವ ಔಷಧಿಯ ಮೊದಲ ಸುತ್ತಿನ ಮಾನವ ಪರೀಕ್ಷೆ ಆಗಸ್ಟ್‌ನಲ್ಲಿ ಆರಂಭಗೊಳ್ಳಬಹುದು ಎಂದು ಕೆನಡದ ವಿಜ್ಞಾನಿ ಗ್ಯಾರಿ ಕೋಬಿಂಗರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು. ಯಶಸ್ವಿಯಾದರೆ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ತನ್ನ ಔಷಧವನ್ನು ಬಳಸಬಹುದಾಗಿದೆ ಎಂದರು.