×
Ad

‘ಹೀರೋ’ ಆಹ್ಮದ್ ಶೌರ್ಯವನ್ನು ಶ್ಲಾಘಿಸಿದ ಆಸ್ಟ್ರೇಲಿಯ ಪ್ರಧಾನಿ

Update: 2025-12-16 23:44 IST

Photo : x@AlboMP

ಸಿಡ್ನಿ,ಡಿ.16: ನಗರದ ಬಾಂಡಿ ಬೀಚ್ನಲ್ಲಿ ಉಗ್ರಗಾಮಿಗಳು ನಡೆಸಿದ ಶೂಟೌಟ್ ಸಂದರ್ಭ, ಬಂದೂಕುಧಾರಿಯ ಜೊತೆ ಹೋರಾಡಿದ ‘ಹೀರೋ’, ಅಹ್ಮದ್ ಅಲ್ ಅಹ್ಮದ್ ಅವರನ್ನು ಆಸ್ಟ್ರೇಲಿಯದ ಪ್ರಧಾನಿ ಆ್ಯಂಥನಿ ಅಲ್ಬಾನಿಸ್ ಆಸ್ಪತ್ರೆಯಲ್ಲಿ ಭೇಟಿಯಾದರು. ಉಗ್ರನೊಂದಿಗೆ ಹೋರಾಡಿದ ಅವರ ಅಸಾಧಾರಣ ಶೌರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಗುಂಡಿನ ಗಾಯಗಳಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ರನ್ನು ತಾನು ಭೇಟಿಯಾದ ದೃಶ್ಯವಿರುವ ಛಾಯಾಚಿತ್ರವನ್ನು ಅಲ್ಬಾನಿಸ್ ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಜೀವದ ಹಂಗು ತೊರೆದು ಇತರರ ಪ್ರಾಣ ರಕ್ಷಿಸಲು ಧಾವಿಸಿದ ಅಹ್ಮದ್ ಅವರನ್ನು ‘ಆಸ್ಟ್ರೇಲಿಯದ ಹೀರೋ’ ಎಂದು ಬಣ್ಣಿಸಿದ ಅವರು, ಅವರ ಧೈರ್ಯ ಹಾಗೂ ನಿಸ್ವಾರ್ಥವನ್ನು ಶ್ಲಾಘಿಸಿದ್ದಾರೆ.

ನಮ್ಮದು ಧೈರ್ಯಶಾಲಿ ರಾಷ್ಟ್ರ. ಅಹ್ಮದ್-ಅಲ್-ಅಹ್ಮದ್ ನಮ್ಮ ದೇಶದ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತಿದ್ದಾರೆ. ಉಗ್ರರ ಬಯಸುತ್ತಿರುವಂತೆ ನಮ್ಮ ದೇಶವು ವಿಭಜನೆಗೊಳ್ಳಲು ನಾವು ಆಸ್ಪದ ನೀಡಲಾರೆವು. ನಾವು ಒಗ್ಗೂಡುವೆವು, ಒಬ್ಬರನ್ನೊಬ್ಬರು ಆಲಂಗಿಸಿಕೊಳ್ಳುವೆವು ಎಂದವರು ಹೇಳಿದ್ದಾರೆ.

ಅಹ್ಮದ್ ಅವರು ಉಗ್ರನ ಮೇಲೆ ಮುಗಿಬಿದ್ದು ಆತನನ್ನು ನಿರಾಯುಧಗೊಳಿಸಿದ ಸಂದರ್ಭ, ಇನ್ನೋರ್ವ ಉಗ್ರಗಾಮಿ ಗುಂಡುಹಾರಿಸಿದ್ದರಿಂದ ಗಾಯಗೊಂಡಿರುವ ಅವರು ಕೊಗಾರ್ನ ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗತ್ಯ ಬಿದ್ದಲ್ಲಿ ಮುಂದೆಯೂ ತಾನು ಹೋರಾಡಲು ಸಿದ್ಧನಿದ್ದೇನೆ ಎಂದು ಅಹ್ಮದ್ ಹೇಳುತ್ತಾರೆಂದು ಅವರ ವಕೀಲರಾದ ಸ್ಯಾಮ್ ಇಸ್ಸಾ ತಿಳಿಸಿದ್ದಾರೆ.

‘‘ಅಹ್ಮದ್ ಅವರ ಆರೋಗ್ಯ ಚೆನ್ನಾಗಿಲ್ಲ. ಗುಂಡೇಟುಗಳಿಂದ ಅವರ ದೇಹಜರ್ಝರಿತವಾಗದೆ. ಈ ಕ್ಷಣದಲ್ಲಿ ನಮ್ಮ ಹೀರೋ ಬಳಲುತ್ತಿದ್ದಾರೆ’’ಎಂದು ಅವರ ವಕೀಲರು ತಿಳಿಸಿದ್ದಾರೆ.

ಬಂದೂಕುಧಾರಿಯು ಎಸೆದ ಗುಂಡುಗಳಿಂದಾಗಿ ಅಹ್ಮದ್ ಅವರ ಎಡಗೈಗೆ ಗಂಭೀರ ಏಟಾಗಿದೆ. ಅವರ ಎಡಭುಜದ ಪಕ್ಕೆಲುಬಿಗೆ ಹೊಕ್ಕಿರುವ ಬುಲೆಟ್ ಅನ್ನು ಇನ್ನಷ್ಟೇ ತೆಗೆಯಬೇಕಾಗಿದೆ. ಗಾಯಗಳ ತೀವ್ರತೆಯಿಂದಾಗಿ ಅಹ್ಮದ್ ಅವರು ಎಡಗೈಯನ್ನು ಕಳೆದುಕೊಳ್ಳಬೇಕಾದೀತೆಂದು ಅವರ ವಕೀಲರು ತಿಳಿಸಿದ್ದಾರೆ.

ಅಹ್ಮದ್ರನ್ನು ಭೇಟಿಯಾದ ಬಳಿಕ ವರದಿಗಾರರ ಜೊತೆ ಮಾತನಾಡಿದ ಅಲ್ಬನೀಸ್ ಅವರು ‘ಆಸ್ಟ್ರೇಲಿಯದ ಹೀರೋ’ನ ಸಾಹಸವು, ದೇಶದ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಹಾಗೂ ಭಯೋತ್ಪಾದನೆಯನ್ನು ಒಗ್ಗಟ್ಟಿನಿಂದ ಎದುರಿಸಬೇಕೆಂಬ ಬಲವಾದ ಸಂದೇಶವನ್ನು ನೀಡಿದೆ ಎಂದು ಆಸ್ಟ್ರೇಲಿಯ ಪ್ರಧಾನಿ ಆ್ಯಂಥನಿ ಅಲ್ಬಾನಿಸ್ನ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News