ಅಮಿತ್ ಶಾರ ಮುಂದಿನ ನಡೆಯೇನು?
ಅಮಿತ್ ಶಾ ಮತ್ತೆ ಭಾಜಪದ ಅಧ್ಯಕ್ಷರಾಗುವುದ ರೊಂದಿಗೆ ಪ್ರಧಾನಮಂತ್ರಿ ನರೇಂದ್ರಮೋದಿಯವರು ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಬಲಗೊಳಿಸಿಕೊಂಡಿದ್ದಾರೆ. ತನ್ಮೂಲಕ ಭಾಜಪದ ಹಿರಿಯ ನಾಯಕರುಗಳಾದ ಮಾಜಿ ಉಪಪ್ರಧಾನಮಂತ್ರಿ ಮತ್ತು ಪಕ್ಷದ ಮಾಜಿ ಅದ್ಯಕ್ಷರೂ ಆದ ಎಲ್.ಕೆ.ಅಡ್ವಾಣಿಯವರನ್ನು, ಪಕ್ಷದ ಇನ್ನೊಬ್ಬ ಮಾಜಿ ಅಧ್ಯಕ್ಷರಾದ ಮುರಳಿ ಮನೋಹರ್ ಜೋಷಿಯವರನ್ನು, ಹಿಮಾಚಲ ಪ್ರದೇಶದ ಮಾಜಿ ಮುಖ್ಯ ಮಂತ್ರಿಯಾದ ಶಾಂತ್ ಕುಮಾರ್ ಅವರನ್ನು ಬದಿಗೊತ್ತುವ ಕೆಲಸವನ್ನು ಮೋದಿಯವರು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.
ಮೋದಿಯವರ ಸಂಪೂರ್ಣ ಬೆಂಬಲವಿಲ್ಲದೆ ಬೇರೆ ಇನ್ಯಾರಾದರೂ ಶಾರವರ ಜಾಗದಲ್ಲಿದ್ದಿದ್ದರೆ, ದಿಲ್ಲಿ ಮತ್ತು ಬಿಹಾರದ ವಿಧಾನಸಭಾ ಚುನಾವಣೆಗಳ ಸೋಲಿನ ನಂತರವೂ ಮತ್ತೊಮ್ಮೆ ಭಾಜಪದ ಅಧ್ಯಕ್ಷ ಗಾದಿಗೇರುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಸದ್ಯಕ್ಕೆ ಮೋದಿಯವರು ನಂಬುವುದು ತಮ್ಮನ್ನು ಬಿಟ್ಟರೆ ಶಾರವರನ್ನು ಮಾತ್ರವೆಂಬುದು ಇದರಿಂದ ಸಾಬೀತಾಗಿದೆ. ಸದಾ ರಾಜಕೀಯದಲ್ಲಿನ ನೈತಿಕತೆಯ ಬಗ್ಗೆ ಮಾತಾಡುವ ಮತ್ತು ರಾಜಕೀಯದ ಅಪರಾಧೀಕರಣದ ಬಗ್ಗೆ ಕೊಚ್ಚಿಕೊಳ್ಳುವ ಭಾಜಪ ಶಾರವರ ವಿಚಾರದಲ್ಲಿ ಮಾತ್ರ ತನ್ನ ಇಂತಹ ನೀತಿಗಳ ಬಗ್ಗೆ ಮೌನ ತಳೆದುಬಿಡುವುದು ಇಂಡಿಯಾದ ಅವಕಾಶವಾದಿ ರಾಜಕಾರಣಕ್ಕೆ ಒಂದು ಉದಾಹರಣೆ ಮಾತ್ರ.
54 ವರ್ಷದ ಅಮಿತ್ ಶಾ ಎಬಿವಿಪಿ ಮೂಲಕ ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡಿದವರು. ತದನಂತರದಲ್ಲಿ ಗುಜರಾತ್‌ನ ವಿಧಾನಸಭೆಗೆ ನಾಲ್ಕು ಬಾರಿ ಆಯ್ಕೆಯಾಗಿ, ನರೇಂದ್ರಮೋದಿ ಸರಕಾರದಲ್ಲಿ ಗೃಹಖಾತೆಯ ಜೊತೆಗೆ ಹತ್ತಕ್ಕೂ ಅಧಿಕ ಹೆಚ್ಚುವರಿ ಖಾತೆಗಳನ್ನು ಹೊಂದಿದ ಸಚಿವರಾಗಿ ಮೋದಿಯ ಪರಮಾಪ್ತರಾಗಿ ಗುರುತಿಸಿಕೊಂಡವರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾದ ಇವರು ಸಂಘಪರಿವಾರದ ಸಿದ್ಧಾಂತಗಳಿಗನುಗುಣವಾಗಿಯೇ ಸಚಿವರಾಗಿ ಕಾರ್ಯನಿರ್ವಹಿಸುತ್ತ ಬಂದವರು. ಸಂಘಪರಿವಾರದ ಅಜೆಂಡಾವನ್ನು ಜಾರಿಗೊಳಿಸಲು ನರೇಂದ್ರಮೋದಿಯವರಿಗೆ ಬೆನ್ನೆಲುಬಾಗಿ ನಿಂತವರು. ಈಗ ಶಾರವರನ್ನು ವಿರೋಧಿಸುವವರ ಒಂದು ಪಡೆಯೇ ಸೃಷ್ಟಿಯಾಗಿದೆ. ಆದರೆ ನರೇಂದ್ರಮೋದಿಯವರ ಕಾರಣದಿಂದಾಗಿ ಆ ಭಿನ್ನಮತ ಹೊರಗೆಲ್ಲೂ ಸ್ಫೋಟವಾಗುತ್ತಿಲ್ಲವೆಂಬುದು ವಾಸ್ತವ!
ಆದರೂ ಭಾಜಪದ ಅಂತರಾಳದೊಳಗೊಂದು ಭಿನ್ನಮತದ ಕಿಡಿ ಹೊತ್ತಿಕೊಂಡಿರುವುದಂತೂ ನಿಜ. ಸಂಘಪರಿವಾರಕ್ಕೆ ಇದರ ಅರಿವಿದ್ದರೂ ತನ್ನ ಸಿದ್ಧಾಂತಗಳನ್ನು ಅನುಷ್ಠಾನಗೊಳಿಸುವಲ್ಲಿ ಅಮಿತ್ ಶಾರವರೇ ಬೇರೆಯವರಿಗಿಂತ ಸೂಕ್ತವೆಂಬ ಕಾರಣದಿಂದಾಗಿ ಸುಮ್ಮನಿದೆ. ಇತ್ತೀಚೆಗೆ ಪರಿವಾರದ ಬಹುತೇಕ ಅಂಗಸಂಸ್ಥೆಗಳು ರಾಮಮಂದಿರ ನಿರ್ಮಾಣವಾಗಲು ಹಟ ಹಿಡಿದು ಕೂತು ಈ ವರ್ಷದ ಅಂತ್ಯದೊಳಗೆ ನಿಮಾಣ ಕಾರ್ಯ ಪ್ರಾರಂಭವಾಲಿದೆಯೆಂದು ಸಾರ್ವಜನಿಕವಾಗಿ ಹೇಳುತ್ತ್ತಾ, ಅಗತ್ಯವಾದ ಶಿಲೆಗಳನ್ನು ಸಂಗ್ರಹಿಸುತ್ತಿವೆ.
ಇಂತಹ ವಿವಾದಾತ್ಮಕ ವಿಷಯದಲ್ಲಿ ಮೋದಿಯವರು ಬಾಯತೆರೆದು ಏನನ್ನೂ ಹೇಳದಿದ್ದರೂ ಅವರ ಆಪ್ತ ಶಾ ಮಾತ್ರ ಮಂದಿರ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಅಮಿತ್ ಶಾ ಹಿಂದುತ್ವದ ಪರವಾಗಿ ನಿಲ್ಲುವ ಎಲ್ಲ ಗುಣಗಳನ್ನೂ ಹೊಂದಿರುವುದರಿಂದಲೇ ಸಂಘಪರಿವಾರಕ್ಕೆ ಎಲ್.ಕೆ.ಅಡ್ವಾಣಿ, ಜೋಶಿಯವರಿಗಿಂತ ಅಮಿತ್ ಶಾರವರೆ ಮುಖ್ಯವಾಗುತ್ತಿರುವುದು. ಶಾರವರನ್ನು ವಿರೋಧಿಸುವ ಅಡ್ವಾಣಿಯವರ ಗುಂಪಿನ ಹಲವರು ಮೋದಿಯವರ ಸಂಪುಟದಲ್ಲಿ ಸಚಿವರಾಗಿದ್ದು ಈ ಬಗ್ಗೆ ಮಾತನಾಡಿ ಅಧಿಕಾರ ಕಳೆದುಕೊಳ್ಳಲು ತಯಾರಿಲ್ಲದ ಕಾರಣ ಶಾ ಅವರನ್ನು ಬಹಿರಂಗವಾಗಿ ವಿರೋಧಿಸುವ ಧೈರ್ಯ ತೋರುತ್ತಿಲ್ಲ. ಹಾಗಾಗಿ ಮುಂದಿನ ಮೂರು ವರ್ಷಗಳ ಕಾಲ ಯಾವುದೇ ತೊಂದರೆಯಿಲ್ಲದೆ ಶಾ ಭಾಜಪದ ಅಧ್ಯಕ್ಷರಾಗಿ ಮುಂದುವರಿಯುವುದು ಖಚಿತ.
ಈ ಹಿನ್ನೆಲೆಯಲ್ಲಿ ನೋಡಿದರೆ ಅವರಿಗೆ ಈಗಿರುವುದು ಪಕ್ಷದೊಳಗಿನ ವಿರೋಧಿಗಳನ್ನು ಮಟ್ಟ ಹಾಕುತ್ತಲೇ ಬರಲಿರುವ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗೆಲ್ಲುವುದಾಗಿದೆ. ಇನ್ನೇನು ಕೆಲತಿಂಗಳುಗಳಲ್ಲಿ ಬರಲಿರುವ ಪಶ್ಚಿಮಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪಾಂಡೀಚೇರಿಗಳ ವಿದಾನಸಭಾ ಚುನಾವಣೆಗಳು ಅಮಿತ್ ಶಾರ ಒಳಗಿರುವ ರಾಜಕೀಯ ತಂತ್ರಗಾರನಿಗೊಂದು ಸವಾಲಾಗಿದೆ.
ಯಾಕೆಂದರೆ ಈ ಯಾವ ರಾಜ್ಯಗಳಲ್ಲೂ ಭಾಜಪ ಒಂದು ಗೆಲ್ಲುವ ರಾಜಕೀಯ ಶಕ್ತಿಯಾಗಿ ಬೆಳೆದು ನಿಂತಿಲ್ಲ. ಬದಲಿಗೆ ಸ್ಥಳೀಯವಾಗಿ ಯಾವುದಾದರೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸ ಬೇಕಾದ ಸ್ಥಿತಿಯಿದೆ. ಪಶ್ಚಿಮಬಂಗಾಳದಲ್ಲಿ ಕಳೆದ ಲೋಕಸಭಾ ಚುನಾವಣೆಯ ನಂತರ ಒಂದಿಷ್ಟು ನೆಲೆ ಕಾಣುತ್ತಿರುವ ಭಾಜಪಕ್ಕೆ ಅಲ್ಲಿ ಎದುರಾಳಿಗಳಾಗಿರುವುದು ಎಡಪಕ್ಷಗಳು ಮತ್ತು ಕಾಂಗ್ರೆಸ್. ಇನ್ನು ತೃಣಮೂಲ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡರೆ ಮಾತ್ರ ಭಾಜಪ ಅಲ್ಲಿ ಒಂದಿಷ್ಟು ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಆದರೆ ಇಂತಹದೊಂದು ಮೈತ್ರಿ ಸಾಧ್ಯವಾಗುವುದು ಮಮತಾಬ್ಯಾನರ್ಜಿಯವರು ಮನಸ್ಸು ಮಾಡಿದರೆ ಮಾತ್ರ. ಇಂತಹ ಸನ್ನಿವೇಶದಲ್ಲಿ ಅಮಿತ್ ಶಾ ತೆಗೆದುಕೊಳ್ಳಬಹುದಾದ ನಿರ್ಣಯ ಬಹಳ ಮುಖ್ಯವಾಗಿದೆ. ಇನ್ನು ತಮಿಳುನಾಡಿಗೆ ಬಂದರೆ ಅಲ್ಲಿಯೂ ಅಷ್ಟೆ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುವ ಸ್ಥಿತಿಯಲ್ಲಿ ಇರದ ಭಾಜಪಕ್ಕೆ ಜಯಲಲಿತಾರೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಉಳಿದಂತೆ ಅಸ್ಸಾಂ ಕೇರಳ, ಪಾಂಡಿಚೇರಿಗಳಲ್ಲಿಯೂ ಭಾಜಪ ಇದೇ ಸ್ಥಿತಿಯಲ್ಲಿದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಭಾಜಪದ ಅಧ್ಯಕ್ಷರಾಗಿ ಅಮಿತ್ ಶಾರವರು ತೆಗೆದುಕೊಳ್ಳಬಹುದಾದ ನಿರ್ಧಾರಗಳು ಭಾಜಪದ ಭವಿಷ್ಯದ ದೃಷ್ಟಿಯಿಂದ ಮಾತ್ರವಲ್ಲದೆ ರಾಷ್ಟ್ರದರಾಜಕೀಯದ ದಿಕ್ಕುಗಳನ್ನು ನಿರ್ಧರಿಸುವಲ್ಲಿಯೂ ಪ್ರಾಮುಖ್ಯತೆ ಪಡೆದುಕೊಂಡಿರುತ್ತದೆ.
ತನ್ನ ಕೋಮುವಾದಿ ಸಿದ್ಧಾಂತಗಳಿಗಾಗಿ ಸಂಘಪರಿವಾರಕ್ಕೆ ಅಮಿತ್ ಶಾ ಅನಿವಾರ್ಯವಾಗಿದ್ದು, ನಮ್ಮ ಸಂವಿಧಾನದ ಜಾತ್ಯತೀತ ನಿಲುವಿಗೆ ಒದಗಬಹುದಾದ ಅಪಾಯಗಳ ಬಗ್ಗೆ ಯೋಚಿಸುವುದು ಮುಖ್ಯವಾಗಿದೆ. ಹಾಗಾಗಿ ಮುಂದಿನ ದಿನಮಾನಗಳಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ತೆಗೆದುಕೊಳ್ಳಬಹುದಾದ ನಿಲುವುಗಳ ಜೊತೆಗೆ ನಾವು ಅಮಿತ್ ಶಾರ ರಾಜಕೀಯ ನಡೆಗಳನ್ನೂ ಸೂಕ್ಷ್ಮವಾಗಿ ಗಮನಿಸುವುದು ಸಹ ಅವಶ್ಯವಾಗಿದೆ. ಧರ್ಮ ಮತ್ತು ರಾಜಕಾರಣವನ್ನು ಬೇರೆಬೇರೆಯಾಗಿ ನೋಡುವ ಅಭ್ಯಾಸವುಳ್ಳ ನಮಗೆ ಅಮಿತ್ ಶಾ ಹೇಗೆ ಧರ್ಮವನ್ನು ರಾಜಕಾರಣಕ್ಕೆ ಪೂರಕವಾಗಿ, ಹಾಗೆಯೇ ಹೇಗೆ ರಾಜಕಾರಣವನ್ನು ಧರ್ಮಕ್ಕೆ ಸಹಾಯಕಾರಿಯಾಗಿ ಬಳಸಿಕೊಳ್ಳುತ್ತಾರೆಯೊ ಎನ್ನುವ ಆತಂಕಭರಿತ ಕುತೂಹಲವಂತೂ ಇದ್ದೇ ಇದೆ.
ತನ್ನ ಕೋಮುವಾದಿ ಸಿದ್ಧಾಂತಗಳಿಗಾಗಿ ಸಂಘಪರಿವಾರಕ್ಕೆ ಅಮಿತ್ ಶಾ ಅನಿವಾರ್ಯವಾಗಿದ್ದು, ನಮ್ಮ ಸಂವಿಧಾನದ ಜಾತ್ಯತೀತ ನಿಲುವಿಗೆ ಒದಗಬಹುದಾದ ಅಪಾಯಗಳ ಬಗ್ಗೆ ಯೋಚಿಸುವುದು ಮುಖ್ಯವಾಗಿದೆ. ಹಾಗಾಗಿ ಮುಂದಿನ ದಿನಮಾನಗಳಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ತೆಗೆದುಕೊಳ್ಳಬಹುದಾದ ನಿಲುವುಗಳ ಜೊತೆಗೆ ನಾವು ಅಮಿತ್ ಶಾರ ರಾಜಕೀಯ ನಡೆಗಳನ್ನೂ ಸೂಕ್ಷ್ಮವಾಗಿ ಗಮನಿಸುವುದು ಸಹ ಅವಶ್ಯವಾಗಿದೆ.