ಅಂಗವಿಕಲ ಪ್ರಯಾಣಿಕೆಗೆ ಗಾಲಿ ಕುರ್ಚಿ ನೀಡದ ಏರ್‌ಇಂಡಿಯಾ - ತೆವಳಿಕೊಂಡೇ ಮೆಟ್ಟಲನ್ನಿಳಿದ ದಿಲ್ಲಿ ವಿವಿಯ ಪ್ರೊಫೆಸರ್
ಹೊಸದಿಲ್ಲಿ,ಜ.31: ಭಿನ್ನಸಾಮರ್ಥ್ಯದ ಮಹಿಳಾ ಪ್ರಯಾಣಿಕೆಯೊಬ್ಬರಿಗೆ ತಾನು ಗಾಲಿಕುರ್ಚಿಯನ್ನು ಒದಗಿಸಲಿಲ್ಲವೆಂಬ ಆರೋಪವನ್ನು,ಸಾರ್ವಜನಿಕರಂಗದ ವಾಯುಯಾನ ಸಂಸ್ಥೆ ಏರ್‌ಇಂಡಿಯಾ ರವಿವಾರ ನಿರಾಕರಿಸಿದೆ. ಏರ್‌ಇಂಡಿಯಾ ವಿಮಾನದಿಂದ ಇಳಿಯಲು ಗಾಲಿಕುರ್ಚಿ ದೊರೆಯದ ಕಾರಣ ತಾನು ತೆವಳಿಕೊಂಡು, ಪ್ರಯಾಣಿಕ ಕೋಚ್ ಅನ್ನು ಹತ್ತಬೇಕಾಯಿತೆಂದು ಮಹಿಳಾ ಪ್ರಯಾಣಿಕೆ ಆಪಾದಿಸಿದ್ದರು.
ಘಟನೆಯ ಬಗ್ಗೆ ಏರ್‌ಇಂಡಿಯಾ ರವಿವಾರ ಹೇಳಿಕೆಯೊಂದನ್ನು ನೀಡಿ, ‘‘ ಪ್ರಯಾಣಿಕೆಗೆ ಆಗಿರುವ ಅನಾನುಕೂಲಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಆದಾಗ್ಯೂ, ಮಾಧ್ಯಮಗಳಲ್ಲಿ ಈ ಕುರಿತು ಪ್ರಕಟವಾದ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ’’ ಎಂದು ಹೇಳಿದೆ.
‘‘ ದಿಲ್ಲಿ ವಿಮಾನನಿಲ್ದಾಣದಲ್ಲಿ ವಿಮಾನವು ಇಳಿದಾಗ, ಪ್ರಯಾಣಿಕೆಗಾಗಿ ಗಾಲಿಕುರ್ಚಿಯನ್ನು ತರಲು ಸ್ವಲ್ಪ ಸಮಯ ಹಿಡಿಯಿತು. ಪ್ರಯಾಣಿಕರು ವಿಮಾನದಿಂದ ಇಳಿಯತೊಡಗಿದ್ದರಿಂದ, ನಮ್ಮ ಪೂರಕ ಸಿಬ್ಬಂದಿಯು, ಈ ಪ್ರಯಾಣಿಕೆಗೆ ವಿಮಾನದಿಂದ ಕೆಳಗಿಳಿಯಲು ನೆರವಾದರು. ಗಾಲಿಕುರ್ಚಿಯನ್ನು ವಿಮಾನದ ಬಾಗಿಲ ಮೆಟ್ಟಲಲ್ಲಿ ಒದಗಿಸಲಾಗಿತ್ತು ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.
ದಿಲ್ಲಿ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಅನಿತಾಘಾಯ್, ಶುಕ್ರವಾರ ಅಲಿಯಾನ್ಸ್ ಏರ್ (ಏರ್‌ಇಂಡಿಯಾದ ಪ್ರಾದೇಶಿಕ ವಿಭಾಗ) ಮೂಲಕ ಡೆಹ್ರಾಡೂನ್‌ನಿಂದ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದರು. ಭಿನ್ನಸಾಮರ್ಥ್ಯದವರಾದ ಆಕೆ, ತನಗೆ ಗಾಲಿಕುರ್ಚಿಯನ್ನು ಒದಗಿಸುವಂತೆ ಕೋರಿದ್ದರು.
‘‘ನನ್ನ ನಾಲ್ವರು ಸಹದ್ಯೋಗಿಗಳೊಂದಿಗೆ ನಾನು ವಿಮಾನವನ್ನೇರಿದ್ದೆ. ಆದರೆ ವಿಮಾನ ದಿಲ್ಲಿ ತಲುಪಿದ ಬಳಿಕ ತನಗೆ ಗಾಲಿಕುರ್ಚಿಯನ್ನು ಒದಗಿಸುವಂತೆ ಪದೇ ಪದೇ ವಿನಂತಿಸಿದ ಹೊರತಾಗಿಯೂ, ಗಗನಪರಿಚಾರಿಕೆಯು ಅದಕ್ಕೆ ಕಿವಿಗೊಡಲಿಲ್ಲ. ವಿಮಾನವು ಸಂಜೆ 7:30ರ ಹೊತ್ತಿಗೆ ದಿಲ್ಲಿ ತಲುಪಿತ್ತು. ನಾನು ಸಹದ್ಯೋಗಿಗಳೊಂದಿಗೆ ತಾಳ್ಮೆಯಿಂದ ಗಾಲಿಕುರ್ಚಿಗಾಗಿ ಕಾಯುತ್ತಾ ಕುಳಿತಿದ್ದೆ. 8:15 ಗಂಟೆಯಾದಾಗ, ಗಾಲಿಕುರ್ಚಿ ದೊರೆಯುವ ಸಾಧ್ಯತೆಯಿಲ್ಲವೆಂದು ನಮಗೆ ಮನದಟ್ಟಾಯಿತು. ಫ್ಲೈಟ್‌ಕೋಚ್ ಕಮಾಂಡರ್ ಪದೇ ಪದೇ ಮನವಿ ಮಾಡಿಕೊಂಡ ಬಳಿಕ ಪ್ಯಾಸೆಂಜರ್ ಕೋಚ್ ಒಂದನ್ನು ಕಳುಹಿಸಿಕೊಡಲಾಯಿತು. ಭದ್ರತಾಕಾರಣಗಳನ್ನು ನೀಡಿ, ನಾನು ತೆವಳಿಕೊಂಡೇ ಕೋಚ್‌ಏರಬೇಕಾಯಿತು ಎಂದು ಅನಿತಾಘಾಯ್ ಆರೋಪಿಸಿದ್ದರು.