ಪಿಕ್ನಿಕ್ ಗೆ ಬಂದ ವಿದ್ಯಾರ್ಥಿಗಳು ಸಮುದ್ರ ಪಾಲು , 13 ಮೃತದೇಹ ಪತ್ತೆ
Update: 2016-02-01 22:14 IST
ರಾಯಘಡ್ , ಫೆ. 1 : ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಮುರುದ್ - ಜನ್ಜಿರಾ ಬೀಚ್ನಲ್ಲಿ ಪಿಕ್ನಿಕ್ ಗೆ ಬಂದಿದ್ದ ಪುಣೆಯ ಕಾಲೇಜೊಂದರ ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿದ್ದು ಆ ಪೈಕಿ 13 ಮಂದಿ ನೀರು ಪಾಲಾಗಿದ್ದಾರೆಂದು ತಿಳಿದು ಬಂದಿದೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.
ಮಧ್ಯಾಹ್ನ ಒಟ್ಟು 18 ವಿಧ್ಯಾರ್ಥಿಗಳು ಈಜಲೆಂದು ಕಡಲಿಗೆ ಇಳಿದಾಗ ಈ ದುರಂತ ಸಂಭವಿಸಿದೆ. 18ರಿಂದ 20 ರ ಹರೆಯದ ಬಿಎಸ್ಸಿ ಹಾಗು ಬಿಸಿಎ ಕೋರ್ಸುಗಳನ್ನು ಕಲಿಯುವ ಈ ವಿದ್ಯಾರ್ಥಿಗಳು ಪಿಕ್ನಿಕ್ ಗಾಗಿ ಬಂದಿದ್ದರು.
ತಟ ರಕ್ಷಣಾ ಪಡೆ ಹಾಗು ನೌಕಾ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು ಈವರಗೆ ಒಟ್ಟು 13 ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಕೆಲವರು ಕಾಣೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪುಣೆಯ ಇನಾಂದಾರ್ ಕಾಲೇಜಿನ ಒಟ್ಟು 126 ವಿದ್ಯಾರ್ಥಿಗಳು ಮೂರು ಬಸ್ಸುಗಳಲ್ಲಿ ಇಲ್ಲಿಗೆ ಪಿಕ್ನಿಕ್ ಗೆ ಬಂದಿದ್ದರು.