×
Ad

ಮಾರಕ ಝಿಕಾ ವೈರಾಣು ರೋಗ: ಔಷಧಿ ಕಂಡುಹಿಡಿದ ಭಾರತೀಯ ವಿಜ್ಞಾನಿಗಳು

Update: 2016-02-03 23:55 IST

ಹೈದರಾಬಾದ್, ಫೆ.3: ವಿಶ್ವವನ್ನೇ ಬೆಚ್ಚಿಬೀಳಿಸಿರುವ ಮಾರಕ ವೈರಾಣು ರೋಗ ‘ಝಿಕಾ’ಗೆ ಔಷಧಿಯನ್ನು ಕಂಡು ಹಿಡಿದಿರುವುದಾಗಿ ಹೈದರಾಬಾದ್ ಪ್ರಯೋ ಗಾಲಯದ ವಿಜ್ಞಾನಿಗಳು ಪ್ರಕಟಿಸಿದ್ದಾರೆ. ದೋಷಯುಕ್ತ ಮಕ್ಕಳ ಹುಟ್ಟಿಗೆ ಕಾರಣವಾಗುವ ಝಿಕಾ ವೈರಸ್ ಸಾಂಕ್ರಾಮಿಕ ರೋಗ ವನ್ನು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ಈಗಾಗಲೇ 20ಕ್ಕೂ ಹೆಚ್ಚು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಝಿಕಾ ವೈರಸ್ ಹರಡಿದೆ ಎನ್ನಲಾಗಿದ್ದು, ಲೈಂಗಿಕ ಚಟುವಟಿಕೆಗಳ ಮೂಲಕ ಝಿಕಾ ವೈರಸ್ ವರ್ಗಾ ವಣೆಯಾಗಿರುವ ಪ್ರಕರಣ ಅಮೆರಿಕದ ಟೆಕ್ಸಾಸ್‌ನಿಂದ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಇದರ ಲಸಿಕೆ ಶೋಧಕ್ಕಾಗಿ ಪ್ರಯತ್ನ ನಡೆಸುತ್ತಿದ್ದು, ಹಲವು ಔಷಧ ಉತ್ಪಾದನಾ ಕಂಪೆನಿಗಳು ಈ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆ ಇಟ್ಟಿವೆ. ಆದರೆ ಝಿಕಾ ಲಸಿಕೆಗೆ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಈಗಾಗಲೇ ಪೇಟೆಂಟ್ ಪಡೆದಿದೆ ಎಂದು ಭಾರತೀಯ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಝಿಕಾ ವೈರಸ್‌ಗೆ ಸಂಬಂಧಿಸಿದಂತೆ ಬಹುಶಃ ಲಸಿಕೆ ಅಭಿವೃದ್ಧಿಪಡಿಸಿದ ಮೊತ್ತಮೊದಲ ಕಂಪೆನಿ ನಮ್ಮದು. ಈಗಾಗಲೇ ಒಂಬತ್ತು ತಿಂಗಳ ಹಿಂದೆ ಇದರ ಪೇಟೆಂಟ್‌ಗೆ ಅರ್ಜಿಯನ್ನೂ ಸಲ್ಲಿಸಲಾಗಿದೆ ಎಂದು ಭಾರತ್ ಬಯೋಟೆಕ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೃಷ್ಣ ಎಲ್ಲಾ ಪ್ರಕಟಿಸಿದ್ದಾರೆ.

ಜೀವಂತ ಝಿಕಾವನ್ನು ಅಧಿಕೃತವಾಗಿ ಆಮದು ಮಾಡಿಕೊಂಡು ಹೈದರಾಬಾದ್ ಮೂಲದ ಈ ಕಂಪೆನಿ ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. ಆದರೆ ಇದರ ಮಾನವ ಅಥವಾ ಪ್ರಾಣಿಗಳ ಮೇಲೆ ಇದರ ಪ್ರಯೋಗ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಸರಕಾರದ ಸಹಾಯ ಯಾಚಿಸಲಾಗಿದೆ. ಬಾರತೀಯ ಔಷಧ ಸಂಶೋಧನಾ ಮಂಡಳಿ ಈಗಾಗಲೇ ನೆರವು ನೀಡಲು ಮುಂದೆ ಬಂದಿದೆ ಎಂದು ವಿವರಿಸಿದ್ದಾರೆ.

ಝಿಕಾ ಲಸಿಕೆಗೆ ಭಾರತ್ ಬಯೋಟೆಕ್ ಅರ್ಜಿ ಸಲ್ಲಿಸಿರುವುದು ಈಗಷ್ಟೇ ಗಮನಕ್ಕೆ ಬಂದಿದೆ. ಇದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಪರಿಶೀಲಿಸಿ, ಅದನ್ನು ಮುಂದುವರಿಸುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಇದು ಮೇಕ್ ಇನ್ ಇಂಡಿಯಾಗೆ ಉತ್ತಮ ಉದಾಹರಣೆ ಎಂದು ಐಸಿಎಂಆರ್ ನಿರ್ದೇಶಕಿ ಹಾಗೂ ಮಕ್ಕಳ ತಜ್ಞೆ ಡಾ.ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ತಮ್ಮ ಕಂಪೆನಿ ಮುಂದಿನ ನಾಲ್ಕು ತಿಂಗಳಲ್ಲಿ 10 ಲಕ್ಷ ಇಂಥ ಲಸಿಕೆ ಅಭಿವೃದ್ಧಿಪಡಿಸಲು ಶಕ್ತವಾಗಿದೆ. ಈ ನಿಟ್ಟಿನಲ್ಲಿ ಲಸಿಕೆ ಉತ್ಪಾದನೆ ಹಾಗೂ ವಿತರಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ನೇರ ಮುತುವರ್ಜಿ ವಹಿಸಬೇಕು ಎಂದು ಡಾ.ಎಲ್ಲಾ ಮನವಿ ಮಾಡಿದ್ದಾರೆ. ಇದಕ್ಕೆ ಅನುಮತಿ ನೀಡುವ ಮಾಮೂಲಿ ಕೆಂಪುಪಟ್ಟಿಯನ್ನು ಕತ್ತರಿಸಿ, ಬ್ರಿಕ್ಸ್ ಸದಸ್ಯರಾಷ್ಟ್ರವಾಗಿರುವ ಬ್ರೆಝಿಲ್‌ನಂಥ ದೇಶಗಳು ಇದರ ಪ್ರಯೋಜನ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದುವರೆಗೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಾಂಕ್ರಾಮಿಕ ರೋಗದ ಬಗ್ಗೆ ಲಸಿಕೆ ಅಭಿವೃದ್ಧಿಪಡಿಸಿರುವ ಭಾರತ್ ಬಯೋಟೆಕ್‌ನ ದೂರದೃಷ್ಟಿಯನ್ನು ತಜ್ಞರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News