×
Ad

ದಿಲ್ಲಿ ಐಐಎಂಸಿಯಲ್ಲಿ ಜಾತಿವಾದ ತನಿಖೆಗೆ ಸಮಿತಿ ರಚನೆಗೆ ನಿರ್ಧಾರ

Update: 2016-02-03 23:55 IST

ಹೊಸದಿಲ್ಲಿ, ಫೆ.3: ದಲಿತ ಹಾಗೂ ಬುಡಕಟ್ಟು ವಿದ್ಯಾರ್ಥಿಗಳ ಗುಂಪೊಂದು ಕ್ಯಾಂಪಸ್‌ನಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆಯೆಂದು ದೂರು ನೀಡಿದ ಬಳಿಕ, ದೇಶದ ಖ್ಯಾತ ಪತ್ರಿಕೋದ್ಯಮ ಶಾಲೆಗಳಲ್ಲೊಂದಾಗಿರುವ, ದಿಲ್ಲಿ ಮೂಲದ ಭಾರತೀಯ ಸಾಮೂಹಿಕ ಸಂಪರ್ಕ ಸಂಸ್ಥೆ (ಐಐಎಂಸಿ) ಈ ಬಗ್ಗೆ ತನಿಖೆಗೆ ಆದೇಶ ನೀಡಿದೆಯೆಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್ ವಿವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ಪರವಾಗಿ ಚಳವಳಿ ನಡೆಸುವುದನ್ನು ತಡೆಯಲು ಗುಂಪೊಂದು ನಮಗೆ ಕಿರುಕುಳ ನೀಡುತ್ತಿದೆ ಎಂದೂ ವಿದ್ಯಾರ್ಥಿಗಳು ದೂರಿದ್ದಾರೆ.
ಜ.18ರಿಂದ ದಲಿತರು ಹಾಗೂ ಬುಡಕಟ್ಟು ವಿದ್ಯಾರ್ಥಿಗಳನ್ನು ಅವಹೇಳನ ಮಾಡುವಂತಹ ಸಾಮಾಜಿಕ ಮಾಧ್ಯಮ ಬರಹಗಳು ಹರಿದಾಡ ತೊಡಗಿವೆ. ಕ್ಯಾಂಪಸ್‌ನಲ್ಲಿ ಚಿಂತೆಯ ವಾತಾವರಣವಿದೆ. ಕಾಲೇಜು ಹಾಗೂ ಹಾಸ್ಟೆಲ್‌ಗಳ ಜಗಲಿಗಳಲ್ಲಿ ವಿದ್ಯಾರ್ಥಿಗಳು ಹಾದು ಹೋಗುವಾಗ ಟೀಕೆ ಮಾಡಲಾಗುತ್ತಿದೆ ಹಾಗೂ ಗಟ್ಟಿಯಾಗಿ ಅಪಹಾಸ್ಯ ಮಾಡಲಾಗುತ್ತಿದೆಯೆಂದು ಈ ವಿದ್ಯಾರ್ಥಿಗಳ ಗುಂಪು ಪರಿಶಿಷ್ಟ ಜಾತಿ-ಪಂಗಡಗಳ ಆಯೋಗ, ಐಐಎಂಸಿ ಅಧಿಕಾರಿಗಳು ಹಾಗೂ ಸಂಸ್ಥೆಯ ಎಸ್ಸಿ-ಎಸ್ಟಿ ಘಟಕದ ಅಧಿಕಾರಿಗೆ ನೀಡಿರುವ ದೂರಿನಲ್ಲಿ ಆಪಾದಿಸಿದೆ.
ಮೀಸಲಾತಿ ಹಾಗೂ ಜಾತಿ ತಾರತಮ್ಯದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ವಿದ್ಯಾರ್ಥಿಯೊಬ್ಬ ಫೇಸ್‌ಬುಕ್ ಬರಹವೊಂದರಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಿದುದೇ ಈ ಬಿಕ್ಕಟ್ಟಿನ ಆರಂಭಕ್ಕೆ ಕಾರಣವಾಗಿದೆ.
ದಲಿತ ಹಾಗೂ ಆದಿವಾಸಿ ವಿದ್ಯಾರ್ಥಿಗಳ ದೂರನ್ನು ಆಧರಿಸಿ, ವಿಷಯದ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಲು ಐಐಎಂಸಿ ನಿರ್ಧರಿಸಿದೆಯೆಂದು ಮೂಲಗಳು ತಿಳಿಸಿವೆ.
ಸಮುದಾಯವನ್ನು ಪ್ರತಿನಿಧಿಸುವ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಪಂಚ ಸದಸ್ಯ ಸಮಿತಿಯು, ದೂರನ್ನು ಪರಿಶೀಲಿಸಿ, ಅಂತಹ ತಾರತಮ್ಯದ ವಿರುದ್ಧ ರಕ್ಷಣೆಗಾಗಿ ದೀರ್ಘಾವಧಿ ಕ್ರಮಗಳ ಪ್ರಸ್ತಾಪ ಮಾಡಲಿದೆ ಹಾಗೂ ಕ್ಯಾಂಪಸ್‌ನಲ್ಲಿ ಜಾತಿ ಸೂಕ್ಷ್ಮತೆಯ ಕುರಿತು ಜಾಗೃತಿ ಮೂಡಿಸಲು ಘಟಕವೊಂದನ್ನು ರಚಿಸಲಿದೆ. ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗ ಸಾಮಾಜಿಕ ಮಾಧ್ಯಮಗಳನ್ನು ಬಳಸಲು ನಿಯಮಗಳನ್ನು ಹೇಗೆ ಜಾರಿಗೊಳಿಸಬಹುದೆಂದೂ ಸಮಿತಿ ಪರಿಶೀಲಿಸಲಿದೆ. ಆದರೆ, ಅದರಿಂದ ತೃಪ್ತರಾಗದ ವಿದ್ಯಾರ್ಥಿಗಳು ಎಸ್ಸಿ-ಎಸ್ಟಿ ಆಯೋಗದ ಕದ ತಟ್ಟಿದ್ದಾರೆ. ಆದಾಗ್ಯೂ, ಆರೋಪಿಗಳ ವಿರುದ್ಧ ಶಿಕ್ಷೆಯ ಕ್ರಮವನ್ನು ತಾವು ಬಯಸುತ್ತಿಲ್ಲ. ಆದರೆ, ಆವರು ಬಹಿರಂಗವಾಗಿ ಕ್ಷಮೆ ಯಾಚಿಸಿ, ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲವೆಂಬ ಮುಚ್ಚಳಿಕೆ ಬರೆದುಕೊಟ್ಟರೆ ಸಾಕೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News