ಆದರ್ಶ ಹಗರಣ ಚವಾಣ್ ವಿರುದ್ಧ ಕಾನೂನು ಕ್ರಮಕ್ಕೆ ಸಿಬಿಐಗೆ ರಾಜ್ಯಪಾಲರ ಅನುಮತಿ
ಮುಂಬೈ,ಫೆ.4: ಆದರ್ಶ ಹೌಸಿಂಗ್ ಸೊಸೈಟಿ ಹಗರಣ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಮಹಾರಾಷ್ಟ್ರ ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ಅವರು ಗುರುವಾರ ಸಿಬಿಐಗೆ ಅನುಮತಿ ನೀಡಿದ್ದಾರೆ.
ನ್ಯಾ.ಪಾಟೀಲ ವಿಚಾರಣಾ ಆಯೋಗದ ವರದಿಯಂತಹ ಪೂರಕ ಮತ್ತು ಹೊಸ ಸಾಕ್ಷಾಧಾರಗಳ ಆಧಾರದಲ್ಲಿ ಸಿಆರ್‌ಪಿಸಿಯ ಕಲಂ 197ರಡಿ ಚವಾಣ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂಬೈನ ಸಿಬಿಐ ಜಂಟಿ ನಿರ್ದೇಶಕರು ಅನುಮತಿಯನ್ನು ಕೋರಿದ್ದರು. ಸಂಪುಟದ ಶಿಫಾರಸಿನ ಮೇರೆಗೆ ರಾಜ್ಯಪಾಲರು ಚವಾಣ್ ವಿರುದ್ಧ ಕ್ರಮಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಾಜ್ಯಪಾಲರ ಕಚೇರಿಯ ಅಧಿಕಾರಿಯೋರ್ವರು ತಿಳಿಸಿದರು.
2010ರಲ್ಲಿ ಹಗರಣ ಬೆಳಕಿಗೆ ಬಂದ ನಂತರ ಚವಾಣ್ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಚವಾಣ್ ಸೇರಿದಂತೆ 12 ಜನರನ್ನು ಸಿಬಿಐ ಆರೋಪಪಟ್ಟಿಯಲ್ಲಿ ಹೆಸರಿಸಿತ್ತು.
ದಕ್ಷಿಣ ಮುಂಬೈನ ಕೊಲಾಬಾದಲ್ಲಿ ನಿವೃತ್ತ ಯೋಧರು ಮತ್ತು ಸೇನಾ ಸಿಬ್ಬಂದಿಗಳ ವಿಧವೆಯರಿಗಾಗಿ ನಿರ್ಮಿಸಲಾದ ಆದರ್ಶ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಸಂಬಂಧಿಗಳಿಗೆ ಫ್ಲಾಟ್‌ಗಳು ದೊರೆಯುವಂತಾಗಲು ಚವಾಣ್ ಅವರು ಸೊಸೈಟಿಯಲ್ಲಿ ನಾಗರಿಕರ ಸೇರ್ಪಡೆಗೆ ಸೂಚಿಸಿದ್ದರೆಂದು ಸಿಬಿಐ ಅರೋಪಿಸಿದೆ.
2013,ಡಿಸೆಂಬರ್‌ನಲ್ಲಿ ಆಗಿನ ರಾಜ್ಯಪಾಲ ಕೆ.ಶಂಕರನಾರಾಯಣನ್ ಅವರು ಚವಾಣ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನಿರಾಕರಿಸಿದ್ದರಿಂದ ಸಿಬಿಐಗೆ ಅವರ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸದೆ ಬೇರೆ ದಾರಿಯೇ ಇರಲಿಲ್ಲ.
ತನ್ನ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯದ ಬಿಜೆಪಿ ನೇತೃತ್ವದ ಸರಕಾರವು ಶಿಫಾರಸು ಮಾಡಿದ್ದನ್ನು ‘‘ಪ್ರತೀಕಾರ’’ದ ಕ್ರಮವೆಂದು ಚವಾಣ್ ಬಣ್ಣಿಸಿದ್ದಾರೆ.