ಮುಂದಿನ ಅಧ್ಯಕ್ಷರು ಇಸ್ಲಾಮನ್ನು ಟೀಕಿಸಬಾರದು: ಬಹುಸಂಖ್ಯಾತ ಅಮೆರಿಕನ್ನರ ಅಪೇಕ್ಷೆ: ಸಮೀಕ್ಷೆ
ವಾಶಿಂಗ್ಟನ್, ಫೆ. 4: ಅಮೆರಿಕದ ಮುಂದಿನ ಅಧ್ಯಕ್ಷರು ಪ್ರಜ್ಞಾವಂತಿಕೆ ಹೊಂದಿರಬೇಕು ಹಾಗೂ ಭಯೋತ್ಪಾದಕರ ಬಗ್ಗೆ ಮಾತನಾಡುವಾಗ ಇಡೀ ಇಸ್ಲಾಮನ್ನೇ ಟೀಕಿಸುವವರಾಗಿರಬಾರದು ಎಂಬುದಾಗಿ ಬಹುಸಂಖ್ಯಾತ ಅಮೆರಿಕನ್ನರು ಬಯಸುತ್ತಾರೆ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ.
ಆದಾಗ್ಯೂ, ಮುಂದಿನ ಅಧ್ಯಕ್ಷರು ಭಯೋತ್ಪಾದಕರ ಬಗ್ಗೆ ತೀವ್ರವಾಗಿ ಮಾತನಾಡುವವರಾಗಿರಬೇಕು ಹಾಗೂ ಅವರ ಮಾತುಗಳು ಇಡೀ ಇಸ್ಲಾಮನ್ನು ಟೀಕಿಸಿದರೂ ಪರವಾಗಿಲ್ಲ ಎಂಬುದಾಗಿ ಹತ್ತರಲ್ಲಿ ನಾಲ್ಕು ಮಂದಿ ಭಾವಿಸುತ್ತಾರೆ.
ರಿಪಬ್ಲಿಕನ್ನರು ಮತ್ತು ಆ ಪಕ್ಷದ ಪರವಾಗಿ ಒಲವುಳ್ಳವರ ಪೈಕಿ 65 ಶೇಕಡ ಮಂದಿ ಇಂಥ ಅಧ್ಯಕ್ಷರನ್ನು ಬಯಸುತ್ತಾರೆ.
ಮುಂದಿನ ಅಧ್ಯಕ್ಷರು ಭಯೋತ್ಪಾದನೆ ಬಗ್ಗೆ ವಿವೇಚನಾ ರಹಿತವಾಗಿ ಮಾತನಾಡುವವರಾಗಿರಬಾರದು ಹಾಗೂ ಇಡೀ ಇಸ್ಲಾಮನ್ನು ಟೀಕಿಸುವವರಾಗಿರಬಾರದು ಎಂಬುದಾಗಿ 70 ಶೇಕಡ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ಹಾಗೂ ಡೆಮಾಕ್ರಟಿಕ್ ಪಕ್ಷದತ್ತ ಒಲವುಗಳುಳ್ಳ ಸ್ವತಂತ್ರ ನಿಲುವಿನ ಜನರು ಬಯಸುತ್ತಾರೆ ಎಂದು ಬುಧವಾರ ‘ಪ್ಯೂ’ ಸಮೀಕ್ಷೆ ಹೇಳಿದೆ.