ನ್ಯಾಶನಲ್ ಹೆರಾಲ್ಡ್ ಪ್ರಕರಣ ಸೋನಿಯಾ-ರಾಹುಲ್ ಸು.ಕೋ.ಗೆ
ಹೊಸದಿಲ್ಲಿ, ಫೆ.4: ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ತಮಗೆ ನೀಡಲಾಗಿದ್ದ ಸಮನ್ಸನ್ನು ರದ್ದುಪಡಿಸಲು ನಿರಾಕರಿಸಿದ ದಿಲ್ಲಿ ಹೈಕೋರ್ಟ್‌ನ ಡಿ.7, 2015ರ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಅವರಿಬ್ಬರಲ್ಲದೆ, ಸುಮನ್ ದುಬೆೆ ಹಾಗೂ ಸ್ಯಾಮ್ ಪಿತ್ರೋಡ ಸಹ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನ ಕದ ತಟ್ಟಿದ್ದಾರೆ.
2015ರ ಡಿ.7ರಂದು ಹೈಕೋರ್ಟ್ ಕಾಂಗ್ರೆಸ್ ನಾಯಕರಿಗೆ ನೀಡಲಾಗಿದ್ದ ಸಮನ್ಸ್ ರದ್ದುಪಡಿಸಲು ನಿರಾಕರಿಸಿದುದು ಮಾತ್ರವಲ್ಲದೆ, ಅವರು ಪಬ್ಲಿಕೇಶನ್ ನಿಯಂತ್ರಣವನ್ನು ತೆಗೆದುಕೊಂಡ ಪ್ರಶ್ನಾರ್ಹ ನಡವಳಿಕೆಯ ಕುರಿತಾಗಿಯೂ ವಾಗ್ದಾಳಿ ನಡೆಸಿತ್ತು.
ಆ ಬಳಿಕ ಸೋನಿಯಾ, ರಾಹುಲ್ ಮತ್ತಿತರರು ಕಳೆದ ವರ್ಷ ಡಿ.19ರಂದು ಪಾಟಿಯಾಲ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರು ಆಳವಾದ ರಾಜಕೀಯ ಬೇರು ಹೊಂದಿದ್ದಾರೆ ಹಾಗೂ ದೇಶ ಬಿಟ್ಟು ಪರಾರಿಯಾಗುವ ಸಂಭವವಿಲ್ಲವೆಂಬುದನ್ನು ಗಮನಿಸಿದ ನ್ಯಾಯಾಧೀಶರು ಅವರಿಗೆ ಜಾಮೀನು ಮಂಜೂರು ಮಾಡಿದ್ದರು.
ಮಾಜಿಸ್ಟ್ರೇಟ್ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಫೆ.20ಕ್ಕೆ ನಿಗದಿಪಡಿಸಿದ್ದು, ಸುಪ್ರೀಂಕೋರ್ಟ್ ಆರೋಪಿಗಳಿಗೆ ಯಾವುದೇ ಮಧ್ಯಾಂತರ ಪರಿಹಾರ ನೀಡದಿದಲ್ಲಿ ಅಂದವರು ನ್ಯಾಯಾಲಯಕ್ಕೆ ಹಾಜರಾಗ ಬೇಕಾಗುತ್ತದೆ.
ಈ ಹಿಂದೆ, ಆರೋಪಿಗಳ ವಿರುದ್ಧದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ್ದ ಹೈಕೋರ್ಟ್, ಸತ್ಯವನ್ನು ತಿಳಿಯಲು ಆರೋಪ ದಾಖಲೆಯ ಹಂತದಲ್ಲೇ ಅರ್ಜಿದಾರರ ಪ್ರಶ್ನಾರ್ಹ ನಡತೆಯನ್ನು ಸೂಕ್ತವಾಗಿ ಪರಿಶೀಲಿಸುವುದು ಅಗತ್ಯವಾಗಿದೆ. ಆದುದರಿಂದ, ಪ್ರಾಥಮಿಕ ಹಂತದಲ್ಲೇ ಈ ಕ್ರಿಮಿನಲ್ ವಿಚಾರಣೆಯನ್ನು ತಡೆಯುವಂತಿಲ್ಲ ಎಂದಿತ್ತು.
ಸೋನಿಯಾ ಹಾಗೂ ರಾಹುಲ್‌ರೊಂದಿಗೆ ಸಮನ್ ದುಬೆ, ಮೋತಿಲಾಲ್ ವೋರಾ, ಆಸ್ಕರ್ ಫೆರ್ನಾಂಡಿಸ್, ಸ್ಯಾಮ್ ಪಿತ್ರೋಡ ಹಾಗೂ ಯಂಗ್ ಇಂಡಿಯಾ ಲಿ. ಆರೋಪಿಗಳಾಗಿದ್ದಾರೆ. ಈಗ ತಟಸ್ಥಗೊಂಡಿರುವ ದಿನ ಪತ್ರಿಕೆಯ ನಿಯಂತ್ರಣ ತೆಗೆದುಕೊಳ್ಳುವಲ್ಲಿ ಅವರೆಲ್ಲ ವಂಚನೆ ಮತ್ತು ಅವ್ಯವಹಾರ ನಡೆಸಿದ್ದಾರೆಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದು, ಈಗವರು ಅದನ್ನು ಪ್ರಶ್ನಿಸಿದ್ದಾರೆ.