ಎಂಡೋಪೀಡಿತರಿಗೆ ಪರಿಹಾರ ನೀಡಲು ಒಪ್ಪಿಗೆ
ಪ್ರತಿಭಟನೆ ಅಂತ್ಯ
ತಿರುವನಂತಪುರ,ಫೆ.4: ಸರಕಾರವು ತಮ್ಮ ಹೆಚ್ಚಿನ ಬೇಡಿಕೆಗಳಿಗೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ 80ಕ್ಕೂ ಅಧಿಕ ಎಂಡೋಸಲ್ಫಾನ್ ಪೀಡಿತ ಮಕ್ಕಳು ಮತ್ತು ಅವರ ತಾಯಂದಿರು ಇಲ್ಲಿಯ ಸಚಿವಾಲಯ ಕಟ್ಟಡದೆದುರು ಕಳೆದ ಒಂಭತ್ತು ದಿನಗಳಿಂದಲೂ ನಡೆಸುತ್ತಿದ್ದ ಪ್ರತಿಭಟನೆಯನ್ನು ಗುರುವಾರ ಅಂತ್ಯಗೊಳಿಸಿದ್ದಾರೆ.
ತಕ್ಷಣವೇ ಪರಿಹಾರ ನೀಡಿಕೆ ಮತ್ತು ಸಾಲಮನ್ನಾ ಸೇರಿದಂತೆ ಹಲವಾರು ಬೇಡಿಕೆಗಳನ್ನು ಪ್ರತಿಭಟನಾಕಾರರು ಸರಕಾರದ ಮುಂದಿಟ್ಟಿದ್ದರು.
ಮುಖ್ಯಮಂತ್ರಿ ಉಮ್ಮನ್ ಚಾಂಡಿ,ಪ್ರತಿಪಕ್ಷ ನಾಯಕ ವಿ.ಎಸ್.ಅಚ್ಯುತಾನಂದನ್, ಎಂಡೋಪೀಡಿತ ಪ್ರದೇಶಗಳ ಶಾಸಕರು ಮತ್ತು ವೈದ್ಯರು ಹಾಗೂ ಪ್ರತಿಭಟನೆಯ ಕ್ರಿಯಾ ಮಂಡಳಿಯ ನಾಯಕರು ಪಾಲ್ಗೊಂಡಿದ್ದ ಸಭೆಯಲ್ಲಿ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜಿಗೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಬರಲಾಯಿತು.
ಫೆ.8ರೊಳಗೆ ಎಂಡೋಪೀಡಿತರಿಗೆ ಗರಿಷ್ಠ ಮೂರು ಲಕ್ಷ ರೂ.ಪರಿಹಾರವನ್ನು ನೀಡಲಾಗುವುದು ಮತ್ತು ಅವರ ಕುಟುಂಬಗಳ ಸಾಲಗಳನ್ನು ಮನ್ನಾ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಾಂಡಿ ತಿಳಿಸಿದರು.