ನೆಲೆಯೂರುತ್ತಿರುವ ಡೊನಾಲ್ಡ್ ಟ್ರಂಪ್; ನೆಲೆ ಕಳೆದುಕೊಳ್ಳುತ್ತಿರುವ ಹಿಲರಿ
ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಗಳ ಚುನಾವಣೆ ಸಮೀಕ್ಷೆ
ವಾಶಿಂಗ್ಟನ್, ಫೆ. 5: ಅಮೆರಿಕದ ಅಧ್ಯಕ್ಷ ಹುದ್ದೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ನ್ಯೂಹ್ಯಾಂಪ್‌ಶಯರ್ ರಾಜ್ಯದಲ್ಲಿ ಬಲಿಷ್ಠ ಅಭ್ಯರ್ಥಿ ಆಕಾಂಕ್ಷಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಇತ್ತೀಚಿನ ಜನಮತ ಸಮೀಕ್ಷೆಯೊಂದು ಹೇಳಿದೆ. ಅವರು ತನ್ನದೇ ಪಕ್ಷದ ಸಮೀಪದ ಅಭ್ಯರ್ಥಿ ಮಾರ್ಕೊ ರೂಬಿಯೊರನ್ನು ಎರಡಂಕಿಯ ಅಂತರದಿಂದ ಹಿಂದಿಕ್ಕಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ.
ಅದೇ ವೇಳೆ, ಈ ರಾಜ್ಯದಲ್ಲಿ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಬರ್ನೀ ಸ್ಯಾಂಡರ್ಸ್ ತನ್ನ ಸಮೀಪದ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ವಿರುದ್ಧ ಭಾರೀ ಮುನ್ನಡೆ ಗಳಿಸಲಿದ್ದಾರೆ ಎಂದು ಅದು ನಿರೀಕ್ಷಿಸಿದೆ.
ಇತ್ತೀಚೆಗೆ ಅಯೋವದಲ್ಲಿ ಚುನಾವಣೆ ನಡೆದ ಬಳಿಕ, ಗಿಜಿಗುಟ್ಟುತ್ತಿದ್ದ ರಿಪಬ್ಲಿಕನ್ ಅಭ್ಯರ್ಥಿ ಆಕಾಂಕ್ಷಿಗಳ ಸ್ಪರ್ಧಾಕಣದಲ್ಲಿ ಮೂರು ಮಂದಿ ಉಳಿದುಕೊಂಡಿದ್ದಾರೆ. ಟೆಕ್ಸಾಸ್ ಸೆನೆಟರ್ ಟೆಡ್ ಕ್ರೂಝ್ ಮತ್ತು ಡೊನಾಲ್ಡ್ ಟ್ರಂಪ್‌ರ ಬಳಿಕ ಫ್ಲೋರಿಡ ಸೆನೆಟರ್ ರೂಬಿಯೊ ನಿಕಟ ಮೂರನೆ ಸ್ಥಾನದಲ್ಲಿದ್ದಾರೆ.
ಡೆಮಾಕ್ರಟಿಕ್ ಸ್ಪರ್ಧಾ ಕಣದಲ್ಲಿ, ವರ್ಮಂಟ್ ಸೆನೆಟರ್ ಬರ್ನೀ ಸ್ಯಾಂಡರ್ಸ್ ತನ್ನ ನಿಕಟ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್‌ಗಿಂತ ಭಾರೀ ಮುನ್ನಡೆ ಗಳಿಸಿದ್ದಾರೆ ಎನ್ನಲಾಗಿದೆ.
ಅಯೋವದಲ್ಲಿ ನಡೆದ ಚುನಾವಣೆಯಲ್ಲಿ ಕ್ಲಿಂಟನ್, ಸ್ಯಾಂಡರ್ಸ್‌ರನ್ನು ಅತ್ಯಲ್ಪ ಅಂತರದಿಂದ ಸೋಲಿಸಿದ್ದರು.
ನ್ಯೂಹ್ಯಾಂಪ್‌ಶಯರ್‌ನಲ್ಲಿ ಫೆಬ್ರವರಿ 9ರಂದು ನಡೆಯಲಿರುವ ಪ್ರಾಥಮಿಕ ಚುನಾವಣೆಯಲ್ಲಿ ಸ್ಯಾಂಡರ್ಸ್ ವಿಜಯಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.