ಒಂದಷ್ಟು ಪ್ರತಿಮಾ ರೂಪಕಗಳ ನಡುವೆ...

Update: 2016-02-05 18:59 GMT

2015 ಸೆಪ್ಟಂಬರ್ 30ರಂದು ಅಮೆರಿಕವನ್ನು ಬಿಡಬೇಕಾಗಿತ್ತು. 33 ದಿವಸ ಸುತ್ತಾಟದ ನೆನಪುಗಳಲ್ಲಿ ಹೇಗೆ ಕಳೆದು ಹೋಯಿತೋ ಗೊತ್ತಾಗಲೇ ಇಲ್ಲ. ವೆಸ್ಟ್‌ವುಡ್ ಪ್ರದೇಶದಿಂದ ಬಾಸ್ಟನ್ ನಗರಕ್ಕೆ ಮೂರು ಬಾರಿ ಹೋಗಿದ್ದರೂ, ಇನ್ನೂ ಜಗತ್ತಿನ ಕೆಲವೇ ಶ್ರೇಷ್ಠ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ‘ಹಾರ್ವರ್ಡ್ ವಿಶ್ವವಿದ್ಯಾನಿಲಯ’ಕ್ಕೆ ಹೋಗಿಲ್ಲವಲ್ಲ ಎಂಬ ಕೊರಗು ಇದ್ದೇ ಇತ್ತು. ಕೊನೆಗೆ 28ರಂದು ಇಂದು ನೋಡಲೇಬೇಕೆಂದು ನಿರ್ಧರಿಸಿ ಆತ್ಮೀಯರಾದ ಕಿಶೋರ್ ಗೌಡರ ಜೊತೆ ಹೊರಟೆ. ಇದಕ್ಕಿಂತ ನಾಲ್ಕೈದು ದಿವಸಗಳ ಹಿಂದೆ ಬಾಸ್ಟನ್ ನಗರದ ಅತ್ಯಂತ ಪುರಾತನ ಪಾರ್ಕ್ ನಲ್ಲಿ ಸುತ್ತಾಡಿದ್ದೆ. ಅಲ್ಲಿಯ ಕೆಲವು ಮರಗಳು, ಪ್ರತಿಮೆಗಳು ಹಾಗೂ ಕಾರಂಜಿಗಳು ಮನಸ್ಸಿನಲ್ಲಿ ತುಂಬಿಕೊಂಡಿದ್ದವು. ಇದನ್ನೆಲ್ಲ ಯೋಚಿಸುತ್ತ ‘ಹಾರ್ವರ್ಡ್ ವಿಶ್ವವಿದ್ಯಾನಿಲಯ’ಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದೆವು. ವಿಶಾಲವಾದ ರಸ್ತೆ, ಸಿಗ್ನಲ್ ಬಂತು. ಕಿಶೋರ್ ಗೌಡ ಅವರು ತಮ್ಮ ಕಪ್ಪು ಬೆನ್ಝ್ ಕಾರನ್ನು ನಿಲ್ಲಿಸಿದರು. ಆಗ ಕಾರಿನ ಪಕ್ಕದಲ್ಲಿಯೇ ಒಬ್ಬ ಸೈಕಲ್ ಮೇಲೆ ಬಂದ. ತಲೆಯ ಮೇಲೆ ಟೋಪಿ ಇತ್ತು. ದಢೂತಿ ಯುವಕ. ನನ್ನ ಕಡೆ ಉಗ್ರವಾಗಿ ನೋಡಿದ. ಕಾರಿನ ಮುಂದೆ ಬಂದು ನಮ್ಮ ಮುಖಕ್ಕೆ ರಾಚುವಂತೆ ಕ್ಯಾಕರಿಸಿ ಉಗುಳಿದ. ಅವನು ಉಗುಳಿದ ರಭಸಕ್ಕೆ ಎಂಜಲಿನ ತೊಪ್ಪೆ ಕಾರಿನ ಮುಂಭಾಗದ ಗಾಜಿನ ಮೇಲೆ ಚಾರಿತ್ರಿಕ ನೆನಪು ಎನ್ನುವಂತೆ ಅಂಟಿಕೊಂಡಿತು. ಒಂದು ಕ್ಷಣ ನಾವು ಗಾಬರಿಗೊಂಡೆವು. ಅವನು ನನ್ನನ್ನು ಮುಸ್ಲಿಮ್ ಎಂದು ತಿಳಿದಿದ್ದ. ಯಾಕೆಂದರೆ ನನ್ನ ಗಡ್ಡ ಉದ್ದವಿತ್ತು. ಆ ಘಟನೆಯನ್ನು ಬೀದಿರಂಪ ಮಾಡುವ ಉದ್ದೇಶವಿರಲಿಲ್ಲ. ನಾವು ‘ಹಾರ್ವರ್ಡ್ ವಿಶ್ವವಿದ್ಯಾನಿಲಯ’ದಂಥ ಪವಿತ್ರ ಜ್ಞಾನ ಕೇಂದ್ರಕ್ಕೆ ಹೋಗುವ ತವಕದಲ್ಲಿದ್ದೆವು. ಕಿಶೋರ್ ಇಪ್ಪತ್ತೈದು ವರ್ಷಗಳಿಂದ ಅಮೆರಿಕದಲ್ಲಿ ಕ್ರಿಯಾಶೀಲವಾಗಿರುವುದರಿಂದ, ಅಲ್ಲಿಯ ಜನಾಂಗೀಯ ಏರುಪೇರುಗಳನ್ನು ಚೆನ್ನಾಗಿ ಗಮನಿಸುತ್ತಾ ಬಂದವರು.

ಅಮೆರಿಕದಲ್ಲಿ ವಿಶ್ವವಿಖ್ಯಾತ ಎರಡು ವಾಣಿಜ್ಯ ಕೇಂದ್ರಗಳು ನ್ಯೂಯಾರ್ಕ್ ನಲ್ಲಿ ಭಯೋತ್ಪಾದನೆ ಕಾರಣಕ್ಕಾಗಿ ಪತನಗೊಂಡ ಮೇಲೆ ಮುಸಲ್ಮಾನ ಬಾಂಧವರ ಬಗ್ಗೆ ಅಗಾಧವಾದ ದ್ವೇಷ ಬೆಳೆಯುತ್ತ ಬಂದಿದೆ. ಈ ನೆಲೆಯಲ್ಲಿ ಬರಾಕ್ ಒಬಾಮರಂಥ ಮಹತ್ವಪೂರ್ಣ ರಾಷ್ಟ್ರಾಧ್ಯಕ್ಷರನ್ನು ಕೆಲವರು ಸಹಿಸಿಕೊಂಡೇ ಇಲ್ಲ. ಆದರೆ, ಬಹಳಷ್ಟು ವಿಷಯಗಳಲ್ಲಿ ಅಮೆರಿಕ ಪ್ರಬುದ್ಧ ಮನಸ್ಸಿನ ರಾಷ್ಟ್ರವೂ ಹೌದು. ಅದನ್ನು ಸದಾ ಜೀವಂತವಾಗಿಡುವ ಜಗತ್ತಿನ ಶ್ರೇಷ್ಠ ಚಿಂತಕರು, ಲೇಖಕರು ಮತ್ತು ಕಲಾವಿದರು ಅಲ್ಲಿದ್ದಾರೆ. ಆದ್ದರಿಂದಲೇ ಟ್ರಂಪ್ ರೀತಿಯವರು ಎಷ್ಟೇ ಕೂಗಾಡಿದರು ಹುಚ್ಚರಂತೆ ಪ್ರತಿಬಿಂಬಿತರಾಗುತ್ತಿರುತ್ತಾರೆ. ಇರಲಿ, ಅವನ ಒಂದು ಉಗುಳು ನನಗೊಂದು ಮರೆಯಲಾರದ ನೆನಪಾಗಿಯೇ ಜೀವಂತವಾಗಿದೆ. ಹಾಗೆ ನೋಡಿದರೆ, ನಾನು ಭಾರತವನ್ನು ಬಿಡುವಾಗಲೇ ನಮ್ಮ ಮನೆಯಲ್ಲಿ ಹಾಗೂ ಕೆಲವು ಸ್ನೇಹಿತರು ಗಡ್ಡವನ್ನು ಮಾಮೂಲಿಯಂತೆ ಟ್ರಿಮ್ ಮಾಡಲು ಹೇಳಿದ್ದರು. ಅದಕ್ಕೆ ನಾನು ಒಪ್ಪಲಿಲ್ಲ. ಚೆನ್ನೈಗೆ ವೀಸಾಗೆ ಹೋದಾಗಲೂ ಹಾಗೆಯೇ ಹೋಗಿದ್ದೆ. ಅಲ್ಲಿ ವೀಸಾ ಅಧಿಕಾರಿಯು ನನ್ನ ಬಗ್ಗೆ ಗೂಗಲ್‌ನಲ್ಲಿ ನೋಡಿ, ಏನೇನು ಕಿರಿಕಿರಿ ಮಾಡದೆ ‘ಸಂತೋಷ ಪ್ರಯಾಣ’ದ ಬಗ್ಗೆ ಹೇಳಿ ಕಳಿಸಿಕೊಟ್ಟಿದ್ದ. ಜಗತ್ತಿನಲ್ಲಿ ಎಲ್ಲ ಕಡೆ ವಕ್ರ ಮನುಷ್ಯರು ಇದ್ದೇ ಇರುತ್ತಾರೆ. ಆದರೆ ನನ್ನ ಉದ್ದನೆಯ ಗಡ್ಡದ ಕಾರಣಕ್ಕಾಗಿ ವಿಮಾನ ಹತ್ತುವ ವರೆಗೂ ಸಾಕಷ್ಟು ತೀಕ್ಷ್ಣ ದೃಷ್ಟಿಯನ್ನೂ ಎದುರಿಸಿದ್ದೇನೆ. ಆದೃಷ್ಟಿಗೆ ಸಂಬಂಧಿಸಿ ಕೆಲವು ಪ್ರಶ್ನೆಗಳು ಮುಖಾಮುಖಿಯಾಗುತ್ತಿದ್ದವು. ಪ್ಯಾರಿಸ್‌ನಲ್ಲೂ ಇದು ಸಂಭವಿಸಿತು. ಜೊತೆಗೆ ಅಮೆರಿಕದಲ್ಲಿ ನಾನು ಲಗುಬಗೆಯಿಂದ ಸುತ್ತಾಡುವಾಗಲೂ ಇದನ್ನು ಅನುಭವಿಸಿದ್ದೇನೆ. ‘ನಾವಿಕೆ’ ಸಮಾವೇಶದ ಸಮಯದಲ್ಲಿಯೂ ನಡೆದಿತ್ತು. ಇದು ಸ್ವಾಭಾವಿಕ ಎಂದು ತಿಳಿಯುತ್ತಲೇ ಹೋದೆ. ಹಿಂದೆ ಮೂರು ನಾಲ್ಕು ದಶಕಗಳ ಹಿಂದೆ ತುಂಡು ಗಡ್ಡವನ್ನು ಬಿಟ್ಟಾಗ, ನಾವು ಎಷ್ಟೋ ಗಾಂಧಿವಾದಿಗಳಾಗಿದ್ದರೂ, ಕಮ್ಯುನಿಷ್ಠರೆಂದೇ ಬ್ರಾಂಡ್ ಮಾಡಿದ್ದರು. ನಮ್ಮ ವೇಶ ಭೂಷಣಗಳೂ ಯಾರ್ಯಾರಿಗೋ, ಹೇಗೇಗೋ ಕಾಣಿಸುವುದು. ಲಂಕೇಶ್ ಅವರಂಥವರು ಕೂಡ ಗಡ್ಡ ಬೋಳಿಸಲು ಆಗದಂಥ ಸೋಮಾರಿಗಳು ಎಂದು ಲಘುವಾಗಿ ಛೀಮಾರಿ ಹಾಕುತ್ತಿದ್ದರು. ಇಂಥದ್ದಕ್ಕೆಲ್ಲ ನಾವು ಎಂದೂ ಸೆನ್ಸಿಟಿವ್ ಆಗುತ್ತಿರಲಿಲ್ಲ. ಯಾಕೆಂದರೆ, ಆ ಛೀಮಾರಿಯ ಹಿಂದೆ ಪ್ರೀತಿ ಮತ್ತು ಅಭಿಮಾನವಿರುತ್ತಿತ್ತು.


ಅದೇನೆ ಆಗಿರಲಿ ವಿಶ್ವದ ಉದ್ದಗಲಕ್ಕೂ ಐಸಿಎಸ್ ಸಂಘಟನೆಯ ಭಯೋತ್ಪಾದನೆ ಚಟುವಟಿಕೆಗಳು ತೀವ್ರವಾಗಿರುವುದರಿಂದ, ಉಗುಳಿ ಹೋದ ಯುವಕರ ಸಂಖ್ಯೆ ಜಾಸ್ತಿಯಾಗುತ್ತಲೇ ಹೋಗುವುದು. ಇದನ್ನು ಯಾರೂ ತಪ್ಪಿ ಸಲು ಸಾಧ್ಯವಿಲ್ಲ. ಐಸಿಎಸ್‌ನವರ ಮೂಲ ಉದ್ದೇಶವೂ ಒಂದು ದೃಷ್ಟಿಯಿಂದ ಇದೇ ಆಗಿರಬಹುದು. ಆದರೆ ಆರೋಗ್ಯಪೂರ್ಣ ಮನಸ್ಸುಗಳ ವ್ಯಾಪಕತೆ ಬಹು ದೊಡ್ಡ ಪ್ರಮಾಣದಲ್ಲಿರುವುದರಿಂದ, ಎಲ್ಲ ಕಾಲದಲ್ಲೂ ಇದು ಸ್ವಾಭಾವಿಕ ವೆಂದು ತಮ್ಮ ತಮ್ಮ ಚಟುವಟಿಕೆಗಳಲ್ಲಿ ನಿರತರಾಗಿದ್ದುಕೊಂಡೇ, ಅಂಥ ಸಣ್ಣ ಮನಸ್ಸಿನ ಕ್ರಿಯೆಗಳನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುತ್ತಾರೆ. ಇದು ಎಲ್ಲ ಜನಾಂಗಗಳಲ್ಲಿಯೂ ನಡೆಯುತ್ತಿರುತ್ತದೆ. ಇದನ್ನು ಯೋಚಿಸುತ್ತಲೇ ನಾವು ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಮಾಡುವ ಮುನ್ನವೇ ಜೋರಾಗಿ ಮಳೆ ಬಂತು. ಆಗ ಸ್ವಲ್ಪ ಮಳೆ ನಿಲ್ಲಲಿ ಎಂದು ಸಮೀಪದಲ್ಲಿಯೇ ಇದ್ದ ಬಹು ದೊಡ್ಡ ಪುಸ್ತಕ ಭಂಡಾರದ ಬಳಿ ನಿಂತೆವು. ಅಂಥ ಮಳೆಯಲ್ಲಿಯೂ ಸುಮಾರು ಹದಿನೆಂಟು ವರ್ಷ ವಯಸ್ಸಿನ ಮುದ್ದು ಮುದ್ದಾದ ಹುಡುಗಿಯೊಬ್ಬಳು ಕೂತಿ ದ್ದಳು. ಅವಳು ಕೂತಿದ್ದ ಕಬ್ಬಿಣದ ರಾಡುಗಳು ವಿಶಾಲವಾಗಿಯೇನೂ ಇರಲಿಲ್ಲ. ಅದ್ಯಾವುದನ್ನು ಲೆಕ್ಕಿಸದೇ ಎಲ್ಲವನ್ನು ಮರೆತು ಕೂತಿದ್ದಳು. ಪ್ರೀತಿಯಿಂದ ಕೈ ಬೀಸಿ ಹತ್ತಿರಕ್ಕೆ ಕರೆದಳು. ಅವಳು ಡ್ರಗ್ಸ್‌ನಲ್ಲಿ ಕಳೆದು ಹೋಗಿದ್ದಳು. ಇಷ್ಟಾದರೂ ಅವಳ ಹತ್ತಿರ ಹೋಗಿ ‘‘ನೀನು ಹೀಗ್ಯಾಕೆ?’’ ಎಂದು ಕೇಳುವ ಧ್ವನಿಯೊಂದು ಅಂತರಂಗದಲ್ಲಿ ಪಿಸುಗುಡುತ್ತಿತ್ತು. ನನ್ನ ಮನೆಯ ತಂಗಿಯೊಬ್ಬಳು ಹೀಗಾಗಿ ದ್ದಾಳೆ ಎಂಬ ವೇದನೆ ದಟ್ಟವಾಗ ತೊಡಗಿತ್ತು. ಹೀಗೆ ವಿಶ್ವವ್ಯಾಪಿ ಲಕ್ಷಾಂತರ ಮಂದಿ ಹಾದಿ ತಪ್ಪಿದವರಿದ್ದಾರೆ. ಕೇವಲ ಹುಡುಗಿಯರು ಮಾತ್ರವಲ್ಲ, ಹುಡುಗರೂ ಕೂಡ. ಸಮಾಜ ಸಂಕೇತಗೊಳ್ಳುತ್ತ ಹೋದಂತೆಲ್ಲ, ಕುಟುಂಬದ ಸಂಬಂಧಗಳು ಸಡಿಲಗೊಳ್ಳುತ್ತ ಹೋಗುವುದು. ಆಗ ಇಂಥವರ ಪ್ರಮಾಣ ಭಿನ್ನಭಿನ್ನ ರೂಪದಲ್ಲಿ ಉಲ್ಬಣಗೊಳ್ಳುತ್ತಿರುತ್ತದೆ. ಒಂದು ವಿಧದಲ್ಲಿ ಜಾನ್ ಹಾರ್ವರ್ಡ್ ಅಂಥವನು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೂರದ ಇಂಗ್ಲೆಂಡಿನಲ್ಲಿ ಹುಟ್ಟಿ ಬೆಳೆದು, ಒಟ್ಟು ಕುಟುಂಬ ಪ್ಲೇಗ್ ಎಂಬ ಭಯಂಕರ ಸಾಂಕ್ರಾಮಿಕ ರೋಗದಿಂದ ತತ್ತರಿಸಿ ಹೋಗಿದ್ದಾಗ ಅದನ್ನು ಹೇಗೋ ತನ್ನ 31ಯ ವಯಸ್ಸಿನವರೆಗೂ ಸಹಿಸಿಕೊಂಡು ಬದುಕಿದವನು. ಎಷ್ಟೊಂದು ಪುಸ್ತಕ ಪ್ರೇಮಿ. ಎಂತೆಂಥ ಅಮೂಲ್ಯ ಪುಸ್ತಕಗಳನ್ನೆಲ್ಲ ಸಂಗ್ರಹಿಸಿದ. ಆದರೆ, ತಾನು ಆರೋಗ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ. ಹಾಗೆಯೇ ಸಂಪತ್ತು ಮತ್ತು ಪುಸ್ತಕಗಳನ್ನು ಸಹ. ಕೊನೆಗೆ ಬಾಸ್ಟನ್‌ನಲ್ಲಿ ಜ್ಞಾನ ದೇಗುಲವನ್ನು ಕಟ್ಟಲು ಸಂಪತ್ತನ್ನು ದಾನ ಮಾಡಿದ. ಇಂದು ಹಾರ್ವರ್ಡ್ ವಿಶ್ವವಿದ್ಯಾನಿಲಯವಾಗಿ ಬೆಳೆದಿದೆ. ಹಿಂದೆ ಇದೇ ಅಂಕಣದಲ್ಲಿ ಜಾನ್ ಹಾರ್ವರ್ಡ್ ಕುರಿತು ಪ್ರಸ್ತಾಪಿಸಿ ರುವುದರಿಂದ ಅದೇ ಭಾವನಾತ್ಮಕತೆಯನ್ನು ಮತ್ತೊಮ್ಮೆ ಇಲ್ಲಿ ದಾಖಲಿಸಿದರೆ ಕೃತಕ ಅನ್ನಿಸಬಹುದು.


ಆದರೆ, ಒಂದಂತೂ ಸತ್ಯ. ಒಂದು ವಿಶಾಲ ಭೂಮಿಕೆಯಲ್ಲಿ ಇದ್ದು ಕೆಟ್ಟದ್ದು, ಕ್ಷುಲ್ಲಕವಾದದ್ದು, ಅತ್ಯುತ್ತಮವಾದದ್ದು ಎಂಬ ತಾರತಮ್ಯವಿಲ್ಲದೆ, ಅವುಗಳ ಯೋಗ್ಯತೆಗೆ ಅನುಗುಣವಾಗಿ ನೆನಪಿನ ಬುತ್ತಿಯಲ್ಲಿ ಗಾಢವಾಗಿ ಉಳಿದು ಬಿಟ್ಟಿರುತ್ತದೆ. ಅದು ಪ್ರತಿಮಾ ರೂಪದಲ್ಲಿ ದಟ್ಟಗೊಂಡಿರುತ್ತದೆ. ಸುಮ್ಮನೆ ಒಮ್ಮಿಮ್ಮೆ ನನಗೆ ನಾನೇ ಕೇಳಿಕೊಳ್ಳುವೆ. ಅವನೇನೋ ಕಾರಿನ ಮುಂದೆ ರಪ್ಪನೆ ಬಂದು ನಿಂತು ವ್ಯಗ್ರತೆಯಿಂದ ಉಗುಳಿದ. ಆದರೆ ಅದೇ ಮತ್ತೊಬ್ಬ ಅಮೆರಿಕದ ವ್ಯಕ್ತಿ ನನ್ನನ್ನು ಎಷ್ಟು ಪ್ರೀತಿಯಿಂದ ನೋಡಿದ. ಹಾಗೆ ನೋಡಿದರೆ, ನಾನು ಆತನ ಏಕಾಗ್ರತೆಯ ಓದಿಗೆ ತೊಂದರೆಪಡಿಸಿದ್ದೆ. ಅದು ನಡೆದದ್ದು ಸ್ಯಾನ್‌ಫ್ರಾನ್ಸಿಸ್ಕೋದ ಅಪೂರ್ವ ಪೆಬಲ್ ಬೀಚ್ ಬಳಿ. ನಾವು ಒಂದಷ್ಟು ಪ್ರವಾಸಿಗರು ‘ಲವ್‌ಬರ್ಡ್’ ಪ್ರವಾಸಿಗರ ಬಸ್ಸಿನಲ್ಲಿ ಹೋಗಿ, ಆ ಮನಮೋಹಕ ಬೀಚನ್ನು ನೋಡಿ ಹಿಂದಿರುಗಬೇಕಾಗಿತ್ತು. ಎಲ್ಲರೂ ಹೋಗಿ ಬಸ್ಸಿನಲ್ಲಿ ಕೂತಿದ್ದರು. ಆ ಬೀಚ್‌ನಲ್ಲಿ ಬೆಳ್ಳನೆಯ ಮರಳಿನ ಮೇಲೆ ಒಂದು ಪ್ಲಾಸ್ಟಿಕ್ ಚಾಪೆಯನ್ನು ಹಾಸಿ ಬೋರಲು ಮಲಗಿ ಪುಸ್ತಕವನ್ನು ಓದುತ್ತಿದ್ದ ಒಬ್ಬ ವ್ಯಕ್ತಿಯನ್ನುಕಂಡೆ. ಆತನ ಮೈಮೇಲೆ ಇದ್ದದ್ದು ಒಂದು ತುಂಡು ಚಡ್ಡಿ ಮಾತ್ರ. ನಾನು ಸಂಕೋಚದಿಂದಲೇ ಹೋಗಿ ಪರಿಚಯ ಮಾಡಿಕೊಂಡೆ. ಪ್ರಿತಿಯಿಂದ ಎದ್ದು ನಿಂತ. ನನ್ನ ಉದ್ದನೆಯ ಗಡ್ಡ ನೋಡಿ ಯಾವುದೇ ರೀತಿಯ ವ್ಯಗ್ರತೆಯನ್ನು ವ್ಯಕ್ತಪಡಿಸಲಿಲ್ಲ. ಓದುತ್ತಿದ್ದ ಕೃತಿಯ ಬಗ್ಗೆ ಕೇಳಿದಾಗ, ಅದನ್ನು ನನ್ನ ಕೈಗೆ ಕೊಟ್ಟು ಆ ಕೃತಿಯ ಹೆಸರು ‘ಟು ಕಿಲ್ ಎ ಮಾಕಿಂಗ್ ಬರ್ಡ್’ ಎಂದು, ಹಾರ್ಪರ್ ಲೀ ಎಂಬ ಮಹಿಳೆ ಬರೆದಿರುವ ಕೃತಿ. ಜನಾಂಗೀಯ ಸಮಸ್ಯೆ ಕುರಿತಂಥದ್ದು. ನನಗಿಂತ ಎತ್ತರದ ಆ ವ್ಯಕ್ತಿ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಹತ್ತು ನಿಮಿಷ ಮಾತಾಡಿದ್ದ. ಒಂದು ದೃಷ್ಟಿಯಿಂದ ಆ ವ್ಯಕ್ತಿಯ ಕಾರಣಕ್ಕಾಗಿ ಆ ಪೆಬಲ್ ಬೀಚ್ ಸ್ಮರಣಿಯವಾಗಿದೆ. ಆತನನ್ನು ಬಿಟ್ಟು ಅಲ್ಲಿಂದ ಹೊರಡುವಾಗ, ಎಷ್ಟೊಂದು ವಿಷಾದ ಆವರಿಸಿಕೊಂಡಿತ್ತು. ಎಂದೆಂದೂ ನೋಡಲಾಗದ ವ್ಯಕ್ತಿ.

ಅದೇ ರಿತಿಯಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಿಂದ ಬಾಸ್ಟನ್‌ಗೆ ಹೋಗುವಾಗ ದೀರ್ಘ ಪ್ರಯಾಣದಲ್ಲಿ, ನನ್ನ ಪಕ್ಕದಲ್ಲಿ ಕೂತಿದ್ದ ಒಬ್ಬ ಕಪ್ಪು ಸುಂದರಿ ಹುಡುಗಿ ನನ್ನ ಗಡ್ಡವನ್ನು ನೋಡಿ ಮುಜಗರಪಡಲಿಲ್ಲ. ನಾನೊಬ್ಬ ಮುಸ್ಲಿಮ್ ಎಂದು ಪ್ರಶ್ನಿಸಲಿಲ್ಲ. ಒಂದು ಅಮೂಲ್ಯ ಕೃತಿಯನ್ನು ಪರಿಚಯ ಮಾಡಿಕೊಟ್ಟಳು. ಅದರ ಹೆಸರು, ಕ್ಲಿಯೋಪಾತ್ರ. ಸ್ಟಾನಿ ಸ್ಕಿಪ್ ಎಂಬ ಇತಿಹಾಸದ ವಿದ್ಯಾರ್ಥಿನಿ ಬರೆದ ಜೀವನ ಚರಿತ್ರೆ. ಬಾಸ್ಟನ್‌ಗೆ ಬಂದ ತಕ್ಷಣ ಆ ಪುಸ್ತಕವನ್ನು ತರಿಸಿಕೊಂಡೆ. ಆ ಹುಡುಗಿಯಷ್ಟೇ ಅಮೂಲ್ಯವಾದ ಕೃತಿ. ಸುಮಾರು ಹತ್ತು ಹನ್ನೊಂದು ಗಂಟೆ ಸಂಪರ್ಕದಲ್ಲಿ ಒಂದು ನೂರು ವರ್ಷಗಳಿಗಾಗುವಷ್ಟು ಮಾತಾಡಿರಬಹುದು. ತನ್ನ ಪಕ್ಕದಲ್ಲಿ ಕೂತಿದ್ದ ಮಕ್ಸಿಕನ್ ಮಹಿಳೆಯನ್ನು ಪರಿಚಯ ಮಾಡಿಕೊಟ್ಟಳು. ಕೊನೆಗೂ ಪರಿಚಯವೆಂದರೆ ಏನು? ಸಂಬಂಧ ಎಂದರೇನು ಎಂಬುದನ್ನು ವಿವರಿಸಲಾಗದಷ್ಟು ಅಮೂರ್ತವಾಗಿರುತ್ತದೆ. ಹಾಗೆ ನೋಡಿದರೆ, ವಾಷಿಂಗ್ಟನ್‌ನಲ್ಲಿ ನೂರ ಎಪ್ಪತ್ತೈದು ಮೀಟರ್ ಎತ್ತರದ ಮನಮೋಹಕ ‘ವಾಷಿಂಗ್ಟನ್‌ಸ್ಮಾರಕ’ದ ಬಳಿ ಕೂತು ಹುಚ್ಚು ಹುಚ್ಚಾಗಿ ಏನೇನೋ ಯೋಚಿಸುವ ಸಮಯದಲ್ಲಿ, ಆ ಕಲಾತ್ಮಕ ಸ್ಮಾರಕವೂ ಭಾಗಿಯಾಗಿ ಬಿಟ್ಟಿತ್ತು. ಅಲ್ಲಿ ಯಾರೋ ಒಬ್ಬರು ಯೋಗಾಭ್ಯಾಸ ಮಾಡುತ್ತಿದ್ದರು. ಕುತೂಹಲದಿಂದ ಪರಿಚಯ ಮಾಡಿಕೊಂಡೆ. ಒಂದರ್ಧ ಗಂಟೆ ಯೋಗಾಸನಗಳ ಮಹತ್ವದ ಬಗ್ಗೆ ಚರ್ಚಿಸಿದೆವು. ಈ ಚರ್ಚೆಯ ಮಧ್ಯೆ ಯೋಗ ಗುರು ಡಾ.ಬಿ.ಕೆ.ಎಸ್.ಅಯ್ಯಂಗಾರ್ ಅವರನ್ನು ಕುರಿತು ಪ್ರಸ್ತಾಪಿಸಿದಾಗ, ರೋಮಾಂಚಿತನಾಗಿದ್ದರು. ಯಾಕೆಂದರೆ ಅವರು ಗುರೂಜಿಯವರ ಹೆಚ್ಚುಗಾರಿಕೆಯನ್ನು ತಿಳಿದವರು. ಆ ಸ್ಮಾರಕದ ಬಳಿ ಅರೆಗತ್ತಲಿನಲ್ಲಿ ಚಂದ್ರೋದಯ ಎಷ್ಟು ಮನಮೋಹಕವಾಗಿ ಗೋಚರಿಸುತ್ತಿತ್ತು. ಇದೇ ವಿಧದ ಭಾವನಾತ್ಮಕತೆಯನ್ನು ಅಬ್ರಹಾಂ ಲಿಂಕನ್ ಅವರ ಸ್ಮಾರಕದ ಬಳಿಯೂ ಅನುಭವಿಸಿದ್ದೆ. ಇಷ್ಟೆಲ್ಲ ಪ್ರತಿಮಾ ರೂಪಕಗಳ ಮಧ್ಯೆ ಪೋಪ್ ಫ್ರಾನ್ಸಿಸ್ ಅವರ ಎರಡು ಭಾಷಣಗಳ ಲೈವ್ ಕೇಳುವಾಗ, ‘ಯು ಆರ್ ಗ್ರೇಟ್’ ಎಂಬ ಧ್ವನಿಯು ನನ್ನ ಮನಸ್ಸಿನಲ್ಲಿ ಆವರಿಸಿಕೊಂಡಿತ್ತು. ಯಾಕೆಂದರೆ, ನಿರಾಶ್ರಿತರ ಸಮಸ್ಯೆ ಕುರಿತು ತೀವ್ರವಾದ ಆತಂಕವನ್ನು ವ್ಯಕ್ತಪಡಿಸಿದ್ದರು. ಎಲ್ಲ ಪಾರ್ಲಿಮೆಂಟ್ ಸದಸ್ಯರ ಮುಂದೆ, ಅಮೆರಿಕದ ಜವಾಬ್ದಾರಿ ಬಹಳಷ್ಟಿದೆ ಎಂದಿದ್ದರು. ಅದೇ ಸಮಯಕ್ಕೆ ಜನಾಂಗೀಯ ಏರುಪೇರುಗಳ ಬಗ್ಗೆ ಶಾಶ್ವತ ಮಾರ್ಗಸೂಚಿಗಳನ್ನು ಕಂಡು ಕೊಳ್ಳುವುದರತ್ತ ಒತ್ತು ಕೊಟ್ಟು ಮಾತಾಡಿದ್ದರು. ಮುಂದಿನ ವರ್ಷಗಳಲ್ಲಿ ಆಫ್ರಿಕನ್-ಅಮೆರಿಕನ್ಸ್ ಬಹುದೊಡ್ಡ ಘರ್ಷಣೆಗೆ ಇಳಿಯಬಹುದು. ಈ ಎಲ್ಲವನ್ನು ಸಿಂಹಾವಲೋಕನ ರೂಪದಲ್ಲಿ ನೋಡುವಾಗ, ನನ್ನ ಸ್ವಲ್ಪ ಉದ್ದನೆಯ ದಾಡಿಯೂ ಕೂಡ ಮನುಷ್ಯ ಸಂಬಂಧಗಳ ಕೆಲವು ಸೂಕ್ಷ್ಮಗಳನ್ನು ವಿಸ್ತರಿಸಿದೆ ಅನ್ನಿಸಿತು. ಇಷ್ಟೆಲ್ಲದರ ನಡುವೆಯೂ ನನಗೆ ಒಂದಷ್ಟು ಅಮೂಲ್ಯ ಕೃತಿಗಳು ದೊರಕಿದವು.

Writer - ಶೂದ್ರ ಶ್ರೀನಿವಾಸ್‌

contributor

Editor - ಶೂದ್ರ ಶ್ರೀನಿವಾಸ್‌

contributor

Similar News