ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ಗಾಂಜಾ ಮಾರಾಟ ಜಾಲ
ಶಿವಮೊಗ್ಗ : ಜಿಲ್ಲೆಯಲ್ಲಿ ಗಾಂಜಾ ಮಾರಾಟ, ಡ್ರಗ್ಸ್ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ. ಯುವ ಜನತೆ ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ ಎಂಬುದಕ್ಕೆ ಇತ್ತೀಚಿನ ಕೆಲವು ಘಟನೆಗಳೇ ಸಾಕ್ಷಿಯಾಗಿವೆ. ಇತ್ತೀಚೆಗೆ ಜಿಪಂನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಚನ್ನಬಸಪ್ಪನವರು ಘಟನೆಯೊಂದನ್ನು ಪ್ರಸ್ತಾಪಿಸಿ, ಯುವ ಜನತೆ ಗಾಂಜಾ ವ್ಯಸನಕ್ಕೆ ಹೇಗೆ ಒಳಗಾಗಿದ್ದಾರೆ ಎಂಬುದನ್ನು ವಿವರವಾಗಿ ತಿಳಿಸಿದ್ದರು.ಗಾಂಜಾ ವಿಚಾರದಲ್ಲಿ ದೂರು ನೀಡಲು ತೆರಳಿದವರ ಮೇಲೆಯೇ ಹಲ್ಲೆ ನಡೆಯುತ್ತದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ್ದರು.
ನಗರದ ಮಾರ್ನಮಿ ಬೈಲಿನಲ್ಲಿ ಹರೀಶ್ ಎಂಬ ಯುವಕನ ಮೇಲೆ ನಡೆದ ಘಟನೆಗೆ ಗಾಂಜಾ ನಶೆಯ ನಂಟು ಇದೆ ಎಂಬುದು ಪೊಲೀಸ್ ಇಲಾಖೆಯ ತನಿಖೆ ವೇಳೆ ಬಯಲಾಗಿತ್ತು.ಹಾಗೂ ಸಾಕಷ್ಟು ಭದ್ರತೆ ಹೊಂದಿರುವ ಸೋಗಾನೆ ಕೇಂದ್ರ ಕಾರಾಗೃಹದ ಕ್ಯಾಂಟಿನ್‌ಗೆ ತಂದಿದ್ದ ಬಾಳೆಗೊನೆಗಳಲ್ಲಿ ಗಾಂಜಾ ಪತ್ತೆಯಾಗಿತ್ತು. ನ.19ರಂದು ಮಧ್ಯಾಹ್ನ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಆಟೊ ಒಂದರಲ್ಲಿ ಐದು ಬಾಳೆಗೊನೆಯನ್ನು ತರಲಾಗಿತ್ತು. ಜೈಲು ಭದ್ರತೆ ನಿರ್ವಹಿಸುತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ತಪಾಸಣೆ ನಡೆಸಿ,ಬಾಳೆದಿಂಡಿನಲ್ಲಿ 123 ಗ್ರಾಂ ಗಾಂಜಾ ಪತ್ತೆ ಹಚ್ಚಿದ್ದರು. ಇಷ್ಟೇ ಅಲ್ಲದೆ ಇದೇ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕನೊಬ್ಬ ತನ್ನ ಒಳ ಉಡುಪಿನಲ್ಲಿ ಕೈದಿಗಳಿಗೆ ಗಾಂಜಾ ಪೂರೈಕೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ. ಈತನ ವಿರುದ್ಧ ಪ್ರಕರಣ ದಾಖಲಾಗಿದೆ.
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರಕ್ಕೆ ಹೋಗುವ ರಿಂಗ್ ರೋಡ್ ರಸ್ತೆಯಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದರು. ಇವರಿಂದ ಬರೋಬ್ಬರಿ 1 ಕೆಜಿ 420 ಗ್ರಾಂ ಗಾಂಜಾ ಹಾಗೂ 24 ಗ್ರಾಂ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಯಿತು. ಈ ಕೆಲವು ಪ್ರಕರಣಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಜಾಲ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ನಗರದ ಪ್ರತಿಷ್ಟಿತ ಇಂಜಿನಿಯರ್ ಕಾಲೇಜು, ಮೆಡಿಕಲ್ ಕಾಲೇಜುಗಳು ಸೇರಿದಂತೆ ಹಲವಾರು ಕಡೆಗಳಿಗೆ ಅಕ್ರಮವಾಗಿ ಗಾಂಜಾ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಜಾಲವನ್ನು ಪೊಲೀಸರು ಭೇದಿಸಬೇಕು. ನಗರದ ಗಲ್ಲಿ ಗಲ್ಲಿಗಳಲ್ಲಿ ಮಾರಾಟವಾಗುತ್ತಿರುವ ಗಾಂಜಾ ವ್ಯವಹಾರಕ್ಕೆ ಕಡಿವಾಣ ಹಾಕಬೇಕು. ಪೊಲೀಸರು ಕೇವಲ ಪ್ರಕರಣ ದಾಖಲಿಸಿ ಕೈ ತೊಳೆದುಕೊಂಡರೆ ಸಲ್ಲದು, ಗಾಂಜಾ ಮಾರಾಟಗಾರರು,ಬೆಳೆಗಾರರು ಹಾಗೂ ಸೇವಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಮಾದಕ ವಸ್ತು, ಗಾಂಜಾ ಮಾರಾಟ, ಸಾಗಾಟ, ಸೇವನೆ, ಬೆಳೆಯುವುದು, ಸಂಗ್ರಹ ಶಿಕ್ಷಾರ್ಹ ಅಪರಾಧವಾಗಿದ್ದು,ಇದರ ನಿಯಂತ್ರಣಕ್ಕೆ ಶಿವಮೊಗ್ಗ ಜಿಲ್ಲಾದ್ಯಂತ ವಿಶೇಷ ಕ್ರಮ ಕೈಗೊಂಡಿದ್ದೇವೆ. ನಗರ ವ್ಯಾಪ್ತಿಯಲ್ಲಿ ಡಿಎಆರ್ ಹಾಗೂ ಕ್ಯೂಆರ್‌ಟಿ ತಂಡದೊಂದಿಗೆ ಸಂಜೆ 6 ರಿಂದ 10ರ ವರೆಗೆ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಿ, ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದವರನ್ನು ಠಾಣೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಸೇವನೆ ದೃಢಪಟ್ಟವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ರೀತಿಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
-ಮಿಥುನ್ ಕುಮಾರ್ ಜಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ