ನಗರಗಳಲ್ಲಿ ಜಾತಿ ಇಲ್ಲವೇ?
ಜಾತಿ ನಗರದಲ್ಲಿ ಒಂದು ಸ್ಥಳಕ್ಕೆ ಸೀಮಿತವಾಗಿಲ್ಲ. ಸಂಸ್ಥೆಗಳಲ್ಲಿ, ಸಂಬಂಧಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಅಡಗಿರುವುದನ್ನು ಕಾಣಬಹುದು. ಭಾರತದ ಸಾಮಾಜಿಕ ರಚನೆ ದೀರ್ಘಕಾಲದಿಂದ ಜಾತಿ ಇತಿಹಾಸದ ತೂಕವನ್ನು ಹೊತ್ತುಕೊಂಡಿವೆ. ಈ ಅಡಚಣೆಗಳನ್ನು ಸರಿಯಾಗಿ ಗುರುತಿಸಿ ತೆಗೆದುಹಾಕಿದಾಗ ಮಾತ್ರ ನಿಜವಾದ ಸಮಾನತೆ ಆಧಾರಿತ ನಗರಗಳನ್ನು ನಿರ್ಮಿಸಲು ಸಾಧ್ಯ.
ಇತ್ತೀಚೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಸಮಯದಲ್ಲಿ ಗೊತ್ತಾದ ಅಂಶವೆಂದರೆ ನಗರ ಪ್ರದೇಶಗಳಲ್ಲಿ ಜಾತಿ ತಾರತಮ್ಯದ ಕುರೂಪ ದರ್ಶನ. ನಿಜ ಜಾತಿ ಹೇಳಿದರೆ ಯಾರೂ ಬಾಡಿಗೆ ಮನೆ ಕೊಡುವುದಿಲ್ಲ ಎನ್ನುವ ಕಾರಣದಿಂದ ತಮ್ಮ ಮೂಲ ಜಾತಿಯನ್ನು ಮರೆಮಾಚಿ ಉತ್ತಮ ಜಾತಿಗಳ ಹೆಸರು ಹೇಳಿ ಬದುಕುತ್ತಿರುವುದು ಅನೇಕ ಕಡೆ ಕಂಡುಬಂದಿದೆ. ಕೆಲವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಜನರು ಜಾತಿ ಹೆಸರನ್ನು ಲಿಂಗಾಯತರು ಎಂದು ಬರೆಸಿ ಮಾರನೇ ದಿನ ಸಮೀಕ್ಷೆ ಅಧಿಕಾರಿಗಳ ಹತ್ತಿರ ಬಂದು ‘‘ಸರ್ ನಾವು ದಲಿತರು, ಈ ವಿಷಯ ಗೊತ್ತಾದರೆ ಮಾಲಕರು ಮನೆ ಖಾಲಿ ಮಾಡಿಸುತ್ತಾರೆ. ಅದಕ್ಕೆ ಸುಳ್ಳು ಜಾತಿ ಬರೆಸಿದೆ. ಈಗ ಅದನ್ನು ಸರಿ ಮಾಡಿ’’ ಎಂದು ಕೇಳಿಕೊಂಡಿರುವ ಪ್ರಸಂಗಗಳು ಕಂಡುಬಂದಿವೆ. ಇನ್ನೊಂದು ಏರಿಯಾದಲ್ಲಿ ಒಂದು ಕುಟುಂಬ ಗಣತಿ ಅಧಿಕಾರಿಗಳಿಗೆ ತಮ್ಮ ಜಾತಿ ಹೆಸರನ್ನು ಮೆಲ್ಲಗೆ ಹೇಳುತ್ತಿದ್ದರು. ಕಾರಣ ಕೇಳಿದಾಗ ‘‘ನಾವು ನಮ್ಮ ಮನೆಯಲ್ಲಿ ಇರುವ ಬಾಡಿಗೆದಾರರಿಗೆ ನಮ್ಮದು ಬೇರೆ ಜಾತಿ ಎಂದು ಹೇಳಿದ್ದೇವೆ. ಅವರಿಗೆ ಮನೆ ಮಾಲಕನ ನಿಜ ಜಾತಿ ಗೊತ್ತಾದರೆ ಮನೆ ಖಾಲಿ ಮಾಡುತ್ತಾರೆ. ವಿಷಯ ಗೊತ್ತಾಗಿ ಬೇರೆ ಜಾತಿಯವರು ಬಾಡಿಗೆಗೆ ಬರುವುದಿಲ್ಲ ಎಂಬ ಭಯ. ಸರ್’’ ಎಂದರು. ಇದರಿಂದ ಭಾರತೀಯ ನಗರಗಳ ಬಗ್ಗೆ ಸಾಮಾನ್ಯ ಕಲ್ಪನೆ ಏನೆಂದರೆ, ನಗರೀಕರಣವು ಜಾತಿ ವ್ಯವಸ್ಥೆಯನ್ನು ಇನ್ನೊಂದು ರೂಪದಲ್ಲಿ ಸಂಘಟಿತಗೊಳಿಸುತ್ತಿದೆ ಎಂಬುದು. ಗಗನಚುಂಬಿ ಕಟ್ಟಡಗಳು, ಮಲ್ಟಿನ್ಯಾಷನಲ್ ಕಂಪೆನಿಗಳು, ಮೆಟ್ರೋ ರೈಲುಗಳು, ಐಟಿ ಪಾರ್ಕ್‌ಗಳು ಇವೆಲ್ಲವೂ ಮೆರಿಟ್, ಸಮಾನ ಅವಕಾಶ ಹಾಗೂ ಅನಾಮಿಕತೆ ಆಧಾರಿತ ಸಮಾಜವನ್ನು ಸಂಕೇತಿಸುವಂತಿವೆ. ಆದರೆ ಈ ಆಧುನಿಕತೆಯ ಮೇಲ್ಮೈ ಕೆಳಗಿರುವ ನಗರದ್ದು ಒಂದು ಗಾಢವಾದ ಸಾಮಾಜಿಕ ರಚನೆ; ಇಲ್ಲಿ ಜಾತಿ ಮಂಕಾಗುವುದಿಲ್ಲ, ಬದಲಿಗೆ ಹೊಸ ರೂಪಗಳಲ್ಲಿ ತಾನೇ ತಾನಾಗಿ ಪುನರುತ್ಪತ್ತಿ ಪಡೆಯುತ್ತಿದೆ. ಹೀಗಾಗಿ ನಗರದಲ್ಲಿ ಜಾತಿ ಎಲ್ಲಿದೆ? ಎಂಬ ಪ್ರಶ್ನೆ ಉಂಟಾಗಿದೆ. ಜಾತಿಯನ್ನು ಕಣ್ಣಿಗೆ ಕಾಣುವ ಗ್ರಾಮೀಣ ರೂಪದಲ್ಲಿ ಹುಡುಕುವುದಲ್ಲ; ಅದು ನಗರ ಜೀವನದ ವಿವಿಧ ಪದರಗಳಲ್ಲಿ ಹೇಗೆ ಅಡಗಿರುವುದು ಎಂಬುದನ್ನು ಅರಿಯಬೇಕಾದ ಪ್ರಶ್ನೆ.
ಮೊದಲು ನಗರದ ನೆಲೆಯ ವಿನ್ಯಾಸಕ್ಕೆ ಗಮನಿಸಿದರೆ ಜಾತಿ ವ್ಯವಸ್ಥೆಯ ರಚನೆ ಇನ್ನೂ ಸ್ಪಷ್ಟವಾಗುತ್ತವೆ. ಇಂದು ಅಗ್ರಹಾರ, ಪಾಳಿ, ಓಣಿ ಎಂಬ ಹೆಸರುಗಳು ಕಾಣಿಸದಿದ್ದರೂ, ವಸತಿ ಪ್ರದೇಶಗಳು ಜಾತಿ ಆಧಾರದ ಮೇಲೆ ವಿಭಜನೆಯಾಗಿರುವುದನ್ನು ಕಾಣಬಹುದು. ಮನೆ ಬಾಡಿಗೆಗೆ ನೀಡುವಾಗ ಸಸ್ಯಾಹಾರಿಗಳಿಗೆ ಮಾತ್ರ ಎಂಬ ಮಸುಕಾದ ಪದಗಳು ಜಾತಿ ಆಧಾರಿತ ಫಿಲ್ಟರ್‌ಗಳಂತೆ ಕೆಲಸ ಮಾಡುತ್ತವೆ. ಹಾಗೆಯೇ ಬೆಳೆಯುತ್ತಿರುವ ನಗರ ಸ್ಲಂಗಳು ಸಹ ವಲಸೆ ಬಂದ ಸಮುದಾಯಗಳ ಜಾತಿ ಆಧಾರಿತ ಗುಂಪುಗಾರಿಕೆಯನ್ನು ಪ್ರತಿಬಿಂಬಿಸುತ್ತವೆ. ಅನೇಕ ದಲಿತರು, ಸಾಂಪ್ರದಾಯಿಕ ಕಾರ್ಮಿಕರು, ಅಲೆಮಾರಿ ಸಮುದಾಯಗಳು ನಗರಕ್ಕೆ ಬಂದರೂ, ನಗರೀಕರಣದ ಫಲಗಳನ್ನು ಪಡೆಯದೆ, ಆರ್ಥಿಕ ಮತ್ತು ಭೌಗೋಳಿಕ ಅಂಚಿನಲ್ಲಿ ಉಳಿಯುತ್ತಿದ್ದಾರೆ.
ಆಧುನಿಕ ಭಾರತದಲ್ಲಿ ಜಾತಿ ವ್ಯವಸ್ಥೆ ಕಣ್ಮರೆಯಾಗಿಲ್ಲ; ಬದಲಾಗಿ, ಅದು ಸಮಕಾಲೀನ ವ್ಯವಸ್ಥೆಗೆ ಅನುಗುಣವಾಗಿ ಹೊಂದಿಕೊಂಡಿದೆ. ವಿಶೇಷವಾಗಿ ನಗರ ಸ್ಥಳಗಳಲ್ಲಿ, ಅಲ್ಲಿ ಜಾತಿ ಸೂಕ್ಷ್ಮ, ಪರೋಕ್ಷ ಮತ್ತು ಮರುಸಂಘಟಿತ ರೂಪಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂದು ಜಾತಿ ಅನೌಪಚಾರಿಕ ರೀತಿಯಲ್ಲಿ ಎಲ್ಲೆಡೆ ಮುಂದುವರಿಯುತ್ತಿದೆ. ಬ್ರಾಹ್ಮಣ ಕೆಟರಿಂಗ್ ಸರ್ವಿಸ್, ಉಡುಪಿ ಹೋಟೆಲ್ ಎನ್ನುವ ಬೋರ್ಡ್ ಎಲ್ಲೆಡೆ ಇಂದು ಸಿಟಿಗಳಲ್ಲಿ ಸಾಮಾನ್ಯ. ಕೆಲವೆಡೆ ಒಂದು ನಿರ್ದಿಷ್ಟ ಸಮುದಾಯಕ್ಕೆ ಆದ್ಯತೆ ನೀಡುವ ಜಾಹೀರಾತುಗಳು ಇಂದು ನಗರದ ಎಲ್ಲೆಡೆ ಕಾಣಬಹುದು. ಫ್ಲೆಕ್ಸ್ ಮತ್ತು ಬ್ಯಾನರ್‌ಗಳಲ್ಲಿ ಜಾತಿಯು ರಾರಾಜಿಸುತ್ತಿರುವುದನ್ನು ನಾವು ಕಾಣಬಹುದು. ಬೆಂಗಳೂರು, ಮುಂಬೈ, ದಿಲ್ಲಿ, ಹೈದರಾಬಾದ್ ಮತ್ತು ಪುಣೆಯಂತಹ ಕಾಸ್ಮೋಪಾಲಿಟನ್ ನಗರಗಳಲ್ಲಿಯೂ ಸಹ ಜಾತಿ ಆಧಾರಿತ ಅದೃಶ್ಯ ಭೌಗೋಳಿಕ ಗಡಿಗಳನ್ನು ಕಾಣಬಹುದು. ನಗರಗಳಲ್ಲಿ ವ್ಯಾಪಾರಗಳನ್ನು ಕೆಲವೊಮ್ಮೆ ನಿರ್ದಿಷ್ಟ ಸಮುದಾಯದ ಜಾಲ ನಿಯಂತ್ರಿಸುತ್ತದೆ. ಹಿಂದುಳಿದ ಸಮುದಾಯ ನೈರ್ಮಲ್ಯ, ವಿತರಣಾ ಸೇವೆ ಮತ್ತು ಇತರ ಗಿಗ್ ಇಕಾನಮಿ ಉದ್ಯೋಗಗಳಲ್ಲಿ ಅಸಮಾನವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲಿ ನೇಮಕಾತಿ ಹೆಚ್ಚಾಗಿ ಜಾತಿ ಆಧಾರಿತ ಅನೌಪಚಾರಿಕ ಜಾಲಗಳ ಮೂಲಕ ನಡೆಯುತ್ತದೆ.
ಅದೇ ರೀತಿ, ನಗರ ಪ್ರದೇಶಗಳಲ್ಲಿ ಜಾತಿ ಸಂಘಗಳು ರಾಜಕೀಯ ನಿರ್ಧಾರಗಳ ಮೇಲೆ ಬಹಳ ಪ್ರಭಾವ ಬೀರುತ್ತವೆ. ಪ್ರಜಾಪ್ರಭುತ್ವ ಭಾಗವಹಿಸುವಿಕೆಯನ್ನು ಸಿದ್ಧಾಂತಕ್ಕಿಂತ ಜಾತಿ ಆಧಾರಿತ ಬಣಗಳ ಕಡೆಗೆ ಬದಲಾಯಿಸುತ್ತವೆ. ಜಾತಿ ಆಧಾರಿತ ವಾಟ್ಸ್‌ಆ್ಯಪ್ ಗುಂಪುಗಳು, ಯೂಟ್ಯೂಬ್ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರವೃತ್ತಿಗಳು ಇಂದು ಹೆಚ್ಚಾಗಿವೆ. ಬುಡಕಟ್ಟು ಮತ್ತು ದಲಿತ ಇತಿಹಾಸಗಳನ್ನು ಅಂಚಿನಲ್ಲಿಡುವ ಖಾಸಗಿ ಶಾಲೆಗಳು ಸಹ ಸಂಖ್ಯೆಯಲ್ಲಿ ಹೆಚ್ಚಾಗಿವೆ. ನಗರ ಆರ್ಥಿಕತೆಯು ಜಾತಿ ಶ್ರೇಣಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ ಬಡ ಮತ್ತು ಹಿಂದುಳಿದ ಕಾರ್ಮಿಕರು ತಟಸ್ಥವಾಗಿ ಕಾಣುತ್ತಾರೆ. ರಚನಾತ್ಮಕವಾಗಿ ಅಂಚಿನಲ್ಲಿರುವ ಜಾತಿ ಗುಂಪುಗಳನ್ನು ಕಡಿಮೆ-ಭದ್ರತೆ, ಕಡಿಮೆ ಲಾಭದ ಕೆಲಸದಲ್ಲಿ ಹೆಚ್ಚಾಗಿ ನೋಡಬಹುದು. ಸವಲತ್ತು ಪಡೆದ ಜಾತಿಗಳು ಅಧಿಕಾರ ನಿರ್ವಹಣೆ ಮತ್ತು ಮಾಲಕತ್ವದಲ್ಲಿ ಪ್ರಾಬಲ್ಯ ಸಾಧಿಸುತ್ತವೆ. ಜಾತಿಯನ್ನು ಧಾರ್ಮಿಕ ಶ್ರೇಣಿಯಿಂದ ಆರ್ಥಿಕ ಶ್ರೇಣೀಕರಣಕ್ಕೆ ಬದಲಾಯಿಸುತ್ತವೆ. ಆದರೂ, ಈ ಹಿಂಜರಿತದ ಪ್ರವೃತ್ತಿಗಳ ಜೊತೆಗೆ, ಜಾತಿ ಆಧಾರಿತ ಸಾಹಿತ್ಯ ವಲಯಗಳು, ಸಾಂಸ್ಕೃತಿಕ ಸಂಘಟನೆಗಳು, ರಂಗಭೂಮಿ ಚಳವಳಿಗಳು ಮತ್ತು ವಿದ್ಯಾರ್ಥಿ ನಿಲಯಗಳ ಮೂಲಕ ಒಗ್ಗಟ್ಟು, ರಾಜಕೀಯ ಅರಿವು ಮತ್ತು ಪ್ರತಿ-ನಿರೂಪಣೆಗಳನ್ನು ಬೆಳೆಸುವ ಮೂಲಕ ಸಿದ್ಧಾಂತಗಳ ಪ್ರತಿಪಾದನೆಯ ತಾಣಗಳಾಗಿ ಮಾರ್ಪಟ್ಟಿವೆ. ಹೀಗಾಗಿ, ಆಧುನಿಕ ಭಾರತೀಯ ನಗರಗಳಲ್ಲಿ ಜಾತಿಯು ರದ್ದುಗೊಂಡ ಅವಶೇಷವಾಗಿ ಕಾರ್ಯನಿರ್ವಹಿಸುವುದಿಲ್ಲ, ಆದರೆ ರೂಪಾಂತರಗೊಂಡ ಮತ್ತು ವಿವಿಧ ಪದರಗಳ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ದೈನಂದಿನ ಅಭ್ಯಾಸಗಳು, ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ಸಾಂಸ್ಕೃತಿಕ ಆಯ್ಕೆಗಳಲ್ಲಿ ಜಾತಿ ರಹಸ್ಯವಾಗಿ ಹುದುಗಿದೆ. ಏಕಕಾಲದಲ್ಲಿ ಪ್ರತಿರೋಧ ಮತ್ತು ಅಸ್ಮಿತೆಯ ಪ್ರತಿಪಾದನೆಯ ಭಾಗವಾಗಿದೆ ಎನ್ನುತ್ತಾರೆ ಮಾನವಶಾಸ್ತ್ರಜ್ಞರು.
ನಗರದ ಉದ್ಯೋಗ ಮಾರುಕಟ್ಟೆಯಲ್ಲಿ ಜಾತಿಯ ಪ್ರಭಾವ ಇನ್ನೂ ಹೆಚ್ಚು ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತಿದೆ. ನಗರವು ಜಾತಿ ರಹಿತ ಉದ್ಯೋಗ ಕೊಡುತ್ತದೆ ಎಂಬ ಕಲ್ಪನೆ ಮಿಥ್ಯ. ಕ್ಲೀನಿಂಗ್, ಕಸ ವಿಂಗಡಣೆ, ಬೀದಿ ಸ್ವಚ್ಛತೆ ಮುಂತಾದ ಕೆಲಸಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದಲಿತ ಸಮುದಾಯಗಳು ತೊಡಗಿರುವುದು ಕಂಡುಬರುತ್ತದೆ. ಕಾರ್ಪೊರೇಟ್ ವಿಭಾಗದಲ್ಲಿ ಉದ್ಯೋಗಗಳು ಸಂಜ್ಞೆಗಳ ಮೂಲಕ ನಿರ್ಧಾರಗೊಳ್ಳುತ್ತವೆ ಎನ್ನುವ ಮಾತಿದೆ. ಇಂಗ್ಲಿಷ್ ಶಿಕ್ಷಣ, ತರಬೇತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಸೌಲಭ್ಯ ಮತ್ತು ಸಾಂಸ್ಕೃತಿಕ ಬಂಡವಾಳ ಇವುಗಳ ಲಾಭವನ್ನು ಮೇಲ್ವರ್ಗದ ಜಾತಿ ಗುಂಪುಗಳು ಹೆಚ್ಚಾಗಿ ಅನುಭವಿಸುತ್ತವೆ. ಇದರಿಂದ ಮೊದಲ ಪೀಳಿಗೆಯ ನಗರ ಬಡವರಿಗೆ ಅವಕಾಶಗಳು ನಿರ್ಬಂಧಿತವಾಗುತ್ತಿವೆ ಎನ್ನುವ ಆರೋಪವಿದೆ. ಮಹಾನಗರಗಳಾದ ಬೆಂಗಳೂರು, ಮುಂಬೈ, ದಿಲ್ಲಿ ಮತ್ತು ಹೈದರಾಬಾದ್‌ನಲ್ಲಿ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಜಾತಿಗಳಿಂದ ಬಂದ ವ್ಯಕ್ತಿಗಳು ಶಿಕ್ಷಣ, ಸರಕಾರಿ ಉದ್ಯೋಗಗಳು, ಐಟಿ ವಲಯ ಮತ್ತು ಉತ್ತಮ ಜೀವನೋಪಾಯಕ್ಕೆ ಹೆಚ್ಚಿನ ಪ್ರವೇಶ ಪಡೆಯುತ್ತಿದ್ದರೂ, ಸ್ನೇಹ ಸಂಬಂಧಗಳು, ನೆರೆಹೊರೆಯ ಸಂಘಟನೆಗಳು ಮತ್ತು ಮಾರ್ಗದರ್ಶನ ವಲಯಗಳು ಇನ್ನೂ ಜಾತಿ ಆಧಾರಿತವಾಗಿಯೇ ಉಳಿದಿವೆ. ಜೊತೆಗೆ, ಕಂಪೆನಿಗಳಲ್ಲಿ ಪದೋನ್ನತಿ ಅವಕಾಶಗಳು, ವೃತ್ತಿಜೀವನದ ಬೆಳವಣಿಗೆ ಮತ್ತು ವೃತ್ತಿಪರ ಜಾಲತಾಣಗಳಲ್ಲಿ ಅನೌಪಚಾರಿಕವಾಗಿ ಇನ್ನೂ ಭೇದಭಾವ ಇನ್ನೂ ಮುಂದುವರಿದಿದೆ. ಸರಕಾರವು ಸಹ ಸಾಕಷ್ಟು ರೀತಿಯಲ್ಲಿ ಜಾತಿ ನಿವಾರಣೆಗೆ ಪ್ರಯತ್ನಪಟ್ಟರೂ ತಾನೇ ಜಾತಿ ಜಂಜಾಟದಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬಹುದು. ನೀತಿ ನಿರೂಪಣೆಗಳು ಸಹ ಇಂದು ಸಮುದಾಯ ಆಧಾರಿತವಾಗಿ ಮಾಡಬೇಕಾಗಿದೆ.
ನಗರ ರಾಜಕೀಯದಲ್ಲೂ ಜಾತಿ ಗುರುತು ಮಹತ್ವದ್ದೇ. ವಾರ್ಡ್ ಮಟ್ಟದ ಚುನಾವಣೆಗಳಲ್ಲಿ ಯಾವ ಪ್ರದೇಶದಲ್ಲಿ ಯಾವ ಜಾತಿ ಸಮೂಹ ಹೆಚ್ಚು ಎಂಬುದರ ಮೇಲೆ ಮತಗಳ ಲೆಕ್ಕಾಚಾರ ನಡೆಯುತ್ತದೆ. ವಿವಿಧ ಜಾತಿ ಸಂಘಗಳು, ಸೇವಾ ಸಂಘಗಳು, ಸಮುದಾಯ ಭವನಗಳು ಮತ್ತು ಹಾಸ್ಟೆಲ್‌ಗಳು ನಗರದಲ್ಲಿ ಪುನರ್‌ಸಂಘಟಿತವಾಗುತ್ತವೆ. ಹೀಗಾಗಿ ನಗರವೂ ಒಂದು ಸಾಂಸ್ಥಿಕ ಜಾತಿ ಜಾಲ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಬಹುದು. ಲಿಂಗಾಯತ ಖಾನಾವಳಿ, ಉಡುಪಿ ಹೋಟೆಲ್ ಇವೆಲ್ಲವೂ ಇದರ ಭಾಗಗಳೇ. ಆಟೋ, ಲಾರಿಗಳ ಹಿಂದೆಯೂ ಜಾತಿ ಹೆಸರು ರಾರಾಜಿಸುತ್ತಿದೆ. ಸಾಮಾಜಿಕ ಜೀವನದಲ್ಲಿ, ವಿಶೇಷವಾಗಿ ವಿವಾಹ ವಿಚಾರದಲ್ಲಿ ಜಾತಿಯ ಹಿಡಿತ ಸ್ಪಷ್ಟ. ಐಟಿ ಕಂಪೆನಿಗಳು, ಶಾಲಾ ಕಾಲೇಜುಗಳು ಇವುಗಳಲ್ಲಿನ ಅಂತರ್ಜಾತಿ ಸಂವಹನ ಹೆಚ್ಚಾಗಿದ್ದರೂ, ಮದುವೆಗಳ ವಿಚಾರಕ್ಕೆ ಬಂದಾಗ ಸಮುದಾಯದ ಒತ್ತಡ, ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳ ಜಾತಿ ಫಿಲ್ಟರ್‌ಗಳು, ಕುಟುಂಬದ ಒಲವು ಇವುಗಳಿಂದ ಜಾತಿ ಹಿರಿಮೆ ಮುಂದುವರಿಯುತ್ತಿವೆ ಎಂಬುದಕ್ಕೆ ಸಾಕ್ಷಿ. ನಗರದ ಪ್ರತಿನಿತ್ಯದ ಬದುಕು ಕೂಡ ಜಾತಿಯ ನೆರಳಿನಿಂದ ಮುಕ್ತವಲ್ಲ. ಬೀದಿ ಸ್ವಚ್ಛತೆ ಮಾಡುವವರು ಯಾರು? ರೆಸ್ಟೋರೆಂಟ್‌ನಲ್ಲಿ ಅಡುಗೆ ಮಾಡುವವರು ಯಾರು? ಯಾರು ಅಗ್ರಹಾರಗಳಲ್ಲಿ ವಾಸಿಸುತ್ತಾರೆ? ಇವೆಲ್ಲವೂ ನಗರ ಜಾತಿ-ಆಧಾರಿತ ಅವಕಾಶಗಳ ಅಸಮಾನತೆಯನ್ನು ಅನಾವರಣಗೊಳಿಸುತ್ತವೆ ಎನ್ನಲು ಅಡ್ಡಿ ಇಲ್ಲ. ವಿವಿಧ ಜಾತಿಗಳಿಗೆ ಮಾತ್ರ ಸೀಮಿತವಾಗಿರುವ ವಿದ್ಯಾರ್ಥಿನಿಲಯಗಳೇ ಇದಕ್ಕೆ ಸಾಕ್ಷಿ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಸಹ ಜಾತಿ ಸಂಘಟನೆಗಳು ಈಗಾಗಲೇ ಹುಟ್ಟಿಕೊಂಡಿವೆ.
ಅತಿಯಾದ ನಗರೀಕರಣದ ಪ್ರಗತಿಯ ನಡುವೆಯೂ ಜಾತಿ ವಿಚಾರಗಳು ಕಳೆಗುಂದುವುದಿಲ್ಲ. ಇದು ಸಾಮಾಜಿಕ ಜಾಲಗಳು, ಆರ್ಥಿಕ ಅವಕಾಶಗಳು ಮತ್ತು ಸಾಂಸ್ಕೃತಿಕ ಪೈಪೋಟಿಗಳ ಮೂಲಕ ನಿರಂತರವಾಗಿ ಹೊಸ ರೂಪಗಳಲ್ಲಿ ಪುನರುತ್ಪತ್ತಿ ಹೊಂದುತ್ತದೆ. ಸರಕಾರಿ ಯೋಜನೆಗಳು, ಸಮುದಾಯ ಭಾಗವಹಿಸುವಿಕೆ ಮತ್ತು ಸಬಲೀಕರಣದ ಕಾರ್ಯಕ್ರಮಗಳ ಮೂಲಕ ಸಮಗ್ರ ಪರಿಹಾರಕ್ಕೆ ಬಲವಾದ ಕಾರ್ಯಯೋಜನೆ ಬೇಕು. ನಿರಂತರ ಪರಿಶೀಲನೆ ಸಹ ಅಗತ್ಯ. ಅಂತಿಮವಾಗಿ ನೋಡಿದರೆ, ಜಾತಿ ನಗರದಲ್ಲಿ ಒಂದು ಸ್ಥಳಕ್ಕೆ ಸೀಮಿತವಾಗಿಲ್ಲ. ಸಂಸ್ಥೆಗಳಲ್ಲಿ, ಸಂಬಂಧಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಅಡಗಿರುವುದನ್ನು ಕಾಣಬಹುದು. ಭಾರತದ ಸಾಮಾಜಿಕ ರಚನೆ ದೀರ್ಘಕಾಲದಿಂದ ಜಾತಿ ಇತಿಹಾಸದ ತೂಕವನ್ನು ಹೊತ್ತುಕೊಂಡಿದೆ. ಈ ಅಡಚಣೆಗಳನ್ನು ಸರಿಯಾಗಿ ಗುರುತಿಸಿ ತೆಗೆದುಹಾಕಿದಾಗ ಮಾತ್ರ ನಿಜವಾದ ಸಮಾನತಾ ಆಧಾರಿತ ನಗರಗಳನ್ನು ನಿರ್ಮಿಸಲು ಸಾಧ್ಯ.