ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ನಿಷೇಧ
ಕೇರಳ ಸರಕಾರದಿಂದ ಸಮರ್ಥನೆ
ಶಬರಿಮಲೆ, ಫೆ.6: ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕಿರುವ ನಿಷೇಧವನ್ನು ಸಮರ್ಥಿಸಿರುವ ಕೇರಳ ಸರಕಾರ. ಭಕ್ತರ ನಂಬಿಕೆ ಹಾಗೂ ಪದ್ಧತಿಗಳನ್ನು ಕಾನೂನು ಪ್ರಕ್ರಿಯೆಯ ಮೂಲಕ ಬದಲಾಯಿಸಲಾಗದು.ಧಾರ್ಮಿಕ ವಿಚಾರಗಳಲ್ಲಿ ‘ಅರ್ಚಕರ ಅಭಿಪ್ರಾಯವೇ ಅಂತಿಮ’ ಎಂದು ಸುಪ್ರೀಂಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.
ಋತು ಚಕ್ರ ಸಕ್ರಿಯವಾಗಿರುವ ವಯೋ ಗುಂಪಿನ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕಿರುವ ನಿರ್ಬಂಧವನ್ನು ಸಮಾನತೆಯ ಮೂಲ ಭೂತ ಹಕ್ಕಿನ ನೆಲೆಯಲ್ಲಿ ಪರೀಕ್ಷಿಸುವಂತಿಲ್ಲ. ಏಕೆಂದರೆ ಅದು, ‘ವ್ಯಕ್ತಿಗಳನ್ನು ಹೊರಗಿಡುವ ಹಕ್ಕು’ ಸಹಿತ ಧಾರ್ಮಿಕ ನಡವಳಿಕೆಯ ಅವಶ್ಯ ಹಾಗೂ ಸಮಗ್ರ ಭಾಗವನ್ನು ಒಳಗೊಂಡಿದೆಯೆಂದು ಅದು ಪ್ರತಿಪಾದಿಸಿದೆ.
ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರವು ತನ್ನ ಪೂರ್ವಾಧಿಕಾರಿ ಎಲ್‌ಡಿಎಫ್ ಸರಕಾರದ ‘ತಮ್ಮ ನಿಲುವನ್ನು’ಹಿಂದೆ ಪಡೆದಿದೆ. 2007ರ ನವೆಂಬರ್‌ನಲ್ಲಿ ಸಲ್ಲಿಸಿದ್ದ ಅಫಿದಾವಿತ್ ಒಂದರಲ್ಲಿ ಎಲ್‌ಡಿಎಫ್ ಸರಕಾರವು, ಶಬರಿಮಲೆ ದೇಗುಲಕ್ಕೆ ಮಹಿಳೆಯರ ಒಂದು ವರ್ಗಕ್ಕೆ ಪ್ರವೇಶ ನಿಷೇಧಿಸುವುದು ನ್ಯಾಯವಲ್ಲ ಎಂದಿತ್ತು. ಬದಲಾವಣೆಗೆ ಅನುಕೂಲ ಕಲ್ಪಸುವುದಕ್ಕಾಗಿ ವಿದ್ವಾಂಸರ ಆಯೋಗವೊಂದನ್ನು ನೇಮಿಸುವ ಒಲವನ್ನೂ ಅದು ವ್ಯಕ್ತಪಡಿಸಿತ್ತು.
ಆದರೆ, ಈಗಿನ ಸರಕಾರವು ಹೊಸ ಅಫಿದಾವತ್ ಒಂದರಲ್ಲಿ, ಬದಲಾವಣೆಯನ್ನು ಬಯಸಿದ್ದ ಹಿಂದಿನ ನಿಲುವು ಕಾನೂನು ನೆಲೆಯನ್ನು ಪಡೆದಿಲ್ಲ. 2007ರಲ್ಲಿ ತಳೆದಿದ್ದ ನಿಲುವನ್ನು ಹಿಂದೆಗೆಯುವ ಮೂಲಕ ‘ತಪ್ಪನ್ನು ಸರಿಪಡಿಸಲು’ ತಾನು ಬಯಸಿದ್ದೇನೆ. ಧಾರ್ಮಿಕ ವಿಧಿಗಳು ಉತ್ಸವಗಳು ಹಾಗೂ ಪೂಜಾ ವಿಧಾನಗಳು ಸಂವಿಧಾನದ 25 ಹಾಗೂ 26ನೆ ವಿಧಿಗಳನ್ವಯ ರಕ್ಷಣೆ ಪಡೆದಿರುವ ಪ್ರತ್ಯೇಕ ಧಾರ್ಮಿಕ ವಿಷಯಗಳಾಗಿವೆ. ಅವು, ತಮ್ಮ ಸ್ವಂತ ವ್ಯವಹಾರಗಳನ್ನು ನಿರ್ವಹಿಸಲು ಜನರಿಗೆ ಅಧಿಕಾರ ನೀಡಿವೆಯೆಂದು ಹೇಳಿದೆ.
ಶಬರಿಮಲೆ ದೇವಳದ ವಿಚಾರದಲ್ಲಿ, ತಿರುವಾಂಕೂರು-ಕೊಚ್ಚಿ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ 1950ರ ಪ್ರಸ್ತಾವಗಳನ್ವಯ ತಿರುವಾಂಕೂರು ದೇವಸ್ವಂ ಮಂಡಳಿಯ ವಶದಲ್ಲಿ ಆಡಳಿತವಿದೆ. ಈ ಕಾಯ್ದೆಯನ್ವಯ ಪದ್ಧತಿಗೆ ಅನುಸಾರವಾಗಿ ದೇವಾಲಯದಲ್ಲಿ ಪೂಜೆಗೆ ವ್ಯವಸ್ಥೆ ಮಾಡುವ ಕಾಯ್ದೆ ಬದ್ಧ ಕರ್ತವ್ಯ ಅದರವಾಗಿದೆ. ಆದುದರಿಂದ, ಧಾರ್ಮಿಕ ವಿಚಾರಗಳಲ್ಲಿ ಅರ್ಚಕರ ಅಭಿಪ್ರಾಯವೇ ಅಂತಿಮವೆಂದು ಕೇರಳ ಸರಕಾರ ಪ್ರತಿಪಾದಿಸಿದೆ.
ಪ್ರಶ್ನೆಯಲ್ಲಿರುವ ಧಾರ್ಮಿಕ ಸಂಸ್ಥೆಯ ಸಿದ್ಧಾಂತದ ಪ್ರಕಾರ ಪೂಜೆಯಲ್ಲಿ ಭಾಗವಹಿಸಲು ಅವಕಾಶ ನೀಡಬಾರದ ವ್ಯಕ್ತಿಗಳನ್ನು ಹೊರಗಿಡುವ ಹಕ್ಕು ಒಂದು ಧಾರ್ಮಿಕ ವಿಚಾರವಾಗಿದೆ. ಅಂತಹ ಅವಶ್ಯ ಹಾಗೂ ಸಮಗ್ರ ಧಾರ್ಮಿಕ ಭಾಗಗಳು 14ನೆ ಪರಿಚ್ಛೆದದ (ಸಮಾನತೆಯ ಹಕ್ಕು) ಸವಾಲಿನಿಂದ ರಕ್ಷಣೆ ಪಡೆದಿವೆಯಂದು ಅದು ತಿಳಿಸಿದೆ.