ಕರುಳಿಗೇ ಕತ್ತರಿಯಾಡಿಸುವ ‘ವಿಸಾರಣೆ’
ಪಾಂಡಿ (ಅಟ್ಟಕತಿ ದಿನೇಶ್), ಮುರುಘನ್ (ಆಡುಲಾಕಂ ಮುರುಗದಾಸ್), ಅಪ್ಸಲ್ (ಸಿಲಂಬರಸನ್) ಹಾಗೂ ಕುಮಾರ್ (ಪ್ರದೀಶ್) ಈ ಮೂರು ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ನಿರ್ದೇಶಕ ವೆಟ್ರಿಮಾರನ್ ಅವರು ಪೊಲೀಸ್ ವ್ಯವಸ್ಥೆಯ ವಿಚಾರಣೆ ಎನ್ನುವ ನೆಪದಲ್ಲಿ ನಡೆಯುವ ಕ್ರೌರ್ಯವನ್ನು ಕಟ್ಟಿಕೊಟ್ಟಿದ್ದಾರೆ ತಮ್ಮ ವಿಸಾರಣೈ ಚಿತ್ರದಲ್ಲಿ. ವಿಚಾರಣೆ ಎಂದರೆ, ತಪ್ಪಿತಸ್ಥರು ಯಾರು ಎನ್ನುವ ಹುಡುಕಾಟವಲ್ಲ, ಬದಲಿಗೆ ಅಮಾಯಕರನ್ನು ತಪಿತಸ್ಥರನ್ನಾಗಿ ಒಪ್ಪಿಸುವುದು. ವರ್ತಮಾನಕ್ಕೆ ಹೆಚ್ಚು ಹತ್ತಿರವಾಗುವಂತಹ ಅಂಶಗಳು ಈ ಚಿತ್ರದಲ್ಲಿ ನಮ್ಮನ್ನು ತೀವ್ರವಾಗಿ ಕಾಡುತ್ತವೆ. ನಾಲ್ವರು ಅಮಾಯಕರನ್ನು ಹೇಗೆ ವ್ಯವಸ್ಥೆಯ ಹರಕೆಯ ಕುರಿಯಾಗಿ ಬಳಸಿಕೊಂಡು, ಅವರನ್ನು ವಿಧಿವತ್ತಾಗಿ ಬಲಿಕೊಡಲಾಗುತ್ತದೆ ಎನ್ನುವ ಅಂಶವನ್ನು ಈ ಚಿತ್ರ ತೆರೆದಿಡುತ್ತದೆ. ಈ ಚಿತ್ರದಲ್ಲಿ ಮಾತು ಕಡಿಮೆ. ಲಾಠಿಯ ಸದ್ದೇ ಸಂಭಾಷಣೆ. ಚಿತ್ರ ಹಿಂಸೆಗೆ ಬಳಸುವ ನೀರೆರಚುವ ಸದ್ದು, ಚಿತ್ರ ಹಿಂಸೆ ನಡೆಸುವ ಸಂದರ್ಭದಲ್ಲಿ ಹೊರಬರುವ ಕೆಮ್ಮು, ದಮ್ಮು, ಹಲ್ಲುಗಳನ್ನು ಕೀಳುವಾಗ ಕೇಳಿಬರುವ ಆಕ್ರಂದನವೇ ಇಲ್ಲಿ ಸಂಗೀತ. ಕ್ರೌರ್ಯವನ್ನು ಹಸಿ ಹಸಿಯಾಗಿ ತೆರೆದಿಡುತ್ತದೆ ‘ವಿಸಾರಣೈ’ ಚಿತ್ರ. ವೌನವೂ ಕೂಡ ಇಲ್ಲಿ ಭಯಾನಕ. ಇದು ಕೇವಲ ತೋರಿಕೆಯ ವಿಚಾರಣೆ. ಆದರೆ ಇಲ್ಲಿ ಮಾತು ಕಡಿಮೆ. ಬದಲಾಗಿ ಬರಿಮೈಯ ಮೇಲೆ ಅಪ್ಪಳಿಸುವ ಲಾಠಿಯ ಸದ್ದು, ಅವರ ಮೇಲೆ ರಭಸದ ನೀರು ಹರಿಸುವಾಗ ಕೆಮ್ಮು- ದಮ್ಮು, ಬೆರಳುಗಳಿಂದ ಉಗುರು ಕೀಳುವ, ಬೆರಳುಗಳನ್ನು ಒಂದೊಂದಾಗಿ ಕತ್ತರಿಸುವ ಭಯಾನಕ ಚಿತ್ರಣವೇ ಎಲ್ಲವನ್ನೂ ಹೇಳುತ್ತದೆ. ಇದೊಂದು ಕ್ರೂರ ಆಟ. ಪಾಂಡಿ ಬಾಗಿದರೆ ಅಥವಾ ಬಿದ್ದರೆ, ಆತನ ಉಳಿದ ಮೂವರು ಸ್ನೇಹಿತರ ಮೇಲೆ ಇನ್ನಷ್ಟು ಕ್ರೌರ್ಯ. ನೀಳಕಾಯಗಳು ವಿಕಟಶಕ್ತಿಗೆ ಬಲಿಯಾಗುವಾಗ ಮಾಂಸಖಂಡಗಳು ಹೇಗೆ ಕಂಪಿಸುತ್ತವೆ ಎನ್ನುವ ಸೂಕ್ಷ್ಮನೋಟವನ್ನು ಕ್ಯಾಮೆರಾ ಚಲನೆ ಕಟ್ಟಿಕೊಡುತ್ತದೆ. ಶಬ್ದವಿನ್ಯಾಸ ಮೈನಡುಗಿಸುತ್ತದೆ. ನಿಮ್ಮ ಬೆನ್ನಲ್ಲೇ ಬಾಸುಂಡೆ ಬಂದ ಅನುಭವವಾಗುತ್ತದೆ!
ವಿಸಾರಣೈ ಹಿಂಸೆಯನ್ನು ಬಣ್ಣಿಸಲು ಪದಗಳು ಸೋಲುತ್ತವೆ. ಆದರೆ ಕೀಳು ಅಭಿರುಚಿಯ ಹಿಂಸೆಯಲ್ಲ. ಚಿತ್ರದ ಸಂರಚನೆಗೆ ಅದು ಅನಿವಾರ್ಯ. ಕಂಬಿ ಹಿಂದಿನಿಂದ ಬಿಡುಗಡೆಯಾಗುವ ಪಾಂಡಿ ಹೊಸ ಬಲಿಪಶುವಿಗೆ ಸಹಾಯ ಮಾಡಲು ಮುಂದಾಗುವಾಗ ಎರಡನೆ ವಿಚಾರಣೆ ಎಷ್ಟರ ಮಟ್ಟಿಗೆ ಕ್ರೌರ್ಯಮಯವಾಗಿರಬಹುದು ಎಂದು ನಾವು ಕಲ್ಪಿಸಿಕೊಳ್ಳಬೇಕಾಗುತ್ತದೆ. ಅದನ್ನು ನೋಡಿಯೇ ಅನುಭವಿಸಬೇಕು.
ಹಾಗೆಯೇ ವಿಚಾರಣೆ ಎಲ್ಲ ಸಂದರ್ಭದಲ್ಲೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಹವಾನಿಯಂತ್ರಿತ ಕೋಣೆಯಲ್ಲಿ, ದೊಡ್ಡ ವ್ಯಕ್ತಿಗಳನ್ನು ನಡೆಸುವ ವಿಚಾರಣೆಯ ಬಗೆ ಬೇರೆಯದೇ. ಅಲ್ಲಿಯ ವೌನ, ಕ್ರೌರ್ಯ ಇನ್ನೊಂದು ಬಗೆಯದು. ನಿರ್ದೇಶಕ ಕತೆ ಹೇಳುವ ಸಂದರ್ಭದಲ್ಲಿ ಎಲ್ಲೂ ಭಾವಾವೇಶಕ್ಕೊಳಗಾಗುವುದಿಲ್ಲ. ನಮ್ಮ ಕತ್ತುಪಟ್ಟಿ ಹಿಡಿದು, ಅನುಭೂತಿಗೆ ಒತ್ತಾಯಿಸುವುದಿಲ್ಲ. ಅವರದ್ದು ವಿದ್ಯುಕ್ತ, ಉದ್ವೇಗರಹಿತ ದೃಷ್ಟಿಕೋನ.
ವೆಟ್ರಿಮಾರನ್ ವಿಸಾರಣೈ ವಯಸ್ಕರ ಚಿತ್ರ. ಕೇವಲ ಇದು ಮಕ್ಕಳಿಗೆ ಅಸಮರ್ಪಕವಾದ ಅಂಶಗಳನ್ನು ಹೊಂದಿದೆ ಎಂಬ ಕಾರಣಕ್ಕಾಗಿ ಮಾತ್ರವಲ್ಲ; ಬದಲಾಗಿ, ಪ್ರೇಕ್ಷಕರನ್ನು ಮಕ್ಕಳೆಂದು ಪರಿಗಣಿಸುವ ವಾದವನ್ನು ಇದು ತಿರಸ್ಕರಿಸುತ್ತದೆ. ಇಲ್ಲಿ ಭಾಷೆ ಕೂಡಾ ಪ್ರಬುದ್ಧ. ಸೆನ್ಸಾರ್ ಮಂಡಳಿ ಸಾಕಷ್ಟು ಕತ್ತರಿ ಆಡಿಸಿದ ಬಳಿಕವೂ ಈ ಚಿತ್ರ ನಿಮ್ಮ ಕರುಳಲ್ಲಿ ಕತ್ತರಿ ಆಡಿಸುತ್ತದೆ ಎಂದರೆ, ನಿರ್ದೇಶಕನ ಶಕ್ತಿಗೆ ಇದು ಸಾಕ್ಷಿ.
ವಿಭಿನ್ನ ಬಗೆಯ ವಿಲನ್‌ಗಳನ್ನು ಈ ಚಿತ್ರ ಬಿಂಬಿಸುತ್ತದೆ. ಅವರಲ್ಲಿ ಕೆಲವರೆಂದರೆ, ಗುಂಟೂರು ಪೊಲೀಸ್ ಮುಖ್ಯಸ್ಥ ವಿಶ್ವೇಶ್ವರ ರಾವ್ (ಅಜಯ್ ಘೋಷ್) ಹಾಗೂ ಪೊಲೀಸ್ ರಾಮಚಂದ್ರನ್. ಈ ವ್ಯವಸ್ಥೆಯ ಆಗುಹೋಗುಗಳಲ್ಲಿ ಲೀಲಾಜಾಲವಾಗಿ ಬೆರೆತವರು. ಇವರು ನರನರಗಳಲ್ಲಿ ವಿಷ ಮೈಗೂಡಿಸಿಕೊಂಡವರು. ಮುತ್ತುವೇಲು ಮೂರನೆ ಬಗೆಯ ಪೊಲೀಸ್. ಆತ ಒಳ್ಳೆಯ ಹಾಗೂ ಸರಿಯಾದ ಕೆಲಸ ಮಾಡುವ ದೃಷ್ಟಿ ಹೊಂದಿದ್ದಾನೆ. ಆದರೆ ಈ ವ್ಯವಸ್ಥೆ ಆತನನ್ನು ಕೆಟ್ಟ ವ್ಯಕ್ತಿಯಾಗಿ ಪರಿವರ್ತಿಸಿದೆ. ವಿಸಾರಣೈ ಖಂಡಿತವಾಗಿಯೂ ವಿಶಿಷ್ಟ ಚಿತ್ರ. ಹಲವು ಪದರಗಳು ಚಿತ್ರದಲ್ಲಿದ್ದರೂ ಯಾವುದೇ ಸ್ಪಷ್ಟ ಸಂದೇಶವಿಲ್ಲ. ಮಾನವಹಕ್ಕುಗಳ ಉಲ್ಲಂಘನೆಯ ಬಗ್ಗೆ ನಮ್ಮನ್ನು ಕಣ್ಣು ತೆರೆಸುವ ಚಿತ್ರ ಎನ್ನಬಹುದು. ಚಿತ್ರದ ಕೊನೆಗೆ, ದೇಶದಲ್ಲಿ ಶೇ.30ರಷ್ಟು ಪ್ರಕರಣಗಳು ಹೀಗೆ ಇತ್ಯರ್ಥವಾಗುತ್ತದೆ ಎಂಬ ಅಂಕಿ ಅಂಶವನ್ನು ನೀಡುತ್ತದೆ. ಬಹುಶಃ ಇದು ಜಾತಿ ಕುರಿತ ಚರ್ಚೆಗೆ ಇಂಬು ನೀಡುತ್ತದೆ ಎನ್ನಬಹುದು. ಪಾಂಡಿ ಹಾಗೂ ಆತನ ಸ್ನೇಹಿತರು ದುರ್ಬಲ ಸಮುದಾಯಕ್ಕೆ ಸೇರಿದವರು. ಈ ಕಾರಣದಿಂದ ಅವರನ್ನು ಹೀಗೆ ಪರಿಗಣಿಸಲಾಗಿದೆ. ಪೊಲೀಸ್ ಶ್ರೇಣೀಕರಣದಲ್ಲೂ ಜಾತಿ ಪ್ರಬಲ ಅಂಶ. ಆದರೆ ವಾಸ್ತವವಾಗಿ ಈ ಚಿತ್ರ ಸಾರಿ ಹೇಳುವುದೆಂದರೆ, ಪ್ರಬಲರು ದುರ್ಬಲರನ್ನು ಹೇಗೆ ಬೇಟೆಯಾಡುತ್ತಾರೆ ಎನ್ನುವುದು. ನಮ್ಮ ಆಳವಾದ ಸಿನಿಕತನದ ಹಾಗೂ ವ್ಯವಸ್ಥೆ ಬಗೆಗಿನ ಆಳವಾದ ಭೀತಿಯ ಬಗ್ಗೆ ವಿಸಾರಣೈ ಬೆಳಕು ಚೆಲ್ಲುತ್ತದೆ.
ಇಲ್ಲಿ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ಇಲ್ಲದಿದ್ದರೂ, ಮನೋಜ್ಞವಾದ ಚಿತ್ರೀಕರಣ ವಿಸಾರಣೈ ಚಿತ್ರದಲ್ಲಿ ಗಮನ ಸೆಳೆಯುತ್ತದೆ. ನಮ್ಮ ಜೀವನದಿಂದಲೇ ಎಳೆದುಕೊಂಡ ಚಿತ್ರಪಟಗಳೋ ಎಂಬಂಥ ಫ್ರೇಮಿಂಗ್. ನೈಜಜೀವನವನ್ನು ಕಣ್ಣಿಗೆ ಕಟ್ಟುವಂಥ ಬಣ್ಣನೆ. ಇಲ್ಲಿ ಪಾತ್ರದ್ದೂ ನಟನೆ ಎನಿಸುವುದೇ ಇಲ್ಲ. ಅದರಲ್ಲೂ ಮುಖ್ಯವಾಗಿ ದಿನೇಶ್ ಮನಸ್ಸಿನ ಆಳಕ್ಕೆ ಇಳಿಯುತ್ತಾನೆ. ಕೊನೆಯಲ್ಲಿ ಪಂಜರದ ಪ್ರಾಣಿಯಂತೆ ವಿಲವಿಲನೆ ಒದ್ದಾಡುತ್ತಾನೆ. ಈ ಹಂತದಲ್ಲಿ ಆತ ಮೊಣಕಾಲು ಮಟ್ಟದ ಕೆಸರಿನಲ್ಲಿ ಸಿಲುಕಿರುವುದು ಕೂಡಾ ತೀರಾ ಸಾಂಕೇತಿಕವಾಗಿದೆ. ಮುತ್ತುವೆಲ್ ಮೂಡಾ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿರುತ್ತಾನೆ. ಬಹುಶಃ ಎಲ್ಲರೂ ಹೇಸಿಗೆಯಲ್ಲಿ ಬಂಧಿಗಳಾಗುತ್ತೇವೆ. ಚಿತ್ರದ ಮೊದಲರ್ಧ ನಾವು ವ್ಯವಸ್ಥೆಯಲ್ಲಿ ಗುರುತಿಸುವ ಸ್ಥಳಗಳಲ್ಲಿ ಅಂದರೆ ಪೊಲೀಸ್‌ಠಾಣೆ, ಕೋರ್ಟ್‌ಗಳಲ್ಲಿ ಚಿತ್ರೀಕರಣವಾಗಿದೆ. ಆದರೆ ಕೊನೆಯಲ್ಲಿ, ಮಧ್ಯಮವರ್ಗದ ನೆರೆಹೊರೆಯ ಪರಿಚಿತ ತಾಣವಾಗಿ ಮಾರ್ಪಡುತ್ತದೆ. ಅಂದರೆ ಅದು ನಮ್ಮ ಸಹಜ ಬದುಕಿನ ತಾಣ. ಇದು ನಿಜಕ್ಕೂ ಮೈ ನವಿರೇಳಿಸುವ ವರ್ಗಾವಣೆ. ಅಂದರೆ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದು ಸರ್ವವ್ಯಾಪಿ.