ಅಸಹಿಷ್ಣುತೆ ಕರಿನೆರಳು: ಅಮೀರ್ ಡೀಲ್‌ಗೆ ಉರುಳು
ನವದೆಹಲಿ: ಅಸಹಿಷ್ಣುತೆ ಕರಿನೆರಳು ಬಾಲಿವುಡ್ ನಟ ಅಮೀರ್ ಖಾನ್ ಅವರ ಜಾಹೀರಾತು ಒಪ್ಪಂದಗಳಿಗೆ ಉರುಳಾಗಿ ಪರಿಣಮಿಸಿದೆ. ತಮ್ಮ ವೃತ್ತಿಜೀವನದಲ್ಲೇ ಮೊಟ್ಟಮೊದಲ ಬಾರಿಗೆ ಯಾವುದೇ ಕಂಪನಿಯ ಪ್ರಚಾರ ರಾಯಭಾರಿಯಾಗದೇ ಅಮೀರ್ ಹೊರಗೆ ಉಳಿದಿದ್ದಾರೆ. ಇತ್ತೀಚೆಗೆ ಸ್ನ್ಯಾಪ್‌ಡೀಲ್, ಖಾನ್ ಒಪ್ಪಂದವನ್ನು ವಿಸ್ತರಿಸಲು ನಿರಾಕರಿಸಿತ್ತು. ಅದಾಗ್ಯೂ ಅಮೀರ್ ಮುಖ ಜಾಹೀರಾತು ಉದ್ಯಮದ ಸೂಜಿಗಲ್ಲು ಎಂದು ಜಾಹೀರಾತು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
"ಅಮೀರ್ ಅತ್ಯುನ್ನತ ನಟ. ಕೇವಲ ಚಿತ್ರರಂಗಕ್ಕಷ್ಟೇ ಸೀಮಿತರಲ್ಲ. ಅಸಹಿಷ್ಣುತೆ ಬಗೆಗಿನ ಹೇಳಿಕೆಯೇ ಅವರಿಗೆ ಮಾರಕವಾದ್ದು. ಆದರೆ ವಿವಾದ ತಣ್ಣಗಾದ ಬಳಿಕ ಜಾಹೀರಾತುದಾರರು ಅವರನ್ನು ಹೊರಗಿಡುತ್ತಾರೆ ಎನಿಸುವುದಿಲ್ಲ" ಎಂದು ಜಾಗತಿಕ ಜಾಹೀರಾತು ದೈತ್ಯ ಕಂಪನಿಯಾದ ವೀಡೆಂಟ್ ಕೆನಡಿಯ ಸೃಜನಶೀಲ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ವಿ.ಸುನಿಲ್ ಅಭಿಪ್ರಾಯಪಡುತ್ತಾರೆ. ಈ ಕಂಪನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನದ ರೂವಾರಿ.
ದಾದ್ರಿಯಲ್ಲಿ ವ್ಯಕ್ತಿಯೊಬ್ಬ ಗೋಮಾಂಸ ಸೇವಿಸಿದ್ದಾನೆ ಎಂಬ ವದಂತಿ ಹಿನ್ನೆಲೆಯಲ್ಲಿ ಒಬ್ಬನನ್ನು ಉದ್ರಿಕ್ತ ಗುಂಪು ಹತ್ಯೆ ಮಾಡಿದ ಘಟನೆ ಹಾಗೂ ಮತ್ತೊಂದು ಘಟನೆಯಲ್ಲಿ ಇಬ್ಬರು ದಲಿತ ಮಕ್ಕಳನ್ನು ದಹಿಸಿದ ಘಟನೆ ಬಳಿಕ ಕಳೆದ ನವೆಂಬರ್‌ನಲ್ಲಿ ಅಮೀರ್‌ಖಾನ್, "ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಹಿನ್ನೆಲೆಯಲ್ಲಿ ತಾವು ಕುಟುಂಬದ ಜತೆಗೆ ದೇಶ ತೊರೆಯುವ ಚಿಂತನೆ ಮಾಡಿದ್ದೇನೆ" ಎಂದು ಹೇಳಿಕೆ ನೀಡಿರುವುದು ಕೆಂಗಣ್ಣಿಗೆ ಕಾರಣವಾಗಿತ್ತು.
ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗಿತ್ತು. ಹಲವು ರಾಜಕಾರಣಿಗಳು ಈ ಹೇಳಿಕೆ ಖಂಡಿಸಿದರೆ, ಹಲವು ಮಂದಿ ತಮ್ಮ ಫೋನ್‌ಗಳಿಂದ ಸ್ನ್ಯಾಪ್‌ಡೀಲ್ ಆಪ್ ಕಿತ್ತುಹಾಕುವ ಮೂಲಕ ಪ್ರತಿಭಟನೆ ಮಾಡಿದ್ದರು. ಆ ಬಳಿಕ ಅವರ ಜಾಹೀರಾತುಗಳನ್ನು ಕಂಪನಿ ಸ್ಥಗಿತಗೊಳಿಸಿತ್ತು.
ಕಳೆದ ತಿಂಗಳು ಸರ್ಕಾರ ಅಮೀರ್‌ಖಾನ್ ಅವರ "ಇನ್‌ಕ್ರೆಡಿಬಲ್ ಇಂಡಿಯಾ" ಪ್ರವಾಸೋದ್ಯಮ ಉತ್ತೇಜನ ಜಾಹೀರಾತಿನಿಂದ ಅವರನ್ನು ಕೈಬಿಟ್ಟಿತ್ತು. ಇದೀಗ ಸ್ನ್ಯಾಪ್‌ಡೀಲ್ ಅವರನ್ನು ಕೈಬಿಟ್ಟಿದೆ.