ಎರಡು ಕುಟುಂಬಗಳ ನಡುವೆ 'ಲಿವರ್ 'ವಿನಿಮಯ !
ಮುಂಬೈ, ಫೆ.7: ಮೂವತ್ತಮೂರರ ಹರೆಯದ ಮೀನಾ ರಾನವಾಡೆ ಪುಣೆ ಜಿಲ್ಲೆಯ ನಲಂದಾ ಗ್ರಾಮದ ನಿವಾಸಿ ಕೃಷಿಕನ ಪತ್ನಿ. ದೀಪ್ತಿ ಗಾದ್ವಿ ನೈರೋಬಿ ಚಾನಲ್ ಸುದ್ದಿ ವಾಚಕಿ. ಲಿವರ್(ಯಕೃತ್ ) ಕಸಿ ಶಸ್ತ್ರಚಿಕಿತ್ಸೆಗೆ ಲಿವರ್ ಭಾಗಗಳ ವಿನಿಮಯದಿಂದಾಗಿ ಎರಡು ಕುಟುಂಬಗಳು ನೆಮ್ಮದಿಯ ಜೀವನ ನಡೆಸುವಂತಾಗಿದೆ.
ದೀಪ್ತಿ ಲಿವರ‍್ ಕ್ಯಾನ್ಸರ್ ರೋಗಿ. ಮೀನಾರ ಪತಿ ಬಾಲು ಲಿವರ‍್ ವೈಫಲ್ಯದಿಂದ ಸಾವಿನಂಚಿಗೆ ಸಿಲುಕಿದ್ದರು. ಮೀನಾ ಅವರು ದೀಪ್ತಿಗೆ ತನ್ನ ಲಿವರ್್ ಭಾಗವನ್ನು ಜನವರಿ 7ರಂದು ದಾನ ಮಾಡಿದರು. ಇದೇ ವೇಳೆ ದೀಪ್ತಿಯ ಗಂಡ ಮುಹಮ್ಮದ್ ನೂರಾನಿ ತನ್ನ ಲಿವರ್ ಭಾಗವನ್ನು ಮೀನಾರ ಪತಿ ಬಾಲುಗೆ ದಾನ ಮಾಡಿದರು. ಇದರಿಂದಾಗಿ ಎರಡು ಕುಟುಂಬಗಳು ಎದುರಿಸುತ್ತಿದ್ದ ಸಮಸ್ಯೆ ದೂರವಾಗಿದೆ.
ಮುಂಬೈನ ಪಾರೆಲ್ ಗ್ಲೋಬಲ್ ಆಸ್ಪತ್ರೆಯಲ್ಲಿ ಲಿವರ‍್ ತಜ್ಞ ವೈದ್ಯರಾದ ಡಾ. ಸಮಿರ‍್ ಶಾ ಮತ್ತು ಡಾ.ರವಿ ಮೋಹನ್ಕಾ ಅವರು ದೀಪ್ತಿ ಮತ್ತು ಬಾಲು ಅವರ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ಕೈಗೊಂಡಿದ್ದಾರೆ. ಇದು ದೇಶದಲ್ಲಿ ನಡೆದಿರುವ ಎರಡನೆ ಲಿವರ್ ಸ್ವಾಪ್ ಪ್ರಕರಣವಾಗಿದೆ.
ದೀಪ್ತಿ ನೈರೋಬಿ ಚಾನೆಲ್‌ನ ಪ್ರಸಿದ್ದ ಸುದ್ದಿ ವಾಚಕಿ.2014ರಲ್ಲಿ ಆಕೆಯ ಲಿವರ್‌ಗೆ ಕ್ಯಾನ್ಸರ್ ಬಾಧಿಸಿರುವುದು ಬೆಳಕಿಗೆ ಬಂದಿತ್ತು. 2015ರಲ್ಲಿ ರೋಗ ಉಲ್ಬಣಗೊಂಡಿತ್ತು. ಅವರಿಗೆ ಲಿವರ‍್ ಕಸಿ ಮಾಡದೆ ಬೇರೆ ದಾರಿ ಇರಲಿಲ್ಲ. ಮೊದಲ ಹಂತ ಚಿಕಿತ್ಸೆ ನಡೆದ ಬಳಿಕ ಲಿವರ್ ದಾನಿಗಳಿಗಾಗಿ ಹುಡುಕಾಟ ಆರಂಭಗೊಂಡಿತು. ಪತಿ ಮುಹಮ್ಮದ್ ಪತ್ನಿಗೆ ತನ್ನ ಲಿವರ್ ನ ಭಾಗವನ್ನು ದಾನ ಮಾಡಲು ತಯಾರಾಗಿದ್ದರು. ಆದರೆ ರಕ್ತದ ಗುಂಪು ಬೇರೆಯಾಗಿರುವ ಕಾರಣದಿಂದ ಮುಹಮ್ಮದ್‌ಗೆ ಪತ್ನಿಗೆ ಲಿವರ‍್ ಭಾಗ ದಾನ ಮಾಡಲು ಸಾಧ್ಯವಿಲ್ಲ. ಇದೇ ವೇಳೆ ನೈರೋಬಿ ಚಾನೆಲ್ ದೀಪ್ತಿಯ ಚಿಕಿತ್ಸೆಗೆ ನೆರವು ನೀಡುವಂತೆ ಪ್ರಕಟಣೆ ನೀಡಿತು. ಇಪ್ಪತ್ತನಾಲ್ಕು ಗಂಟೆಯೊಳಗೆ ಎಂಟು ಮಿಲಿಯನ್ ಕೀನ್ಯಾದ ಶಿಲ್ಲಿಂಗ್ ನೆರವು ಹರಿದು ಬಂತು.
ಇದೇ ವೇಳೆ ಬಾಲು ಅವರನ್ನು ಮೀನಾ ಪುಣೆಯ ಗ್ಲೋಬಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೀನಾಗೆ ತನ್ನ ಪತಿಯ ಜೀವವನ್ನು ಉಳಿಸಲು ಲಿವರ‍್ನ ಭಾಗ ದಾನ ಮಾಡಲು ಸಾಧ್ಯವಿಲ್ಲ. ಮೀನಾ ಮತ್ತು ಮುಹಮ್ಮದ್ ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರು. ವಿವರವಾದ ರಕ್ತ ಪರೀಕ್ಷೆ ನಡೆಸಿದ ಬಳಿಕ ಮೀನಾ ಮತ್ತು ಮುಹಮ್ಮದ್ ಅವರಿಗೆ ಸ್ವಾಪ್ ದಾನಿಗಳಾಗಲು ಸಾಧ್ಯ ಎಂಬ ವಿಚಾರವನ್ನು ವೈದ್ಯರು ತಿಳಿಸಿದರು.ಎರಡೂ ಕುಟುಂಬಗಳು ಲಿವರ‍್ ಸ್ವಾಪ್‌ಗೆ ಒಪ್ಪಿಕೊಂಡಿತು.
2009ರಲ್ಲಿ ಇದೇ ರೀತಿ ದಿಲ್ಲಿಯಲ್ಲಿ ಎರಡು ಕುಟುಂಬಗಳು ಲಿವರ‍್ ಕಸಿ ಚಿಕಿತ್ಸೆಗಾಗಿ ವಿನಿಮಯ ಮಾಡಿಕೊಂಡಿತ್ತು.