ಸರ್ವಾಧಿಕಾರಿಯಾಗಲು ಪ್ರಜಾಸತ್ತೆಯನ್ನೇ ಬಳಸಿಕೊಂಡ ಹಿಟ್ಲರ್
ವಾಕ್ ಸ್ವಾತಂತ್ರ ಕಾಪಾಡಲು ನಿರಂತರ ನಿಗಾ ಅಗತ್ಯ: ಕಮಲ್ ಹಾಸನ್
ಬಾಸ್ಟನ್, ಫೆ. 8: ಜರ್ಮನಿಯಲ್ಲಿ ಹಿಟ್ಲರ್‌ನ ಆಧಿಪತ್ಯ ಮತ್ತು ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಸಾಮಾನ್ಯ ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಂದಲೇ ಸಂಭವಿಸಿದವು ಎಂಬುದನ್ನು ಸ್ಮರಿಸಿಕೊಂಡ ನಟ ಕಮಲ್‌ಹಾಸನ್, ಪ್ರಜಾಸತ್ತೆಯೊಂದರಲ್ಲಿ ವಾಕ್ ಸ್ವಾತಂತ್ರವನ್ನು ಕಾಪಾಡಿಕೊಂಡು ಬರಲು ''ನಿರಂತರ ಎಚ್ಚರಿಕೆ''ಯ ಅಗತ್ಯವಿದೆ ಎಂದರು.
''ವಾಕ್ ಸ್ವಾತಂತ್ರ ಇರುವ ಏಕೈಕ ಕ್ಷೇತ್ರವೆಂದರೆ ಪ್ರಜಾಪ್ರಭುತ್ವ ಎಂಬುದಾಗಿ ಸಾಮಾನ್ಯವಾಗಿ ಹೇಳಲಾಗುತ್ತಿದೆ. ಅದು ನಿರಂತರ ಪ್ರಕ್ರಿಯೆಯಾಗಿದೆ. ಅದನ್ನು ರಕ್ಷಿಸಲು ನಿರಂತರ ಎಚ್ಚರಿಕೆ ಅಗತ್ಯವಾಗಿದೆ'' ಎಂದು ಶನಿವಾರ ನಡೆದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಾರ್ಷಿಕ ಭಾರತ ಸಮ್ಮೇಳನದಲ್ಲಿ ಅವರು ಹೇಳಿದರು. ''ವಾಕ್ ಸ್ವಾತಂತ್ರವನ್ನು ನಾವು ನಿರ್ಲಕ್ಷಿಸಬಾರದು ಹಾಗೂ ಪ್ರಜಾಪ್ರಭುತ್ವ ಎಂದರೆ ವಾಕ್ ಸ್ವಾತಂತ್ರ ಎಂಬುದಾಗಿ ಭಾವಿಸಬಾರದು ಎಂಬುದನ್ನು ನಾನು ಹೇಳುತ್ತಾ ಬಂದಿದ್ದೇನೆ'' ಎಂದು 'ವಿಶ್ವರೂಪಂ' ನಟ ನುಡಿದರು.
ಆದಾಗ್ಯೂ, ತಾನು ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಾಸ್ತವವಾಗಿ ತನಗೆ ಈ ಬಗ್ಗೆ ಹೆಮ್ಮೆಯಿದೆ ಹಾಗೂ ಇದರಲ್ಲಿ ದೇಶ ಇಡೀ ವಿಶ್ವಕ್ಕೆ ಮಾದರಿಯಾಗಬೇಕು ಎಂದು ಬಯಸುತ್ತೇನೆ ಎಂದರು.''ರಾಜಕೀಯದಲ್ಲಿ ಧರ್ಮ ಬೆರೆಸುವುದು'' ಆರೋಗ್ಯಕರವಲ್ಲ ಎಂದು ಕಮಲ್‌ಹಾಸನ್ ಅಭಿಪ್ರಾಯಪಟ್ಟರು.
''ಪ್ರಜಾಪ್ರಭುತ್ವದಲ್ಲಿ ಧರ್ಮ ಬೆರೆಸುವವರು, ವಾಕ್ ಸ್ವಾತಂತ್ರಕ್ಕೆ ಇರುವ ಏಕೈಕ ಭರವಸೆ ಇದುವೇ ಎಂಬುದಾಗಿ ನಮ್ಮನ್ನು ನಂಬಿಸಲು ಹೊರಟಿದ್ದಾರೆ. ಆಳ್ವಿಕೆ ನಡೆಸುವ ರಾಜಕೀಯ ಪ್ರಭುತ್ವವೇ ಬೇರೆ, ವಾಕ್ ಸ್ವಾತಂತ್ರವೇ ಬೇರೆ ಎಂದು ಓರ್ವ ಕಲಾವಿದನಾಗಿ ನಾನು ಭಾವಿಸುತ್ತೇನೆ'' ಎಂದರು.