ಮೇಕ್ ಇನ್ ಇಂಡಿಯಾ-ಹೇಟ್ ಇನ್ ಇಂಡಿಯಾ ಜತೆಯಾಗಿ ಸಾಗದು: ಶಶಿ ತರೂರ್
ಬಾಸ್ಟನ್,ಫೆ.8: 'ಮೇಕ್ ಇನ್ ಇಂಡಿಯಾ' ದಂತಹ ನೀತಿಗಳು ಮತ್ತು ದ್ವೇಷ ಜೊತೆಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮೋದಿ ಸರಕಾರವನ್ನು ಕುಟುಕಿರುವ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು,ಆಡಳಿತ ಪಕ್ಷದ ಸದಸ್ಯರಿಂದ ಅಲ್ಪಸಂಖ್ಯಾತರ ವಿರುದ್ಧ ಅವಮಾನಕಾರಿ ಹೇಳಿಕೆಗಳು ತನ್ನ ಅನುನಯದ ಮೂಲಕ ಇತರ ರಾಷ್ಟ್ರಗಳ ಮೇಲೆ ಪ್ರಭಾವ ಬೀರುವ ದೇಶದ ಸಾಮರ್ಥ್ಯವನ್ನು ಕುಂದಿಸುತ್ತವೆ ಅಷ್ಟೇ ಎಂದು ಹೇಳಿದರು. ಮೂಲಸೌಕರ್ಯ ಮತ್ತು ತಯಾರಿಕೆ ಕ್ಷೇತ್ರಗಳ ನಿರ್ಮಾಣ ಮತ್ತು ಆಧುನೀಕರಣದಲ್ಲಿ ಮುಖ್ಯ ಪಾತ್ರ ವಹಿಸುವ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಲು ದೇಶದ ಬಹುತ್ವವಾದ ಗುಣವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಹಾರ್ವರ್ಡ್ ವಿವಿಯ ವಾರ್ಷಿಕ ಭಾರತೀಯ ಸಮ್ಮೇಳನದಲ್ಲಿ ಮುಖ್ಯಭಾಷಣವನ್ನು ಮಾಡುತ್ತಿದ್ದ ಅವರು,ಭಾರತವು ವಿಶ್ವದಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ತನ್ನ ಅನುನಯ ಶಕ್ತಿಯ ಪ್ರಭಾವ ಬೀರಲು ಯತ್ನಿಸುವ ಮುನ್ನ ಆಂತರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.
ಪ್ರಗತಿಯೇನೋ ಆಗುತ್ತಿದೆ,ಆದರೆ ಅದು ಪ್ರತಿಯೊಬ್ಬರನ್ನೂ ತಲುಪುತ್ತಿಲ್ಲ ಎಂದ ಅವರು,ಒಂದೆಡೆ ನಾವು ಮೇಕ್ ಇನ್‌ಇಂಡಿಯಾ, ಸ್ಟಾರ್ಟ್‌ಪ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಎಂದು ಹೇಳಿಕೊಂಡು ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಬಯಸುತ್ತಿದ್ದೇವೆ. ಆದರೆ ಇದೇ ವೇಳೆ ಭಾರತದಲ್ಲಿ ಹೆಡೆಯೆತ್ತುತ್ತಿರುವ ದ್ವೇಷಭಾವನೆಗಳನ್ನು ಕಡೆಗಣಿಸುತ್ತಿದ್ದರೆ ನಾವು ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಸಾಧ್ಯವಿಲ್ಲ ಎಂದು ನರೇಂದ್ರ ಮೋದಿ ಸರಕಾರದ ಮುಂಚೂಣಿ ಯೋಜನೆಗಳನ್ನು ಪ್ರಸ್ತಾಪಿಸುತ್ತ ಹೇಳಿದರು.
ಆಡಳಿತ ಪಕ್ಷದ ಸದಸ್ಯರು ಅಲ್ಪಸಂಖ್ಯಾತರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡುವುದು ಒಳ್ಳೆಯದಲ್ಲ. ಅವು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ದೇಶದ ಸಾಮರ್ಥ್ಯವನ್ನು ಕುಂದಿಸುತ್ತವೆ ಎಂದರು.
ಪ್ರತಿಯೊಬ್ಬ ವ್ಯಕ್ತಿಯನ್ನೂ ಸಮಾನವಾಗಿ ಕಾಣುವ ಭಾರತವು ಆತ ಮುಸ್ಲಿಮ್ ಅಥವಾ ಕಾಯಸ್ಥ ಬ್ರಾಹ್ಮಣ ಅಥವಾ ಬೇರೆ ಇನ್ಯಾರೇ ಆಗಿರಲಿ. ಪ್ರತಿಯೊಬ್ಬರಿಗೂ ಸುರಕ್ಷಿತವಾಗಿರುತ್ತದೆ ಎಂದು ಅವರು ಹೇಳಿದರು.
ಭಾರತವು ವಿಶ್ವಕ್ಕೆ ಆಕರ್ಷಕ ತಾಣವಾಗಿ ಉಳಿಯಬೇಕಾದರೆ ಅದು ತನ್ನ ಬಹುಮೂಲ್ಯವಾದ ಅನೇಕತ್ವವನ್ನು ಸಾಮಾಜಿಕ ಆಸ್ತಿಯಂತೆ ರಕ್ಷಿಸಬೇಕಾಗುತ್ತದೆ ಎಂದರು.
ದಿಲ್ಲಿಯ ರಸ್ತೆಗಳಲ್ಲಿ ಮಹಿಳೆಯರ ಮೇಲೆ ದಾಳಿಗಳು ನಡೆಯುವುದು ಒಳ್ಳೆಯದಲ್ಲ. ತಾವು ಇಂದು ಭಾರತದಲ್ಲಿ ಮುಸ್ಲಿಮರಾಗಿರುವ ಬದಲು ಗೋವುಗಳಾಗಿದ್ದರೆ ಸುರಕ್ಷಿತವಿರುತ್ತಿದ್ದೆವು ಎಂದು ಕೆಲವರು ಭಯಪಡತೊಡಗಿದರೆ ಅದು ಒಳ್ಳೆಯ ಲಕ್ಷಣವಲ್ಲ ಎಂದು ತರೂರ್ ನುಡಿದರು.
ದೇಶದಲ್ಲಿಯ ಅಸಹಿಷ್ಣುತೆಯ ಕೃತ್ಯಗಳಿಂದಾಗಿ ತನ್ನ ಹೂಡಿಕೆದಾರ ಸ್ನೇಹಿತರೋರ್ವರು ಭಾರತದಲ್ಲಿ ಹೂಡಿಕೆ ಮಾಡದಿರಲು ನಿರ್ಧರಿಸಿದರು ಎಂದು ಭಾರತೀಯ ವಿದ್ಯಾರ್ಥಿಗಳಿಗೆ ಅವರು ತಿಳಿಸಿದರು.
ಕಾಂಗ್ರೆಸ್ ನಾಯಕ ಶಶಿ ತರೂರ್ ಮೂಲಸೌಕರ್ಯ ಮತ್ತು ತಯಾರಿಕೆ ಕ್ಷೇತ್ರಗಳ ನಿರ್ಮಾಣ ಮತ್ತು ಆಧುನೀಕರಣದಲ್ಲಿ ಮುಖ್ಯ ಪಾತ್ರ ವಹಿಸುವ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಲು ದೇಶದ ಬಹುತ್ವವಾದ ಗುಣವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ.