ಕ್ರಿಮಿನಲ್ ಆಡನ್ನು ಬಂಧಿಸುವಂತೆ ಪೊಲೀಸರಿಗೆ ಜಿಲ್ಲಾಧಿಕಾರಿಯ ಆದೇಶ !

Update: 2016-02-09 11:56 GMT

ಕೊರೆಯ , ಛತ್ತೀಸ್ ಗಡ, ಫೆ. 9 : ನಿನ್ನೆ ಇಲ್ಲಿನ ಜಿಲ್ಲಾಧಿಕಾರಿಯ ನಿವಾಸದಲ್ಲಿರುವ ಉದ್ಯಾನವನಕ್ಕೆ ಕಾನೂನುಬಾಹಿರವಾಗಿ ನುಗ್ಗಿದ ಆರೋಪದ ಮೇಲೆ ಬಂಧಿಸಲಾದ  ಆಡೊಂದಕ್ಕೆ (?!) ಇಂದು ಇಲ್ಲಿನ ನ್ಯಾಯಾಲಯ ಜಾಮೀನು ನೀಡಿದೆ. ಆಡಿನ ಜೊತೆ ಅದರ ಮಾಲಕನ ಮೇಲೂ ಪ್ರಕರಣ ದಾಖಲಾಗಿದ್ದು ಅಪರಾಧ ಸಾಬೀತಾದರೆ ಅವರಿಬ್ಬರಿಗೂ ಎರಡರಿಂದ ಏಳು ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ !.

ಇಲ್ಲಿನ ಕೊರೆಯ ಜಿಲ್ಲೆಯ ಜಿಲ್ಲಾಧಿಕಾರಿ ಹೇಮಂತ್ ರಾತ್ರೆ ಅವರ ಉದ್ಯಾನವನದ ಉಸ್ತುವಾರಿ ನೀಡಿರುವ ದೂರಿನ ಆಧಾರದಲ್ಲಿ " ಇನ್ನೂ ಹೆಸರಿಡದ" ಆಡು ಹಾಗು ಅದರ ಮಾಲಕ ಅಬ್ದುಲ್ ಹಸನ್ ಅವರನ್ನು ಬಂಧಿಸಲಾಗಿದೆ. 

ಆಡಿನ ಮೇಲೆ ಪೊಲೀಸರು ಗಂಭೀರ ಆರೋಪ ಹೊರಿಸಿದ್ದಾರೆ. ಜಿಲ್ಲಾಧಿಕಾರಿಯ ಮನೆಗೆ ಕಬ್ಬಿಣದ ಗೇಟ್ ಇದ್ದರೂ ಅದನ್ನು ಹಾರಿ ಒಳಗೆ ಹೋಗುವ ಈ ಆಡು " ತನ್ನ ಅಪರಾಧ ಪುನರಾವರ್ತಿಸುತ್ತಿದೆ " ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ಆರ್ ಪಿ ಶ್ರೀವಾಸ್ತವ ಹೇಳಿದ್ದಾರೆ. 

" ಈ ಹಿಂದೆ ಆಡು ಹಾಗು ಅದರ ಮಾಲಕನಿಗೆ ಹಲವು ಬಾರಿ ಹೇಳಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಅವರ ಮೇಲೆ ದೂರು ದಾಖಲಿಸಿದ್ದರಿಂದ ನಾವು ಅವರನ್ನು (ಆಡು ಮತ್ತು ಮಾಲಕ ) ಬಂಧಿಸಿದೆವು  ಎಂದು ಪೊಲೀಸರು ತಿಳಿಸಿದ್ದಾರೆ. 

ಅಕ್ರಮವಾಗಿ ಪ್ರವೇಶಿಸುವುದು , ಅಲ್ಲಿರುವ ಸಸ್ಯಗಳು, ತರಕಾರಿಗಳನ್ನು ತಿನ್ನುವುದು ಸೇರಿದಂತೆ ಇತರ ಕೆಲವು ಕೃತ್ಯಗಳು ಆಡಿನ " ಕ್ರಿಮಿನಲ್ ದಾಖಲೆಯಲ್ಲಿ " ಸೇರಿವೆ. ಜಿಲ್ಲಾಧಿಕಾರಿಯೇ ಆಡಿನ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ  ಆದೇಶ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಆಡಿನ ಮಾಲಕನಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News